ನವದೆಹಲಿ(ಮಾ.11): ಸರ್ಕಾರ ಆರಂಭಿಸಿರುವ ಐತಿಹಾಸಿಕ ಲಸಿಕೆ ಅಭಿಯಾನದಲ್ಲಿ ಜನಸಾಮಾನ್ಯರು ಪಾಲ್ಗೊಂಡು ಲಸಿಕೆ ಪಡೆಯಲು ಸಂಸದರು ಅಗತ್ಯ ನೆರವು ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಕರೆ ನೀಡಿದರು.

ಒಂದು ವರ್ಷದ ಬಳಿಕ ಆಯೋಜಿಸಿದ್ದ ಬಿಜೆಪಿಯ ಸಂಸದೀಯ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ನಾಗರಿಕರು ಲಸಿಕೆ ಪಡೆಯಲು ಲಸಿಕಾ ಕೇಂದ್ರಕ್ಕೆ ವಾಹನ ಸೌಲಭ್ಯ ಸೇರಿದಂತೆ ಸಾಧ್ಯವಾದಷ್ಟುನೆರವನ್ನು ಸಂಸದರು ಒದಗಿಸಬೇಕು ಎಂದರು.

ಇದೇ ವೇಳೆ ದೇಶವು 75ನೇ ಸ್ವಾತಂತ್ರ್ಯೋತ್ಸವಕ್ಕೆ ಅಣಿಯಾಗುತ್ತಿದ್ದು, ಈ ಅಮೃತಮಹೋತ್ಸವದ ಅದ್ಧೂರಿ ಆಚರಣೆಯಲ್ಲಿ ಭಾಗವಹಿಸಬೇಕು ಎಂದು ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದರು. ಹಾಗೆಯೇ ಅಮೃತ ಮಹೋತ್ಸವವನ್ನು ದೇಶದಾದ್ಯಂತ 75 ಕಡೆಗಳಲ್ಲಿ 75 ವಾರಗಳ ಕಾರ ಆಚರಿಸಲು ನಿರ್ಧರಿಸಲಾಗಿದೆ. ಮಾ.12ರಿಂದ ಗುಜರಾತಿನ ಸಬರಮತಿಯಿಂದಲೇ ಅದು ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು ಎಂದು ಸಂಸದೀಯ ಸಚಿವ ಪ್ರಹ್ಲಾದ್‌ ಜೋಶಿ ಅವರು ತಿಳಿಸಿದರು.