Asianet Suvarna News Asianet Suvarna News

ಜಾರ್ಖಂಡ್‌ ಸಿಎಂ ಹೇಮಂತ್‌ ಸೊರೇನ್‌ ಶಾಸಕ ಸ್ಥಾನದಿಂದ ಅಮಾನತ್ತು ಸಾಧ್ಯತೆ; ಬಿಜೆಪಿ ವಿರುದ್ಧ ಆಕ್ರೋಶ

Hemant Soren ECI Report: ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ರಾಜಕೀಯ ಭವಿಷ್ಯ ಕೇಂದ್ರ ಚುನಾವಣಾ ಆಯೋಗ ನೀಡಿರುವ ವರದಿಯ ಮೇಲೆ ನಿಂತಿದೆ. ಅಧಿಕಾರ ದುರ್ಬಳಕೆ ಪ್ರಕರಣದಲ್ಲಿ ಸೊರೇನ್‌ರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಲು ಆಯೋಗ ಶಿಫಾರಸು ಮಾಡಿದೆ ಎನ್ನಲಾಗಿದೆ.

Hemant soren likely to be ousted by election commission of india
Author
First Published Aug 25, 2022, 2:21 PM IST

ರಾಂಚಿ: ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಗುರುವಾರ ಪ್ರತಿಕ್ರಿಯೆ ನೀಡಿದ್ದು ಕೇಂದ್ರ ಚುನಾವಣಾ ಆಯೋಗದಿಂದ ಯಾವುದೇ ಮಾಹಿತಿ ಇದುವರೆಗೂ ಬಂದಿಲ್ಲ ಎಂದಿದ್ದಾರೆ. ಮಾಧ್ಯಮಗಳಲ್ಲಿ ಹೇಮಂತ್‌ ಸೊರೇನ್‌ ಅವರನ್ನು ಶಾಸಕ ಸ್ಥಾನದಿಂದ ಚುನಾವಣಾ ಆಯೋಗ ಅಮಾನತು ಮಾಡಲಿದೆ ಎಂದು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು ಇದು ಬಿಜೆಪಿ ಡ್ರಾಫ್ಟ್‌ ಮಾಡಿರುವ ವರದಿ ಎಂದಿದ್ದಾರೆ. ಚುನಾವಣಾ ಆಯೋಗ ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು ಸಲ್ಲಿಸಿದೆ, ಮುಚ್ಚಿದ ಲಕೋಟೆಯಲ್ಲಿ ಏನಿದೆ ಎಂಬುದು ಮಾಧ್ಯಮಕ್ಕೆ ಹೇಗೆ ತಿಳಿಯುತ್ತದೆ. ಬಿಜೆಪಿ ಪಕ್ಷ ತನಗೆ ಬೇಕಾದಂತೆ ತನ್ನ ಮಾತು ಕೇಳುವ ಮಾಧ್ಯಮಗಳ ಮೂಲಕ ಈ ರೀತಿ ಹಬ್ಬಿಸುತ್ತಿದೆ ಎಂದು ಸೊರೇನ್‌ ಆರೋಪ ಮಾಡಿದ್ದಾರೆ. ಬಿಜೆಪಿ ಈ ಹಿಂದೆ ಸೊರೇನ್‌ ಅಧಿಕಾರ ದುರ್ಬಳಕೆ ಮಾಡಿಕೊಂಡು ತಮಗೇ ಗಣಿಗಾರಿಕೆಯ ಅನುಮತಿಯನ್ನು ಪಡೆದುಕೊಂಡಿದ್ದಾರೆ ಎಂದು ಆರೋಪಿಸಿತ್ತು. ಈ ಆರೋಪದ ಬೆನ್ನಲ್ಲೇ ಕಚೇರಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ವಜಾಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಕೋರಿತ್ತು. ಚುನಾವಣಾ ಆಯೋಗ ಈಗ ತನಿಖೆ ನಡೆಸಿ ಮುಚ್ಚಿದ ಲಕೋಟೆಯಲ್ಲಿ ತನ್ನ ವರದಿ ನೀಡಿದೆ. 

ಬಿಜೆಪಿ ಜಾರ್ಖಂಡ್‌ ಸಂಸದ ನಿಶಿಕಾಂತ್‌ ದುಬೇ ಪತ್ರಿಕಾಗೋಷ್ಠಿ ನಡೆಸಿ ಜಾರ್ಖಂಡ್‌ ಸರ್ಕಾರವನ್ನು ಶೀಘ್ರವೇ ವಜಾಗೊಳಿಸಬೇಕು. ನೈತಿಕ ಆಧಾರದ ಮೇಲೆ ಸದನವನ್ನು ವಜಾಗೊಳಿಸಿ ಮಧ್ಯಂತರ ಚುನಾವಣೆ ಎದುರಿಸಲು ಸೊರೇನ್‌ ಮುಂದಾಗಬೇಕು. ಜಾರ್ಖಂಡ್‌ನ ಎಲ್ಲಾ 81 ಕ್ಷೇತ್ರಗಳಲ್ಲೂ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದ್ದರು. ಇದೀಗ ಚುನಾವಣಾ ಆಯೋಗದ ವರದಿಯಲ್ಲಿ ಏನಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. 

ಚುನಾವಣಾ ಆಯೋಗ ಆರೋಪಕ್ಕೆ ಕುರಿತಾಗಿ ತನಿಖೆಯನ್ನು ನಡೆಸಿ ಎಲ್ಲಾ ಆಯಾಮಗಳಲ್ಲೂ ವಿಚಾರಣೆ ನಡೆಸಿದೆ. ಆಯೋಗ ಈ ಸಂಬಂಧ ವರದಿಯೊಂದನ್ನು ರಚಿಸಿದ್ದು ರಾಜ್ಯಪಾಲರಿಗೆ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದೆ. ಆದರೆ ವರದಿ ಇದುವರೆಗೂ ಸಾರ್ವಜನಿಕರಿಗೆ ಲಭ್ಯವಾಗಿಲ್ಲ. ಕೆಲವು ಮಾಧ್ಯಮಗಳು ಉನ್ನತ ಮೂಲಗಳ ಮಾಹಿತಿಯ ಅನ್ವಯ ಎಂದು ಹೇಮಂತ್‌ ಸೊರೇನ್‌ ಶಾಸಕ ಸ್ಥಾನದಿಂದ ವಜಾಗೊಳಿಸಿ ಆಯೋಗ ಶಿಫಾರಸ್ಸು ಮಾಡಿದೆ ಎಂದು ವರದಿ ಮಾಡುತ್ತಿವೆ. ಬಿಜೆಪಿಗರು ಕೂಡ ಇದನ್ನೇ ಮುಂದಿಟ್ಟುಕೊಂಡು ಹೇಮಂತ್‌ ಸೊರೇನ್‌ ತಲೆದಂಡವಾಗಲಿದೆ ಎನ್ನುತ್ತಿದ್ದಾರೆ. 

ಇದನ್ನೂ ಓದಿ: ಜಾರ್ಖಂಡ್ ಅಕ್ರಮ ಗಣಿಗಾರಿಕೆ ಪ್ರಕರಣ: ಸಿಎಂ ಸಹಾಯಕನ ನಿವಾಸದಲ್ಲಿ 2 ಎಕೆ-47, 60 ಬುಲೆಟ್‌ ವಶಕ್ಕೆ..!

ಬಿಜೆಪಿ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯಪಾಲರು ಪ್ರಕರಣದ ವಿಚಾರಣೆಯನ್ನು ಚುನಾವಣಾ ಆಯೋಗಕ್ಕೆ ನೀಡಿತ್ತು. ಜನಪ್ರತಿನಿಧಿಗಳ ಕಾಯ್ದೆ 1951ರ ವಿರುದ್ಧವಾಗಿ ಹೇಮಂತ್‌ ಸೊರೇನ್‌ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಸಂವಿಧಾನದ ಪ್ರಕಾರ ಈ ರೀತಿಯ ಪ್ರಕರಣಗಳಲ್ಲಿ ಚುನಾವಣಾ ಆಯೋಗ ತಳೆಯುವ ನಿರ್ಧಾರವನ್ನೇ ರಾಜ್ಯಪಾಲರು ಎತ್ತಿ ಹಿಡಿಯಬೇಕು. ಈ ಪ್ರಕರಣದಲ್ಲಿ ಆಯೋಗ ಯಾವ ರೀತಿಯ ನಿರ್ಧಾರವನ್ನು ವರದಿಯಲ್ಲಿ ತಿಳಿಸಿದೆ ಎಂಬುದರ ಮೇಲೆ ಇದೇ ಕಾರಣಕ್ಕಾಗಿ ಕುತೂಹಲ ಹೆಚ್ಚಾಗಿದೆ. 

ಇದನ್ನೂ ಓದಿ: ಜಾರ್ಖಂಡ್ ಸಿಎಂ ಆಗಿ ಸೊರೇನ್‌ ಶಪಥ: ಕುಮಾರಸ್ವಾಮಿಗೆ ಆಹ್ವಾನ

ಇದೇ ಸೋಮವಾರ ಚುನಾವಣಾ ಆಯೋಗ ಪ್ರಕರಣದ ಅಂತಿಮ ವಿಚಾರಣೆಯನ್ನು ಪೂರ್ಣಗೊಳಿಸಿದೆ. ಮಂಗಳವಾರ ಪ್ರಕರಣ ಸಂಬಂಧ ವರದಿಯನ್ನು ರಾಜ್ಯಪಾಲ ರಮೇಶ್‌ ಬಾಯಿಸ್‌ರಿಗೆ ಕಳಿಸಲಾಗಿದೆ. ಬುಧವಾರ ರಾಜ್ಯಪಾಲರ ಕೈಗೆ ಪತ್ರ ತಲುಪಿರುವ ಸಾಧ್ಯತೆಯಿದೆ. ರಾಜ್ಯಪಾಲರು ಪತ್ರದ ಸಂಬಂಧ ಯಾವುದೇ ರೀತಿಯ ಪ್ರಕಟಣೆಯನ್ನೂ ಇದುವರೆಗೂ ಹೊರಡಿಸಿಲ್ಲ. ಇಂದು ಸಂಜೆಯೊಳಗೆ ರಾಜ್ಯಪತಿಗಳ ಕಚೇರಿಯಿಂದ ಅಧಿಕೃತ ಪ್ರತಿಕ್ರಿಯೆ ಹೊರ ಬೀಳುವ ಸಾಧ್ಯತೆಯಿದೆ. 
ವಾದ ಪ್ರತಿವಾದಗಳ ವೇಳೆ ಹೇಮಂತ್‌ ಸೊರೇನ್‌ ಕಡೆಯ ವಕೀಲರು ತಮ್ಮ ವಾದ ಮಂಡನೆ ಆಗಸ್ಟ್‌ 12ರಂದು ಪೂರ್ಣಗೊಳಿಸಿದೆ. ಇದಾದ ನಂತರ ಆಗಸ್ಟ್‌ 18ರಂದು ಬಿಜೆಪಿ ಮತ್ತೊಂದು ಮನವಿಯನ್ನು ಸಲ್ಲಿಸಿತ್ತು. ಎರಡೂ ಪಕ್ಷಗಳು ತಮ್ಮ ಕಡೆಯ ಸ್ಪಷ್ಟೀಕರಣವನ್ನು ಲಿಖಿತ ರೂಪದಲ್ಲಿ ಈಗಾಗಲೇ ನೀಡಿದೆ. 

Follow Us:
Download App:
  • android
  • ios