ಕೇದರನಾಥದಲ್ಲೂ ಮಳೆಯ ಅವಾಂತರ: ಭೂಕುಸಿತಕ್ಕೆ ಪ್ರವಾಸಿಗರು ಸೇರಿ ಮೂರು ಬಲಿ
ರಾಜ್ಯದಂತೆ ಉತ್ತರಾಖಂಡ್‌ನಲ್ಲೂ ಧಾರಕಾರ ಮಳೆಯಾಗುತ್ತಿದೆ. ಹಿಂದೂ ತೀರ್ಥಕ್ಷೇತ್ರವಾಗಿರುವ ಉತ್ತರಾಖಂಡ್‌ನ ಕೇದರನಾಥದಲ್ಲಿ ಮಳೆಯ ಜೊತೆ ಭೂಕುಸಿತವೂ ಉಂಟಾಗಿದ್ದು, ಈ ದುರಂತದಲ್ಲಿ ಒಟ್ಟು ಮೂವರು ಬಲಿಯಾಗಿದ್ದಾರೆ.
ನವದೆಹಲಿ: ರಾಜ್ಯದಂತೆ ಉತ್ತರಾಖಂಡ್‌ನಲ್ಲೂ ಧಾರಕಾರ ಮಳೆಯಾಗುತ್ತಿದೆ. ಹಿಂದೂ ತೀರ್ಥಕ್ಷೇತ್ರವಾಗಿರುವ ಉತ್ತರಾಖಂಡ್‌ನ ಕೇದರನಾಥದಲ್ಲಿ ಮಳೆಯ ಜೊತೆ ಭೂಕುಸಿತವೂ ಉಂಟಾಗಿದ್ದು, ಈ ದುರಂತದಲ್ಲಿ ಒಟ್ಟು ಮೂವರು ಬಲಿಯಾಗಿದ್ದಾರೆ. ಮೃತರಲ್ಲಿ ಮಹಾರಾಷ್ಟ್ರದ ಇಬ್ಬರು ಪ್ರವಾಸಿಗರು ಸೇರಿದ್ದಾರೆ. ಮತ್ತೊಂದೆಡೆ ಕೇದರನಾಥದ ಗೌರಿಕುಂಡ್ ಹಾಗೂ ಛಿರ್ಬಾಸದ ನಡುವೆ ಮಳೆಯಿಂದಾಗಿ ವಾಹನವೊಂದು ಅಪಘಾತಕ್ಕೀಡಾಗಿದ್ದು, 8 ಜನ ಗಾಯಗೊಂಡಿದ್ದಾರೆ. ಈ ಕೇದರನಾಥ ಕ್ಷೇತ್ರವೂ ರುದ್ರಪ್ರಯಾಗ ಜಿಲ್ಲೆಯಲ್ಲಿ ಬರುತ್ತದೆ. ಪ್ರವಾಸಿಗರ ಹೊರತಾಗಿ ಮೃತ ಇನ್ನೊರ್ವನನ್ನು ರುದ್ರಪ್ರಯಾಗದ ನಿವಾಸಿ ಎಂದು ಗುರುತಿಸಲಾಗಿದೆ.
ಇದಕ್ಕೂ ಮೊದಲು ಬಿಷ್ಣುಪುರ ಸಮೀಪ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯನ್ನು ತೀವ್ರ ಭೂಕುಸಿತದ ಕಾರಣಕ್ಕೆ ಬಂದ್ ಮಾಡಲಾಗಿತ್ತು. ಕಳೆದ ಕೆಲ ವಾರಗಳಿಂದ ರಾಜ್ಯದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಇದರಿಂದ ಭೂಕುಸಿತ ಉಂಟಾಗುತ್ತಿದೆ. ಹೀಗಾಗಿ ಉತ್ತರಾಖಂಡ್ ರಾಜ್ಯದ ಪ್ರಮುಖ ಹೆದ್ದಾರಿಗಳು ಬಂದ್ ಆಗಿವೆ.
ಬುಲ್ಡೋಜರ್ ಬಿದ್ದು ಮೂವರು ಸಾವು
ಕೇದರನಾಥದ ಪಾದಯಾತ್ರೆಯ ಮಾರ್ಗದಲ್ಲಿ ಬುಲ್ಡೋಜರೊಂದು ಬಿದ್ದ ಪರಿಣಾಮ ಮೂವರು ಪ್ರವಾಸಿಗರು ಮೃತಪಟ್ಟಿದ್ದಾರೆ. ತೀವ್ರ ಮಳೆಯಿಂದಾಗಿ ರಸ್ತೆ ಕಾಣದೇ ಈ ಅವಾಂತರ ನಡೆದಿದೆ. ಗೌರಿ ಕುಂಡದ ಬಳಿ ನಿನ್ನೆ ಈ ಘಟನೆ ನಡೆದಿದೆ. ತೀವ್ರ ಮಳೆಯ ನಡುವೆಯೂ ಭಕ್ತರು ಮಾತ್ರ ಕೇದರನಾಥಕ್ಕೆ ಭೇಟಿ ನೀಡುತ್ತಲೇ ಇದ್ದಾರೆ.