ಕೃಷಿ ಚಟುವಟಿಕೆಯ ಜೀವನಾಡಿಯಾದ ಮುಂಗಾರು ಮಳೆ, ದೇಶದ ಉತ್ತರ, ಪೂರ್ವದ ರಾಜ್ಯಗಳಲ್ಲಿ ಭಾರೀ ಪ್ರಮಾಣದ ಮಳೆ ಸುರಿಸುತ್ತಿದ್ದ, 5 ರಾಜ್ಯಗಳಲ್ಲಿ ಭಾರೀ ಸಾವು, ನೋವು, ಅಪಾರ ಪ್ರಮಾಣದ ಸಾರ್ವಜನಿಕ ಅಸ್ತಿಪಾಸ್ತಿ ಹಾನಿಗೆ ಕಾರಣವಾಗಿದೆ. 

ನವದೆಹಲಿ (ಜು.14): ಕೃಷಿ ಚಟುವಟಿಕೆಯ ಜೀವನಾಡಿಯಾದ ಮುಂಗಾರು ಮಳೆ, ದೇಶದ ಉತ್ತರ, ಪೂರ್ವದ ರಾಜ್ಯಗಳಲ್ಲಿ ಭಾರೀ ಪ್ರಮಾಣದ ಮಳೆ ಸುರಿಸುತ್ತಿದ್ದ, 5 ರಾಜ್ಯಗಳಲ್ಲಿ ಭಾರೀ ಸಾವು, ನೋವು, ಅಪಾರ ಪ್ರಮಾಣದ ಸಾರ್ವಜನಿಕ ಅಸ್ತಿಪಾಸ್ತಿ ಹಾನಿಗೆ ಕಾರಣವಾಗಿದೆ. ಮಹಾರಾಷ್ಟ್ರ, ಗುಜರಾತ್‌, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಒಡಿಶಾ ರಾಜ್ಯಗಳಲ್ಲಿ ಧಾರಾಕಾರ ಮಳೆ ಬುಧವಾರವೂ ಮುಂದುವರೆದಿದ್ದು, ಹಲವೆಡೆ ಭೂಕುಸಿತ, ಬೆಳೆಹಾನಿ, ಪ್ರಾಣಹಾನಿಗೆ ಕಾರಣವಾಗಿದೆ. ಕಳೆದ 24 ಗಂಟೆಗಳಲ್ಲಿ ಗುಜರಾತ್‌ನಲ್ಲಿ 14 ಹಾಗೂ ಮಹಾರಾಷ್ಟ್ರದಲ್ಲಿ ಮೂವರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಹಲವಾರು ಹೆದ್ದಾರಿಗಳು ಜಲಾವೃತವಾಗಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ.

ಗುಜರಾತ್‌ನಲ್ಲಿ 14 ಸಾವು: ಗುಜರಾತ್‌ ಹಾಗೂ ಕಛ್‌- ಸೌರಾಷ್ಟ್ರದಲ್ಲೂ ಭೀಕರ ಮಳೆಯಿಂದಾಗಿ ಕಳೆದ 24 ಗಂಟೆಗಳಲ್ಲಿ 14 ಜನರು ಮೃತಪಟ್ಟಿದ್ದಾರೆ. 31,000ಕ್ಕೂ ಹೆಚ್ಚಿನ ಜನರನ್ನು ಸುರಕ್ಷಿತ ಸ್ಥಾನಗಳಿಗೆ ಸ್ಥಳಾಂತರಗೊಳಿಸಲಾಗಿದೆ. ಕಛ್‌, ನವಸಾರಿ, ಡಾಂಗ್‌ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳು ಸಂಪೂರ್ಣವಾಗಿ ಜಲಾವೃತವಾಗಿವೆ. 51 ರಾಜ್ಯ ಹೆದ್ದಾರಿಗಳು ಹಾಗೂ 400ಕ್ಕೂ ಹೆಚ್ಚು ಪಂಚಾಯಿತಿ ರಸ್ತೆಗಳಿಗೆ ಹಾನಿಯಾಗಿದೆ. ಮುಂದಿನ 24 ಗಂಟೆಗಳ ಕಾಲ ಗುಜರಾತಿನಲ್ಲಿ ರೆಡ್‌ ಅಲರ್ಚ್‌ ಘೋಷಿಸಲಾಗಿದೆ.

ದೇಶಾದ್ಯಂತ ಮಳೆಯ ಅಬ್ಬರ, ಗುಜರಾತ್‌ನಲ್ಲಿ 65 ಸಾವು, ಆಂಧ್ರ-ಛತ್ತೀಸ್‌ಗಢ ಸಂಪರ್ಕ ಕಡಿತ!

ಮಹಾರಾಷ್ಟ್ರದಲ್ಲಿ 3 ಸಾವು: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಎಡೆಬಿಡದೇ ಸುರಿಯುತ್ತಿರುವ ಭಾರೀ ಮಳೆಗೆ ಕಳೆದ 24 ಗಂಟೆಗಳಲ್ಲಿ ಸುಮಾರು 6 ಜನರು ಕೊಚ್ಚಿ ಹೋಗಿದ್ದಾರೆ. ಅವರಲ್ಲಿ ಒಬ್ಬ ವ್ಯಕ್ತಿಯ ಶವ ಈವರೆಗೆ ಪತ್ತೆಯಾಗಿದೆ. ಗೋಂಡಿಯಾ ಜಿಲ್ಲೆಯಲ್ಲೂ 4 ಜನರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಪ್ರಸಿದ್ಧ ಕಪಾಲೇಶ್ವರ ದೇವಾಲಯದ ಬಳಿಯಲ್ಲಿ ರಸ್ತೆ ಕುಸಿದಿದೆ. ಪಾಲ್ಘಾರ್‌ನಲ್ಲೂ ಭೂಕುಸಿತ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಇನ್ನಿಬ್ಬರು ಗಾಯಗೊಂಡಿದ್ದಾರೆ. ಚಂದ್ರಪುರ ಜಿಲ್ಲೆಯಲ್ಲಿ ಜಲಾವೃತವಾಗಿದ್ದ ಸೇತುವೆಯ ಮಧ್ಯದಲ್ಲಿ ಮಧ್ಯಪ್ರದೇಶದಿಂದ ಹೈದರಾಬಾದಿನತ್ತ ಸಾಗುವ ಬಸ್‌ ಸಿಲುಕಿಕೊಂಡಿದ್ದು, ಮಕ್ಕಳು ಸೇರಿದಂತೆ ಸುಮಾರು 35 ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದರು. ಸಮಯಪಜ್ಞೆಯಿಂದ ಮೆರೆದ ಪೊಲೀಸರು ಪ್ರಯಾಣಿಕರನ್ನು ರಕ್ಷಿಸಿದ್ದಾರೆ.

ಜಲಾಶಯ ಭರ್ತಿ: ಕಳೆದ 6 ದಿನಗಳಿಂದ ವರುಣನ ಆರ್ಭಟಕ್ಕೆ ತೆಲಂಗಾಣ ಕೂಡಾ ತತ್ತರಿಸಿದೆ. ಹೈದರಾಬಾದ್‌, ಕೆರಾಮೇರಿ, ಆಸೀಫಾಬಾದ್‌ನಲ್ಲಿ 20.04 ಸೆ.ಮೀ. ಭಾರೀ ಮಳೆಯಾಗಿದೆ. ಇದರಿಂದ ಭಾರೀ ಪ್ರಮಾಣದಲ್ಲಿ ಬೆಳೆಹಾನಿಯಾಗಿದ್ದು, ಪ್ರವಾಹದ ಸಾಧ್ಯತೆ ಹೆಚ್ಚಿದೆ. ಜಲಾಶಯಗಳು ಭರ್ತಿಯಾಗಿದ್ದು, ಶ್ರೀರಾಮ್‌ ಸಾಗರ, ಯೆಲ್ಲಾಂಪಲ್ಲಿ ಹಾಗೂ ಕಾದ್ದಂ ಜಲಾಶಯದ ಗೇಟ್‌ಗಳನ್ನು ತೆರೆಯಲಾಗಿದೆ. ಈ ಹಿನ್ನೆಲೆಯಲ್ಲಿ ತೆಲಂಗಾಣ ಸರ್ಕಾರ ಜು. 16ರವರೆಗೆ ಶಿಕ್ಷಣ ಸಂಸ್ಥೆಗಳಿಗೆ ನೀಡಿದ ರಜೆಯನ್ನು ಮುಂದುವರೆಸಿದೆ.

ಆಂಧ್ರದಲ್ಲಿ ಪ್ರವಾಹ ಭೀತಿ: ಆಂಧ್ರ ಪ್ರದೇಶದಲ್ಲೂ ಮುಂದಿನ 2 ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಐಎಂಡಿ ಅಂದಾಜಿಸಿದೆ. ಈ ಹಿನ್ನೆಲೆಯಲ್ಲಿ ಭಾರೀ ಮಳೆ ಹಾಗೂ ಪ್ರವಾಹ ಉಂಟಾಗುವ ಸಾಧ್ಯತೆಯಿರುವ 4 ಜಿಲ್ಲೆಗಳಾದ ಎಲೂರು, ಅಲ್ಲುರಿ ಸೀತಾರಾಮ ರಾಜು, ಪೂರ್ವ ಗೋದಾವರಿ ಹಾಗೂ ಡಾ. ಬಿ.ಆರ್‌. ಅಂಬೇಡ್ಕರ್‌ ಕೊನಸೀಮಾಗಳಿಗೆ ಮುಖ್ಯಮಂತ್ರಿ ಜಗನ್‌ಮೋಹನ ರೆಡ್ಡಿ ತಲಾ 2 ಕೋಟಿ ರು. ಬಿಡುಗಡೆ ಮಾಡಿದ್ದಾರೆ. ಪ್ರಾಣಹಾನಿಯನ್ನು ತಪ್ಪಿಸಲು ರಾಜ್ಯ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.

Karnataka Rain: ಮಳೆ ಅನಾಹುತಕ್ಕೆ ಮೂವರು ಬಲಿ

ಒಡಿಶಾದಲ್ಲಿ ಭೂಕುಸಿತ: ಒಡಿಶಾದಲ್ಲೂ ಮಳೆಯಿಂದಾಗಿ ಭೂಕುಸಿತವಾಗಿದ್ದು, 10 ಮನೆಗಳು ಧ್ವಂಸವಾಗಿವೆ. ಮಲ್ಕಾನ್‌ಗಿರಿ ಹಾಗೂ ಕಾಳಹಂದಿ ಜಿಲ್ಲೆಗಳಲ್ಲಿ ರಸ್ತೆಗಳು ಜಲಾವೃತವಾಗಿವೆ. 9 ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಚ್‌ ಘೋಷಿಸಲಾಗಿದೆ. ಉಳಿದೆಡೆ ಯೆಲ್ಲೊ ಅಲರ್ಚ್‌ ಘೋಷಿಸಲಾಗಿದೆ. ಕೆಳಮಟ್ಟದ ಪ್ರದೇಶಗಳು ಜಲಾವೃತವಾಗಿದ್ದು, ಬೆಳೆಹಾನಿ ಸಂಭವಿಸಿದೆ.