ಬೆಂಗಳೂರು(ಮಾ.31): ಕೊರೋನಾ ಅಬ್ಬರ ರಾಜ್ಯ ದೇಶವನ್ನು ಮತ್ತೆ ಚಿಂತೆಗೀಡು ಮಾಡಿದೆ. ಒಂದನೇ ಅಲೆ ತಗ್ಗುತ್ತಿದ್ದ ಸಂದರ್ಭದಲ್ಲಿ ಎರಡನೇ ಅಲೆ ಎದ್ದಿರುವುದು ಗಾಯದ ಮೇಲೆ ಬರೆ ಎಳೆಎದಂತಾಗಿದೆ. ಸದ್ಯ ಮಾಜಿ ಪಿಎಂ ಹಾಗು ಜೆಡಿಎಸ್‌ ಹಿರಿಯ ನಾಯಕ ಎಚ್‌. ಡಿ. ದೇವೇಗೌಡ ಹಾಗೂ ಅವರ ಪತ್ನಿ ಚೆನ್ನಮ್ಮರಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಹೀಗಿರುವಾಗ ಪ್ರಧಾನಿ ಮೋದಿ ಮಾಜಿ ಪಿಎಂಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ಹೌದು ತನಗೆ ಹಾಗೂ ತಮ್ಮ ಪತ್ನಿಗೆ ಕೊರೋನಾ ಸೋಂಕು ತಗುಲಿದೆ ಎಂದು ಖುದ್ದು ಎಚ್. ಡಿ. ದೇವೇಗೌಡ ಅವರೇ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ದೇವೇಗೌಡರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ 'ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರಿಗೆ ಕರೆ ಮಾಡಿ ಅವರ ಹಾಗೂ ಅವರ ಪತ್ನಿಯ ಆರೋಗ್ಯ ವಿಚಾರಿಸಿದೆ. ಇಬ್ಬರೂ ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ' ಎಂದಿದ್ದರು.

ಮಾಜಿ ಪ್ರಧಾನಿ ಎಚ್‌. ಡಿ. ದೇವೇಗೌಡ, ಪತ್ನಿ ಚೆನ್ನಮ್ಮಗೆ ಕೊರೋನಾ!

ಇತ್ತ ಮಾಜಿ ಪ್ರಧಾನಿ ದೇವೇಗೌಡ ಕೂಡಾ ಪಿಎಂ ಮೋದಿ ಕರೆ ಬಂದ ಬೆನ್ನಲ್ಲೇ ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ. ದೇವೇಗೌಡರು ತಮ್ಮ ಟ್ವೀಟ್‌ನಲ್ಲಿ 'ನನಗೆ ಕರರೆ ಮಾಡಿ ಆರೋಗ್ಯ ವಿಚಾರಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ನನ್ನ ಕೃತಜ್ಞತೆಗಳು. ನನ್ನ ಆಯ್ಕೆಯ ನಗರದ ಯಾವುದೇ ಆಸ್ಪತ್ರೆಯಲ್ಲಾದರೂ ಚಿಕಿತ್ಸೆ ಪಡೆಯಿರಿ ಎಂದು ಅವರು ಕೊಟ್ಟ ಆಫರ್‌ನಿಂದ ಬಹಳ ಪ್ರಭಾವಿತನಾದೆ. ಬೆಂಗಳೂರಿನಲ್ಲಿ ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಲಾಗುತ್ತದೆ ಎಂಬ ಆಶ್ವಾಸನೆ ಅವರಿಗೆ ನೀಡಿದ್ದು, ನನ್ನ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತಿರುತ್ತೇನೆಂಬ ಭರವಸೆಯನ್ನೂ ನೀಡಿದ್ದೇನೆ' ಎಂದಿದ್ದಾರೆ.

ಇನ್ನು ಇತ್ತ ಮಾಜಿ ಸಿಎಂ, ಎಚ್. ಡಿ. ದೇವೇಗೌಡರ ಶಿಷ್ಯ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕ ಸಿದ್ದರಾಮಯ್ಯ ಕೂಡಾ ಟ್ವೀಟ್ ಮಾಡಿ ದೇವೇಗೌಡ ದಂಪತಿ ಶೀಘ್ರ ಗುಣಮುಖರಾಗಲಿ ಎಂದು ಆಶಿಸಿದ್ದಾರೆ.