ಬೆಂಗಳೂರು(ಮಾ.31): ಮೊದಲ ಹಂತದ ಕೊರೋನಾ ಇನ್ನೇನು ನನಿಂತೇ ಹೋಯ್ತು ಎಂದು ಸಮಾಧಾನಪಟ್ಟುಕೊಳ್ಳುವಷ್ಟರಲ್ಲಿ ಮತ್ತೊಂದು ಅಲೆ ಆರಂಭವಾಗಿದೆ. ಮೊದಲ ಅಲೆಗಿಂತಲೂ ಹೆಚ್ಚು ಶೀಘ್ರವಾಗಿ ವ್ಯಾಪಿಸುತ್ತಿರುವ ಈ ಮಹಾಮಾರಿ ಮತ್ತೊಮ್ಮೆ ಜನರ ನಿದ್ದೆಗೆಡಿಸಲಾರಂಭಿಸಿದೆ. ಸದ್ಯ ದೇಶದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌  ಹಿರಿಯ ನಾಯಕ ಎಚ್. ಡಿ. ದೇವೇಗೌಡ ಹಾಗೂ ಅವರ ಪತ್ನಿ ಚೆನ್ನಮ್ಮ ಅವರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.

ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿರುವ ಎಚ್. ಡಿ. ದೇವೇಗೌಡ ಅವರು 'ನನ್ನ ಪತ್ನಿ ಚೆನ್ನಮ್ಮ ಹಾಗೂ ನನಗೆ ಕೊರೋನಾ ಸೋಂಕು ತಗುಲಿದೆ. ಹೀಗಾಗಿ ನಾವು ಇತರ ಕುಟುಂಬ ಸದಸ್ಯರೂ ಸೇರಿ ಸ್ವಯಂ ಐಸೋಲೇಷನ್‌ ಆಗುತ್ತಿದ್ದೇವೆ' ಎಂದಿದ್ದಾರೆ.

ಇದರೊಂದಿಗೆ 'ಕಳೆದ ಕೆಲ ದಿನಗಳಿಂದ ನಮ್ಮ ಸಂಪರ್ಕದಲ್ಲಿದ್ದವರೆಲ್ಲರಿಗೂ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಮನವಿ ಮಾಡುತ್ತೇನೆ. ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಆತಂಕಗೊಳ್ಳಬೇಡಿ' ಎಂದೂ ತಿಳಿಸಿದ್ದಾರೆ.

ಈ ಟ್ವೀಟ್ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ದೇವೇಗೌಡ ದಂಪತಿ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ. ಮೋದಿ ತಮ್ಮ ಟ್ವೀಟ್‌ನಲ್ಲಿ 'ಮಾಜಿ ಪ್ರಧಾನ ಮಂತ್ರಿ ಎಚ್. ಡಿ. ದೇವೇಗೌಡರಿಗೆ ಕರೆ ಮಾಡಿ, ಅವರ ಹಾಗೂ ಅವರ ಪತ್ನಿಯ ಆರೋಗ್ಯ ವಿಚಾರಿಸಿದೆ. ಇವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ' ಎಂದಿದ್ದಾರೆ.

ಮೊದಲನೇ ಹಂತದ ಕೊರೋನಾ ಅಲೆ ಕಡಿಮೆಯಾಗಲು ಬರೋಬ್ಬರಿ ಒಂದು ವರ್ಷ ತಗುಲಿತ್ತು. ಆದರೀಗ ಇದೇ ವೇಳೆ ಎರಡನೇ ಅಲೆ ಆರಂಭಗೊಂಡಿದೆ. ನಿಧಾನವಾಗಿ ಪುನಾರಂಭಗೊಂಡಿದ್ದ ವಹಿವಾಟು ಮತ್ತೆಡ ಸ್ಥಗಿತಗೊಳಗಳುವ ಲಕ್ಷಣಗಳು ಗೋಚರಿಸಿವೆ. ಕರ್ನಾಟಕದಲ್ಲೂ ಈ ಮಹಾಮಾರಿ ಅಬ್ಬರಿಸುತ್ತಿದ್ದು, ಸಕ್ರಿಯ ಸೋಂಕಿತರ ಸಂಖ್ಯೆಯಲ್ಲಿ ಸದ್ಯ ರಾಜ್ಯ ಕೇರಳವನ್ನು ಹಿಂದಿಕ್ಕಿ ಎರಡನೇ ಸ್ಥಾನ ತಲುಪಿದೆ ಎಂಬುವುದು ಉಲ್ಲೇಖನೀಯ.