* ವೆಂಕಟೇಶ್ವರನ ಭಕ್ತಿ ಕ್ಷೇತ್ರವಾದ ತಿರುಮಲದಲ್ಲಿ ಕಂಡು ಕೇಳರಿಯಷ್ಟು ಭಕ್ತಸಂದಣಿ* 2-3 ದಿನ ಬರಬೇಡಿ ಎಂದ ಟಿಟಿಡಿ* ರಜೆ ಹಾಗೂ ಪ್ರವಾಸ ಋುತು ಆಗಿರುವ ಹಿನ್ನೆಲೆ* 4-5 ಕಿ.ಮೀ. ಉದ್ದದ ಕ್ಯೂ ದರ್ಶನಕ್ಕೆ ಬೇಕು 2 ದಿನ

ತಿರುಮಲ(ಮೇ.30): ವೆಂಕಟೇಶ್ವರನ ಭಕ್ತಿ ಕ್ಷೇತ್ರವಾದ ತಿರುಮಲದಲ್ಲಿ ಕಂಡು ಕೇಳರಿಯಷ್ಟುಭಕ್ತಸಂದಣಿ ಶನಿವಾರ ಹಾಗೂ ಭಾನುವಾರ ಉಂಟಾಗಿದೆ. ದರ್ಶನಕ್ಕೆ ನಿಂತ ಭಕ್ತರು ದೇವರ ದರ್ಶನ ಮಾಡಲು ಸುಮಾರು 48 ಗಂಟೆಯಷ್ಟುಕಾಯಬೇಕಾದ ಸ್ಥಿತಿ ಸೃಷ್ಟಿಯಾಗಿದೆ. ಹೀಗಾಗಿ ಇನ್ನು 2-3 ದಿನ ಮಟ್ಟಿಗೆ ತಿರುಪತಿ ಕಡೆಗೆ ಆಗಮಿಸಬೇಡಿ ಎಂದು ತಿರುಮಲ ತಿರುಪತಿ ದೇವಸ್ಥಾನ ಮಂಡಳಿ (ಟಿಟಿಡಿ) ಭಕ್ತಾದಿಗಳಲ್ಲಿ ಕೋರಿದೆ.

ಆಂಧ್ರ ಹಾಗೂ ಸುತ್ತಲಿನ ರಾಜ್ಯಗಳಲ್ಲಿ ಇತ್ತೀಚೆಗಷ್ಟೇ ಮಕ್ಕಳ ಪರೀಕ್ಷೆಗಳು ಮುಗಿದಿವೆ. ಅಲ್ಲದೆ, ಕೆಲವು ತರಗತಿಗಳ ಮಕ್ಕಳಿಗೆ ಜೂನ್‌ ಮೊದಲ ವಾರದಿಂದ ಶಾಲೆ-ಕಾಲೇಜುಗಳು ಆರಂಭವಾಗಲಿವೆ. ಅಲ್ಲದೆ, ಈ ಸಲ ಯಾವುದೇ ಕೊರೋನಾ ನಿರ್ಬಂಧಗಳು ಇಲ್ಲ. ಹೀಗಾಗಿ ಈ ಶನಿವಾರ ಹಾಗೂ ಭಾನುವಾರ ಭಾರೀ ಸಂಖ್ಯೆಯಲ್ಲಿ ಭಕ್ತ ಸಮೂಹ ದರ್ಶನಕ್ಕೆ ಆಗಮಿಸಿದೆ. ಇಷ್ಟೊಂದು ಜನಸಂದಣಿ ವೈಕುಂಠ ಏಕಾದಶಿ ವೇಳೆಯೂ ಇರಲಿಲ್ಲ ಎಂದು ಟಿಟಿಡಿ ಅಧಿಕಾರಿಗಳು ಹೇಳಿದ್ದಾರೆ.

ಟಿಕೆಟ್‌ ಬುಕ್ಕಿಂಗ್‌ ಸೀಮಿತವಾಗಿದ್ದರೂ, ಸಾಮಾನ್ಯ ಸರದಿಯಲ್ಲಿ ನಿಂತು ಉಚಿತ ದರ್ಶನ ಪಡೆಯಲು ಭಕ್ತರು ನಾಮುಂದು ತಾಮುಂದು ಎಂಬಂತೆ ಆಗಮಿಸಿದ್ದಾರೆ. ಹೀಗಾಗಿ ಸರದಿ ಸಾಲು ಸುಮಾರು 4-5 ಕಿ.ಮೀ. ವರೆಗೆ ವ್ಯಾಪಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟಿಟಿಡಿ ಅಧಿಕಾರಿಗಳು, ‘ಒಂದು ತಾಸಿಗೆ ತಿಮ್ಮಪ್ಪನ ದರ್ಶನ ಪಡೆಯಲು ಸುಮಾರು 4500 ಭಕ್ತರಿಗೆ ಮಾತ್ರ ಸಾಧ್ಯ. ಈಗಿನ ಸರದಿ ನೋಡಿದರೆ ಸರದಿಯಲ್ಲಿರುವ ಭಕ್ತರೆಲ್ಲ ದೇವರ ದರ್ಶನ ಮಾಡುವಂತಾಗಲು 48 ತಾಸು ಬೇಕಾಗಬಹುದು’ ಎಂದು ಹೇಳಿದ್ದಾರೆ.

‘ಆದರೆ ಭಕ್ತರಿಗೆ ಸರದಿಯಲ್ಲಿ ಅನಾನುಕೂಲ ಆಗಬಾರದು ಎಂದು ಅಲ್ಲಿಯೇ ಅವರಿಗೆ ನೀರು, ಪಾನೀಯ, ಹಾಲು, ಚಹಾ, ಕಾಫಿ, ಅನ್ನಪ್ರಸಾದ- ಇತ್ಯಾದಿ ತಿಂಡಿ ತಿನಿಸುಗಳನ್ನು ನೀಡಲಾಗುತ್ತಿದೆ’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.