ದೆಹಲಿ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ನಿರ್ಮಾ ಜಾಹೀರಾತು ಹಾಡಿಗೆ ಬಿಜೆಪಿ ಹೋಲಿಕೆ ಮಾಡಿ ಹಲವು ಮೀಮ್ಸ್ ಹರಿದಾಡುತ್ತಿದೆ. ಬಿಜೆಪಿ ನಾಯಕಿಯರ ಹೆಸರು ಹಾಗೂ ಜಾಹೀರಾತು ಸಾಲುಗಳನ್ನು ಮೂಲವಾಗಿಟ್ಟುಕೊಂಡು ಮೀಮ್ಸ್ ಮಾಡಲಾಗಿದೆ.
ನವದೆಹಲಿ(ಫೆ.20) ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇಂದು ದೆಹಲಿ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ದೆಹಲಿಯ ನಾಲ್ಕನೇ ಮಹಿಳಾ ಮುಖ್ಯಮಂತ್ರಿ ಅನ್ನೋ ಹೆಗ್ಗಳಿಕೆಗೆ ರೇಖಾ ಗುಪ್ತ ಪಾತ್ರರಾಗಿದ್ದಾರೆ. ದೆಹಲಿ ಬಿಜೆಪಿ ಸರ್ಕಾರದ ಪ್ರಮಾಣವಚನ ಸ್ವೀಕಾರದ ಬೆನ್ನಲ್ಲೇ ಹಲವು ಮೀಮ್ಸ್ ಹರಿದಾಡುತ್ತಿದೆ. ಈ ಪೈಕಿ ಜನಪ್ರಿಯ ನಿರ್ಮಾ ಜಾಹೀರಾತಿನ ಹಾಡನ್ನು ಬಿಜೆಪಿ ನಾಯಕರಿಗೆ ಹೋಲಿಕೆ ಮಾಡುತ್ತಾ ಮೀಮ್ಸ್ ಹರಿಬಿಡಲಾಗಿದೆ. ಇದು ಭಾರಿ ಸದ್ದು ಮಾಡುತ್ತಿದೆ. ಹೇಮಾ, ರೇಖಾ, ಜಯ ಹಾಗೂ ಸುಷ್ಮಾ ಎಲ್ಲರ ನೆಚ್ಚಿನ ಭಾಜಪ ಎಂದು ಮೀಮ್ಸ್ ಮಾಡಲಾಗಿದೆ.
ನಿರ್ಮಾ ಜಾಹೀರಾತಿನಲ್ಲಿ ಭಾರತೀಯ ಮಹಿಳೆಯರ ನೆಚ್ಚಿನ ವಾಷಿಂಗ್ ಪೌಡರ್ ಅನ್ನೋದು ತಿಳಿಸಲು ಹೇಮಾ, ರೇಖಾ, ಜಯ ಹಾಗೂ ಸಷ್ಮಾ ಎಲ್ಲರ ನೆಚ್ಚಿನ ನಿರ್ಮಾ ಎಂದು ಸಾಲುಗಳನ್ನು ಬರೆಯಲಾಗಿದೆ. ಇದೀಗ ಇದೇ ಸಾಲುಗಳು ಬಿಜೆಪಿ ನಾಯಕರಿಗೆ ಹೋಲಿಕೆಯಾಗುತ್ತಿದೆ. ಸಂಸದೆ ಹೇಮಾ ಮಾಲಿನಿ, ಇದೀಗ ದೆಹಲಿ ನೂತನ ಮುಖ್ಯಮಂತ್ರಿಯಾಗಿರುವ ರೇಖಾ, ಬಿಜೆಪಿ ಮಾಜಿ ರಾಜ್ಯಸಭಾ ಸಂಸದೆ ಜಯಪ್ರದಾ ಹಾಗೂ ಬಿಜೆಪಿ ಮಾಜಿ ಸಿಎಂ, ಕೇಂದ್ರ ವಿದೇಶಾಂಗ ಮಾಜಿ ಸಚಿವೆ ದಿವಗಂತ ಸುಷ್ಮಾ ಸ್ವರಾಜ್ ಈ ನಾಯಕಿಯರ ಹೆಸರು ಈ ಜಾಹೀರಾತಿನ ಸಾಲಿಗೆ ಹೊಂದಿಕೊಳ್ಳುತ್ತಿದೆ. ಇವರೆಲ್ಲರ ನೆಚ್ಚಿನ ಭಾಜಪ( ಭಾರತೀಯ ಜನತಾ ಪಾರ್ಟಿ) ಎಂದು ಮೀಮ್ಸ್ ಮಾಡಲಾಗಿದೆ.
ದೆಹಲಿ ಸಿಎಂ ಆಗಿ ರೇಖಾ ಗುಪ್ತಾ ಪ್ರಮಾಣವಚನ ಸ್ವೀಕಾರ
ದೆಹಲಿ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಅಧಿಕಾರ ವಹಿಸಿಕೊಂಡಿದ್ದಾರೆ. ಪ್ರಮಾಣವಚನದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಹಾಗೂ NDA ಮುಖ್ಯಮಂತ್ರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ರಾಮಲೀಲಾ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ರೇಖಾ ಗುಪ್ತಾ ದೆಹಲಿ ಮುಖ್ಯಮಂತ್ರಿ ಹುದ್ದೆಗೆ ಪ್ರಮಾಣ ವಚನ ಸ್ವೀಕರಿಸಿದರು. ಅವರು ದೆಹಲಿಯ 9ನೇ ಮುಖ್ಯಮಂತ್ರಿಯಾದರು. ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (JP Nadda), ಗೃಹ ಸಚಿವ ಅಮಿತ್ ಶಾ (Amit Shah) ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಉಪಸ್ಥಿತರಿದ್ದರು.
ರೇಖಾ ಗುಪ್ತಾ ತಮ್ಮ ಭಾಷಣದಲ್ಲಿ ತಮ್ಮ ಪ್ರಮಾಣ ವಚನವನ್ನು ಮಹಿಳೆಯರಿಗೆ ಹೊಸ ಅಧ್ಯಾಯ ಎಂದು ಬಣ್ಣಿಸಿದರು. ಅವರು ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು ಮತ್ತು ಹೇಳಿದರು: ನಾನು ಮುಖ್ಯಮಂತ್ರಿಯಾಗಲು ಸಾಧ್ಯವಾದರೆ, ಅದು ಎಲ್ಲಾ ಮಹಿಳೆಯರಿಗೆ ದಾರಿ ತೆರೆಯುತ್ತದೆ. ಯಾರು ಭ್ರಷ್ಟರಾಗಿದ್ದಾರೋ ಅವರು ಪ್ರತಿಯೊಂದು ಪೈಸೆಯ ಲೆಕ್ಕವನ್ನು ನೀಡಬೇಕಾಗುತ್ತದೆ. ನಮ್ಮ ಪಕ್ಷವು ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ನಮ್ಮ ತಂಡದ ಎಲ್ಲಾ 48 ಶಾಸಕರು ಒಟ್ಟಾಗಿ ಕೆಲಸ ಮಾಡುವುದು ಎರಡನೇ ಆದ್ಯತೆಯಾಗಿದೆ.
ರೇಖಾ ಗುಪ್ತಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಬಿಜೆಪಿಯ ಆರು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದರಲ್ಲಿ ಪರವೇಶ್ ಸಾಹಿಬ್ ಸಿಂಗ್ (Parvesh Sahib Singh) ಉಪಮುಖ್ಯಮಂತ್ರಿ ಹುದ್ದೆಗೆ ಪ್ರಮಾಣ ವಚನ ಸ್ವೀಕರಿಸಿದರು. ಇದರಲ್ಲದೆ ಆಶಿಶ್ ಸೂದ್ (Ashish Sood), ಮಂಜಿಂದರ್ ಸಿಂಗ್ ಸಿರ್ಸಾ (Manjinder Singh Sirsa), ರವೀಂದರ್ ಇಂದ್ರರಾಜ್ ಸಿಂಗ್ (Ravinder Indraj Singh), ಕಪಿಲ್ ಮಿಶ್ರಾ (Kapil Mishra), ಪಂಕಜ್ ಕುಮಾರ್ ಸಿಂಗ್ (Pankaj Kumar Singh) ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರೇಖಾ ಗುಪ್ತಾ-ಮಮತಾ ಬ್ಯಾನರ್ಜಿ: ಭಾರತ ಕಂಡ 10 ಪ್ರಮುಖ ಮಹಿಳಾ ಮುಖ್ಯಮಂತ್ರಿಗಳು!
