ಉತ್ತರ ಕರ್ನಾಟಕದಲ್ಲಿ ಬಿರುಗಾಳಿ ಸಹಿತ ಮಳೆಯಿಂದಾಗಿ ಹೆಸ್ಕಾಂಗೆ 5.65 ಕೋಟಿ ರೂ. ನಷ್ಟವಾಗಿದೆ. ಧಾರವಾಡ, ಗದಗ, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿ, ಪರಿವರ್ತಕಗಳು ಹಾನಿಗೊಳಗಾಗಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿದೆ.

ಹುಬ್ಬಳ್ಳಿ (ಜೂ.20) ಕಳೆದ ವಾರ ಉತ್ತರ‌ ಕರ್ನಾಟಕ ಭಾಗದಲ್ಲಿ ಸುರಿದ ಕುಂಭ ದ್ರೋಣ ಮಳೆಯಿಂದ ಜನ ಜೀವನ ಸಾಕಷ್ಟು ಹಾನಿ ಅನುಭವಿಸಿದ ಬೆನ್ನಲ್ಲೇ ಪೂರ್ವ ಮುಂಗಾರು ಹಾಗೂ ಮುಂಗಾರ ಮಳೆ, ಬಿರುಗಾಳಿಗೆ ಅಬ್ಬರಕ್ಕೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಹೆಸ್ಕಾಂ) ವ್ಯಾಪ್ತಿಯಲ್ಲಿ 5.65 ಕೋಟಿ ರೂಪಾಯಿ ನಷ್ಟವಾಗಿದೆ. ಮಳೆ ಗಾಳಿಗೆ ಕುಸಿದು ಬಿದ್ದಿರುವ ಕಂಬಗಳು, ಟಿಸಿಗಳ ಹಾಳಾಗುವಿಕೆಯಿಂದ ಬಾರಿ ನಷ್ಟ ಉಂಟಾಗಿದೆ.

ಈ ಬಾರಿ ಮುಂಗಾರು ಪೂರ್ವ ಉತ್ತಮ ಮಳೆಯಾಗಿದೆ. ಅದರ ಜೊತೆಗೆ ವಾಯುಭಾರ ಕುಸಿದು ಬಿರುಗಾಳಿ ಸಮೇತ ಮಳೆ ಜೋರಾಗಿದ್ದರಿಂದ ಹೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ಪರಿವರ್ತಕಗಳು ಕೆಟ್ಟು ಹೋಗಿವೆ. ಹೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಮಳೆ ಗಾಳಿಯಿಂದ ಒಟ್ಟು 4156 ವಿದ್ಯುತ್ ಕಂಬಗಳು ಧರೆಗುರಳಿವೆ. 196 ವಿದ್ಯುತ್ ಪರಿವರ್ತಕಗಳು, 11.22 ಕಿ.ಮೀ ಉದ್ದದಷ್ಟು ವಿದ್ಯುತ್ ತಂತಿಗೆ ಹಾನಿಯಾಗಿವೆ.

ಕಳೆದ ಎರಡು ಮೂರು ವಾರಗಳಿಂದ ಉತ್ತರ ಕರ್ನಾಟಕ ಭಾಗದಲ್ಲಿ ಬಿರುಗಾಳಿ ಸಮೇತ ಒಂದು ವಾರಕಾಲ ಸುರಿದ ಬಿರುಗಾಳಿ ಸಹಿತ ಮಳೆಯಿಂದ ವಿದ್ಯುತ್ ಕಂಬಗಳು ಧರೆಗುರುಳಿದರೆ ಇನ್ನೂ ಗಿಡ, ಮರದ ಕೊಂಬೆಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು ಹಾನಿಯಾಗಿವೆ. ಇದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಕೆಲವು ಕಡೆ ವಿದ್ಯುತ್ ಅವಘ ಡಗಳು ಸಂಭವಿಸಿವೆ.

ಹೆಸ್ಕಾಂ‌ ವ್ಯಾಪ್ತಿಯ ಉತ್ತರ ಕನ್ನಡ ಜಿಲ್ಲೆಯಲ್ಲಿ 1802 ವಿದ್ಯುತ್‌ ಕಂಬಗಳು ಬಿದ್ದಿವೆ. 126 ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿದೆ. 5.49 ಕಿ.ಮೀ ಉದ್ದದಷ್ಟು ವಿದ್ಯುತ್ ತಂತಿ ಹಾಳಾಗಿವೆ. ಮಳೆನಾಡು ಪ್ರದೇಶವಾಗಿದ್ದರಿಂದ ಈ ಭಾಗದಲ್ಲಿ ಹೆಚ್ಚು ವಿದ್ಯುತ್ ಪರಿಕರಗಳು ಹೆಚ್ಚು ನಷ್ಟವಾಗಿವೆ. ಯಲ್ಲಾಪುರ, ಮುಂಡಗೋಡ, ಹಳಿಯಾಳ, ಶಿರಸಿಯಲ್ಲಿ ಹೆಚ್ಚು ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ.