* ಮಹಿಳೆಯರಲ್ಲಿ 0.42, ಪುರುಷರಲ್ಲಿ 1.10 ಸೆಂ.ಮೀನಷ್ಟುಎತ್ತರ ಇಳಿಕೆ* ಭಾರತದಲ್ಲಿ ವಯಸ್ಕರ ಎತ್ತರ ಕುಸಿತದ ದಿಕ್ಕು ಅಧ್ಯಯನದಲ್ಲಿ ಈ ಅಂಶ* ವ್ಯಕ್ತಿಯ ಎತ್ತರದ ಮೇಲೆ ಪರಿಸರ, ಸಾಮಾಜಿಕ, ಅನುವಂಶೀಯತೆ ಪರಿಣಾಮ* ಜೀವನ ಪದ್ಧತಿ, ಅಪೌಷ್ಠಿಕತೆ ಸೇರಿ ಇನ್ನಿತರ ವಿಚಾರಗಳು ಇದಕ್ಕೆ ಕಾರಣ
ನವದೆಹಲಿ(ಸೆ.29): ವಿಶ್ವಾದ್ಯಂತ ನಾಗರಿಕರ ಸರಾಸರಿ ಎತ್ತರ ಹೆಚ್ಚುತಲೇ ಇದೆ. ಆದರೆ ಭಾರತೀಯರ ಎತ್ತರ(Height) ಮಾತ್ರ ಕುಸಿಯುತ್ತಿದೆ ಎಂಬ ವಿಚಾರ ಅಧ್ಯಯನ ವರದಿಯಿಂದ ಬೆಳಕಿಗೆ ಬಂದಿದೆ. ಭಾರತದಲ್ಲಿ(India) ವಯಸ್ಕರ ಎತ್ತರ ಕುಸಿತದ ದಿಕ್ಕು(ಟ್ರೆಂಡ್ಸ್ ಆಫ್ ಅಡಲ್ಟ್ ಹೈಟ್ ಇನ್ ಇಂಡಿಯಾ) 1998-2015ರವರೆಗಿನ ಅಧ್ಯಯನದಿಂದ ಈ ವಿಚಾರ ಗೊತ್ತಾಗಿದೆ.
ದೇಶಾದ್ಯಂತ ಕಳೆದ ಕೆಲ ವರ್ಷಗಳಿಂದ 15-25 ವಯೋಮಾನದ ಮಹಿಳೆ(Female) ಮತ್ತು ಪುರುಷರ(Male) ಸರಾಸರಿ ಎತ್ತರವನ್ನು ಆಧರಿಸಿ ಈ ಅಧ್ಯಯನ ನಡೆಸಲಾಗಿದ್ದು, ಈ ಪ್ರಕಾರ ಮಹಿಳೆಯರ ಸರಾಸರಿ ಎತ್ತರ(Height) ಸುಮಾರು 0.42 ಸೆ. ಮೀಟರ್ ಮತ್ತು ಪುರುಷರ ಎತ್ತರ 1.10 ಸೆಂ. ಮೀಟರ್ ಇಳಿಕೆಯಾಗಿದೆ.
ಎತ್ತರ ಕುಸಿತದ ಮೇಲೆ ಪರಿಸರ ಮತ್ತು ಸಾಮಾಜಿಕ ಹಾಗೂ ಅನುವಂಶೀಯತೆ ಶೇ.60-80ರಷ್ಟುಪರಿಣಾಮ ಬೀರಲಿದೆ. ಅಲ್ಲದೆ ವ್ಯಕ್ತಿಯ ಎತ್ತರ ಬೆಳೆಯುವ ಸಾಮರ್ಥ್ಯ ಜತೆ ಪೌಷ್ಠಿಕಾಂಶವು ನಿಕಟ ಸಂಬಂಧ ಹೊಂದಿದ್ದು, ಬಾಲ್ಯಾವಸ್ಥೆ ಮತ್ತು ಯೌವನದಲ್ಲಿ ಕಂಡುಬರುವ ಅಪೌಷ್ಠಿಕಾಂಶದಿಂದ ವ್ಯಕ್ತಿ ನಿರೀಕ್ಷಿತ ಎತ್ತರ ಆಗಲ್ಲ ಎಂದು ಈ ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.
ಭಾರತೀಯ ಎತ್ತರ ಇಳಿಕೆಯಾಗಲು ಅನುವಂಶಿಕ ಕಾರಣವಷ್ಟೇ ಅಲ್ಲ. ಬದಲಾಗಿ ಭಾರತೀಯರು ಅನುಸರಿಸುವ ಜೀವನ ಪದ್ಧತಿ, ಪೌಷ್ಠಿಕತೆ, ಸಾಮಾಜಿಕ ಮತ್ತು ಆರ್ಥಿಕ ಉದ್ದೇಶಗಳು ಸೇರಿದಂತೆ ಇನ್ನಿತರ ಅನುವಂಶಿಕವಲ್ಲದ ಕಾರಣಗಳು ಇದಕ್ಕೆ ಕಾರಣವಾಗಿವೆ.
ವಿಶ್ವಾದ್ಯಂತ ಎಲ್ಲಾ ದೇಶಗಳ ಪ್ರಜೆಗಳ ಸರಾಸರಿ ಎತ್ತರವು ಹೆಚ್ಚುತ್ತಿದೆ. ಆದರೆ ಭಾರತೀಯರ ಎತ್ತರ ಮಾತ್ರವೇ ಕುಸಿಯುತ್ತಿರುವುದು ಭಾರತಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಅಲ್ಲದೆ ಅಗತ್ಯವಾಗಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಚಿಂತಿಸಬೇಕಿದೆ. ಅಲ್ಲದೆ ಭಾರತೀಯರ ಅನುವಂಶಿಕ ಗುಂಪುಗಳ ಬಗ್ಗೆಯೂ ಹೆಚ್ಚಿನ ಪರಿಶೀಲನೆ ನಡೆಸಬೇಕಿದೆ ಎಂದು ಈ ಅಧ್ಯಯನದಲ್ಲಿ ಪ್ರತಿಪಾದಿಸಲಾಗಿದೆ.
