ದೆಹಯಲ್ಲಿ ಭಾರಿ ಮಳೆ, ಧರೆಗುರುಳಿಸಿದ ಮರ, ವಾಹನ ಜಖಂ ಮಳೆಯಿಂದ ಟ್ರಾಫಿಕ್ ಸಮಸ್ಯೆ, ನದಿಯಂತಾದ ರಸ್ತೆ ವಿಮಾನದ ಮಾರ್ಗದಲ್ಲಿ ಬದಲಾವಣೆ, ಪ್ರಯಾಣಿಕರ ಪರದಾಟ

ನವದೆಹಲಿ(ಮೇ.30): ದೆಹಲಿಯಲ್ಲಿ ಗುಡುಗು ಸಹಿತ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆ ನದಿಯಂತಾಗಿದೆ. ಪ್ರತಿಕೂಲ ಹವಾಮಾನ, ಮಳೆ ನೀರಿನಿಂದ ದೆಹಲಿಯ 8 ವಿಮಾನಗಳ ಮಾರ್ಗ ಬದಲು ಮಾಡಲಾಗಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.

ದೆಹಲಿ ಭಾರಿ ಮಳೆಯಿಂದ ವಿಮಾನಗಳನ್ನು ಜೈಪುರ, ಲಖನೌ, ಚಂಡೀಘಡ, ಅಹಮ್ಮದಾಬಾದ್ ಹಾಗೂ ಡೆಹ್ರಡೂನ್‌ಗೆ ವರ್ಗಾಯಿಸಲಾಗಿದೆ. ಗುಡುಗ ಸಹಿತ ಮಳೆಯಿಂದ ದೆಹಲಿ ಹಾಗೂ ರಾಜಧಾನಿ ವಲಯ ತತ್ತರಿಸಿದೆ. ವಿಮಾನ ನಿಲ್ದಾಣದ ಕೆಲ ಭಾಗದಲ್ಲಿ ನೀರು ತುಂಬಿಕೊಂಡಿದೆ.

ಭಾರಿ ಮಳೆಗೆ ಮರಗಳು ಧರೆಗುರುಳಿದೆ. ಪರಿಣಾಮ ಹಲವು ವಾಹನಗಳು ಜಖಂ ಗೊಂಡಿದೆ. ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಭಾರಿ ಮರಗಳು ರಸ್ತೆಗೆ ಬಿದ್ದಿರುವ ಕಾರಣ ರಸ್ತೆ ಸಂಚಾರ ಮಾರ್ಗದಲ್ಲೂ ಬದಲಾವಣೆ ಮಾಡಲಾಗಿದೆ. ಪೊಲೀಸ್ ಕಾರು ಕೂಡ ಮರಬಿದ್ದು ನಜ್ಜುಗುಜ್ಜಾಗಿದೆ.

ರಾಜ್ಯಕ್ಕೆ ಜೂನ್ 2 ರಂದು ಮುಂಗಾರು ಪ್ರವೇಶ
ರೈತರ ಜೀವನಾಡಿ ಎಂದೇ ಜನಜನಿತವಾಗಿರುವ ನೈಋುತ್ಯ ಮುಂಗಾರು ಕೇರಳಕ್ಕೆ ಭಾನುವಾರ ಪ್ರವೇಶಿಸಿದ್ದು, ಜೂನ್‌ 1ರಿಂದ ರಾಜ್ಯಕ್ಕೆ ಪ್ರವೇಶವಾಗಲಿದೆ.ಜೂನ್‌ 2ರಂದು ಮಳೆ ಭರ್ಜರಿಯಾಗಿ ಸುರಿಯುವ ಸಾಧ್ಯತೆ ಹೆಚ್ಚಿರುವುದರಿಂದ ಕರಾವಳಿ ಮತ್ತು ಪಶ್ಚಿಮ ಘಟ್ಟದ ತಪ್ಪಲಿನ ಜಿಲ್ಲೆಗಳಿಗೆ ‘ಹಳದಿ ಅಲರ್ಚ್‌’ ನೀಡಲಾಗಿದೆ.

ಮುಂಗಾರು ಮಳೆ ವಾಡಿಕೆಗಿಂತ (ಜೂನ್‌ 1) ಮೂರು ದಿನ ಮೊದಲೇ ಮುಂಗಾರು ಕೇರಳ ಪ್ರವೇಶಿಸಿದೆ. ಮುಂಗಾರು ಕೇರಳಕ್ಕೆ ಕಾಲಿಟ್ಟನಾಲ್ಕೈದು ದಿನದಲ್ಲಿ ರಾಜ್ಯವನ್ನು ಪ್ರವೇಶಿಸುವುದು ಮಾಮೂಲಿ. ಆದ್ದರಿಂದ ಜೂನ್‌ ಮೊದಲ ವಾರದಲ್ಲಿ ರಾಜ್ಯಾದ್ಯಾಂತ ಮುಂಗಾರು ಮಳೆ ಸುರಿಯುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಾರಿ ಉತ್ತಮ ಮುಂಗಾರು ಮಳೆ ಸುರಿಯುವ ಸಾಧ್ಯತೆ ಇದೆ. ಸೋಮವಾರ ಅಥವಾ ಮಂಗಳವಾರ ಇಲಾಖೆ ಇನ್ನೊಂದು ಮುನ್ಸೂಚನೆಯನ್ನು ಪ್ರಕಟಿಸುವ ಸಾಧ್ಯತೆಯಿದೆ. ಇದರಲ್ಲಿ ಮುಂಗಾರು ಮಳೆಯ ಆರಂಭದ ಕೆಲವು ದಿನಗಳ ಚಲನ ವಲನದ ಸ್ಪಷ್ಟಚಿತ್ರಣ ಸಿಗಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಮಳೆ ಮುನ್ಸೂಚನೆ:
ಜೂನ್‌ 2ರಂದು ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಪಶ್ಚಿಮ ಘಟ್ಟದ ಜಿಲ್ಲೆಗಳಾದ ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗುವ ಮುನ್ಸೂಚನೆ ಯಿದೆ. ಅದೇ ರೀತಿ ದಕ್ಷಿಣ ಒಳನಾಡಿನ ಬೆಂಗಳೂರು ನಗರ ಮತ್ತು ಗ್ರಾಮಾಂತರ ಹಾಗೂ ರಾಮನಗರದಲ್ಲಿಯೂ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇನ್ನು ಜೂನ್‌ 1ರವರೆಗೂ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ಆದರೆ ಉತ್ತರ ಒಳನಾಡಿನ ಬೆಳಗಾವಿ, ಬೀದರ್‌, ಧಾರವಾಡ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಸೋಮವಾರ ಒಣ ಹವೆ ಇರಲಿದ್ದು, ಉಳಿದ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಗಳಿವೆ.

ಮೇ 31ರಂದು ಬಾಗಲಕೋಟೆ, ಬೀದರ್‌, ಧಾರವಾಡ, ಗದಗ, ಕೊಪ್ಪಳ, ವಿಜಯಪುರ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆಗಳಲ್ಲಿ ಒಣ ಹವೆ ಇರಲಿದೆ. ಜೂನ್‌ 1ರಂದು ಬೀದರ್‌ ನಲ್ಲಿ ಮಾತ್ರ ಒಣ ಹವೆ ಇರಲಿದ್ದು ರಾಜ್ಯದ ಉಳಿದ ಭಾಗದಲ್ಲಿ ಮಳೆಯಾಗಲಿದೆ. ಜೂನ್‌ 2ರಂದು ಬಾಗಲಕೋಟೆ, ಬೀದರ್‌, ಗದಗ, ಕೊಪ್ಪಳ, ರಾಯಚೂರು ಜಿಲ್ಲೆ ಹೊರತು ಪಡಿಸಿ ಉಳಿದೆಡೆ ಮಳೆಯಾಗುವ ಸಂಭವವಿದೆ ಎಂದು ಮುನ್ಸೂಚನೆ ನೀಡಲಾಗಿದೆ.