ನಾಲ್ವರಿದ್ದ ಹೆಲಿಕಾಪ್ಟರ್ ವಿದ್ಯಾರ್ಥಿಗಳಿದ್ದ ಶಾಲಾ ಮೈದಾನದಲ್ಲಿ ತುರ್ತು ಭೂಸ್ವರ್ಶ ಮಾಡಿದೆ. ತಾಂತ್ರಿಕ ಸಮಸ್ಯೆಯಿಂದ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿತ್ತು. ಭಯಾಕನ ವಿಡಿಯೋ ಸೆರೆಯಾಗಿದೆ.
ಪಾಲ್ಘರ್ (ಫೆ.12) ಏರ್ ಇಂಡಿಯಾ ಅಹಮ್ಮದಾಬಾದ್ ವಿಮಾನ ದುರಂತ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಲಘು ವಿಮಾನ ಪತನದ ಬಳಿಕ ವಾಯು ಪ್ರಯಾಣದಲ್ಲಿನ ತಾಂತ್ರಿಕ ದೋಷ ಆತಂಕ ಹೆಚ್ಚಿಸುತ್ತಿದೆ. ಇದೀಗ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ತರಬೇತಿ ಹೆಲಿಕಾಪ್ಟರ್ ಹಾರಾಟದ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಹೀಗಾಗಿ ಕೆಲ್ವೇ ಮೈದಾನದ ವಿದ್ಯಾ ವೈಭವ್ ಶಾಲಾ ಮೈದಾನದಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ವರ್ಶ ಮಾಡಲು ನಿರ್ಧರಿಸಿದ್ದಾರೆ. ಆದರೆ ಎಮರ್ಜೆನ್ಸಿ ಲ್ಯಾಂಡಿಂಗ್ ವೇಳೆ ಹೆಲಿಕಾಪ್ಟರ್ ನಿಯಂತ್ರಿಸಲು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಶಾಲಾ ಮಕ್ಕಳು ಮೈದಾನದಲ್ಲಿರುವಾಗಲೇ ಈ ಘಟನೆ ನಡೆದಿದೆ.
ಶಾಲಾ ಮಕ್ಕಳಿದ್ದ ಮೈದಾನದಲ್ಲಿ ಲ್ಯಾಂಡಿಂಗ್
ತರಬೇತಿ ಹೆಲಿಕಾಪ್ಟರ್‌ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ತುರ್ತು ಭೂಸ್ವರ್ಶ ಅನಿವಾರ್ಯವಾಗಿತ್ತು. ಹೀಗಾಗಿ ಬೇರೆ ದಾರಿ ಕಾಣದೆ ಕ್ಯಾಪ್ಟನ್ ಶಾಲಾ ಮೈದಾನದಲ್ಲಿ ಲ್ಯಾಂಡಿಂಗ್ ಮಾಡಿದ್ದಾರೆ. ಈ ವೇಳೆ ಶಾಲಾ ಮಕ್ಕಳು ಮೈದಾನದ ಅಂಚಿನಲ್ಲಿ ನಿಂತಿದ್ದರು. ಮೈದಾನದ ಮಧ್ಯ ಭಾಗದಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಲಾಗಿದೆ. ಲ್ಯಾಂಡಿಂಗ್ ವೇಳೆ ಪೈಲೆಟ್ ಪ್ರಯಾಸ ಪಟ್ಟಿದ್ದು ವಿಡಿಯೋದಲ್ಲಿ ಸೆರೆಯಾಗಿದೆ.
ಮಕ್ಕಳು ಮೈದಾನದಲ್ಲಿರುವಗಾಲೇ ಹೆಲಿಕಾಪ್ಟರ್ ಲ್ಯಾಂಡಿಂಗ್ ಆದ ಕಾರಣ ಇಡೀ ಮೈದಾನವೇ ಧೂಳಿನಿಂದ ತುಂಬಿ ಹೋಗಿತ್ತು. ವಿದ್ಯಾರ್ಥಿಗಳು ಪರದಾಡಿದರು. ಇದೇ ವೇಳೆ ಮಹಾ ದುರಂತವೊಂದು ತಪ್ಪಿದೆ. ಹೆಲಿಕಾಪ್ಟರ್ ಕೊನೆಗೂ ನಿಯಂತ್ರಣ ಮಾಡಿದ ಪೈಲೆಟ್ ಯಾವುದೇ ದುರಂತ ಸಂಭವಿಸಲು ಅವಕಾಶ ನೀಡಲಿಲ್ಲ.
ಮುಂಬೈನ ಜುಹುವಿನಿಂದ ಗುಜರಾತ್‌ನ ಸೂರತ್‌ಗೆ ಪ್ರಯಾಣ ಮಾಡುತ್ತಿದ್ದ ವೇಳೆ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಸೀನಿಯರ್ ಪೈಲೆಟ್, ತರಬೇತಿ ಪೈಲೆಟ್ ಹಾಗೂ ಟೆಕ್ನಿಕಲ್ ಎಂಜಿನಿಯರ್ ಸೇರಿ ನಾಲ್ವರು ಈ ಹೆಲಿಕಾಪ್ಟರ್‌ನಲ್ಲಿದ್ದರು. ಪ್ರಯಾಣದಲ್ಲಿ ಎಂಜಿನ್ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣವೇ ಅಲರ್ಟ್ ಆದ ಪೈಲೆಟ್ ತುರ್ತು ಭೂಸ್ಪರ್ಶ ಮಾಡಲು ಮುಂದಾಗಿದ್ದಾರೆ. ತುರ್ತು ಭೂಸ್ವರ್ಶ ಮಾಡಿದ ಪರಿಣಾಮ ನಾಲ್ವರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.


