Delhi Minister Arrest ಹವಾಲ ಪ್ರಕರಣ, ದೆಹಲಿ ಸಚಿವ, ಕೇಜ್ರಿವಾಲ್ ಆಪ್ತ ಸತ್ಯೇಂದ್ರ ಜೈನ್ ಬಂಧನ!
- ಹವಾಲಾ ಹಣ ಪ್ರಕರಣ, ಆಮ್ ಆದ್ಮಿಗೆ ತೀವ್ರ ಹಿನ್ನಡೆ
- ಸಚಿವ ಸತ್ಯೇಂದ್ರ ಜೈನ್ ಬಂಧಿಸಿದ ಇಡಿ ಅಧಿಕಾರಿಗಳು
- ಪ್ರಭಾವಿ ಮಂತ್ರಿ ಬಂಧನ, ಆಮ್ ಆದ್ಮಿ ಪಾರ್ಟಿಗೆ ಮುಖಭಂಗ
ನವದೆಹಲಿ(ಮೇ.30): ಹವಾಲಾ ಹಣ ಪ್ರಕರಣದಲ್ಲಿ ದೆಹಲಿಯ ಆಮ್ ಆದ್ಮಿ ಪಾರ್ಟಿ ಸರ್ಕಾರದ ಸಚಿವ ಸತ್ಯೇಂದ್ರ ಜೈನ್ ಅರೆಸ್ಟ್ ಆಗಿದ್ದಾರೆ. ಇಡಿ ಅಧಿಕಾರಿಗಳು ಇಂದು ಸತ್ಯೇಂದ್ರ ಜೈನ್ ಬಂಧಿಸಿದ್ದಾರೆ. ಕೋಲ್ಕತಾ ಮೂಲದ ಮೂಲದ ಕಂಪನಿಗೆ ಹವಾಲ ಹಣ ವರ್ಗಾಯಿಸಲಾಗಿದೆ ಎಂಬ ಆರೋಪವಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಪ್ತರಾಗಿರುವ ಸತ್ಯೇಂದ್ರ ಜೈನ್, ದೆಹಲಿ ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನು ಹೊಂದಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕೈಗಾರಿಕೆ, ಗೃಹ, ವಿದ್ಯುತ್, ನೀರು, ನಗರಾಭಿವೃದ್ದಿ, ನೀರಾವರಿ ಖಾತೆಗಳನ್ನು ಹೊಂದಿರುವ ಸತ್ಯೇಂದ್ರ ಜೈನ್ ಬಂಧನ ಆಮ್ ಆದ್ಮಿ ಪಾರ್ಟಿಗೆ ತೀವ್ರ ಹಿನ್ನಡೆ ತಂದಿದೆ.
2015-16ರಲ್ಲಿ ಕೋಲ್ಕತಾ ಮೂಲದ ಸಂಸ್ಥೆಯೊಂದಿಗೆ ಸತ್ಯೇಂದ್ರ ಜೈನ್ ಹವಾಲ ವಹಿವಾಟು ನಡೆಸಿದ್ದಾರೆ ಅನ್ನೋದು ಇಡಿ ಅಧಿಕಾರಿಗಳ ತನಿಖೆಯಲ್ಲಿ ಬಹಿರಂಗವಾಗಿದೆ. ಇಡಿ ತನಿಖೆ ನಡೆಸಿದ ಬೆನ್ನಲ್ಲೇ ಸತ್ಯೇಂದ್ರ ಜೈನ್ ಹಾಗೂ ಕುಟುಬಂದ 4.81 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿತ್ತು. ಮುಟ್ಟುಗೋಲು ಹಾಕಿದ ಎರಡು ತಿಂಗಳಲ್ಲೇ ಇದೀಗ ಸತ್ಯೇಂದ್ರ ಜೈನ್ ಬಂಧನವಾಗಿದೆ.
ಭ್ರಷ್ಟಾಚಾರ ವಿರುದ್ಧ ಹೋರಾಟ ಎಂದು ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಾರ್ಟಿ ಒಬ್ಬೊಬ್ಬ ನಾಯಕರು ಇದೀಗ ಬಂಧನವಾಗುತ್ತಿದ್ದಾರೆ. ಇತ್ತೀಚೆಗೆ ಪಂಜಾಬ್‌ನ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರನ್ನು ಸಿಎಂ ಭಗವಂತ್ ಮಾನ್ ವಜಾಗೊಳಿಸಿದ್ದರು. ಇದರ ಬೆನ್ನಲ್ಲೇ ಸಿಂಗ್ಲಾ ಬಂಧನವಾಗಿತ್ತು.
ಸತ್ಯೇಂದ್ರ ಜೈನ್ ಬಂಧನ ಇದೀಗ ರಾಜಕೀಯ ಗುದ್ದಾಟಕ್ತೆ ಕಾರಣವಾಗಿದೆ. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಬಿಜೆಪಿಯೇತರ ಸರ್ಕಾರದ ಸಚಿವರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಈಗಾಗಲೇ ಅರವಿಂದ್ ಕೇಜ್ರಿವಾಲ್ ಕೇಂದ್ರದ ವಿರುದ್ಧ ಆರೋಪ ಮಾಡಿದ್ದರು. ಇದೀಗ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಾಕ್ಷಿಯಾಗಲಿದೆ.