ಚಂಡೀಘಡ(ಡಿ.05): ಕೊರೋನಾ ಲಸಿಕೆಯ ಮೂರನೇ ಹಂತದ ಪ್ರಯೋಗದ ಸಂದರ್ಭದಲ್ಲಿ ವಾಲೆಂಟಿಯರ್ ಆಗಿದ್ದ ಹರ್ಯಾಣದ ಗೃಹ ಸಚಿವ ಅನಿಲ್ ವಿಜ್‌ಗೆ ಕೊರೋನಾ ಸೋಂಕು ತಗುಲಿದೆ. ಶನಿವಾರ ಅವರಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿದ್ದು, ಈ ಬಗ್ಗೆ ಅವರು ಖುದ್ದು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಅಂಬಾಲಾ ಕ್ಯಾಂಟ್‌ನ ಸಿವಿಲ್ ಆಸ್ಪತ್ರೆಯಲ್ಲಿ ತಾವು ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ ಅವರು, ಯಾರೆಲ್ಲಾ ತನ್ನ ಸಂಪರ್ಕದಲ್ಲಿದ್ದರೋ ಅವರೆಲ್ಲರಿಗೂ ಕೊರೋನಾ ಟೆಸ್ಟ್ ಮಾಡುವಂತೆ ಸೂಚಿಸಿದ್ದಾರೆ.

ಅತ್ತ ಹರ್ಯಾಣ ಮುಖ್ಯಮಂತ್ರಿ ಮನೋಹರ್‌ಲಾಲ್ ಖಟ್ಟರ್ ವಿಜ್‌ರವರಿಗೆ ಸೋಂಕು ತಗುಲಿರುವುದಕ್ಕೆ ಖೇದ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಖಟ್ಟರ್ 'ಗೃಹ ಮಂತ್ರಿಯವರೇ ನಿಮಗೆ ಕೊರೋನಾ ಸೋಂಕು ತಗುಲಿದ ಮಾಹಿತಿ ಲಭ್ಯವಾಯಿತು. ನೀವು ಶೀಘ್ರದಲ್ಲೇ ಈ ರೋಗವನ್ನು ಸೋಲಿಸಿ ಗುಣಮುಖರಾಗುತ್ತೀರೆಂಬ ಭರವಸೆ ನನಗಿದೆ. ಆದಷ್ಟು ಬೇಗ ನೀವು ಗುಣಮುಖರಾಗಿರೆಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ' ಎಂದಿದ್ದಾರೆ.

ವಿಜ್‌ರವರಿಗೆ ಲಸಿಕೆ 

ಕಳೆದ ನವೆಂಬರ್ 20 ಅಂದರೆ, ಹದಿನೈದು ದಿನಗಳ ಹಿಂದಷ್ಟೇ ವಿಜ್‌ರವರಿಗೆ ಮೂರನಬೇ ಹಂತದ ಕೊರೋನಾ ಲಸಿಕೆ ಪ್ರಯೋಗದ ವೇಳೆ ಮೊದಲ ವ್ಯಾಕ್ಸಿನ್ ನಿಡಲಾಗಿತ್ತು. ವಿಜ್ ಖುದ್ದು ಈ ಪ್ರಯೋಗದ ವೇಳೆ ಲಸಿಕೆ ಚುಚ್ಚಿಸಿಕೊಂಡಿದ್ದರು. ಈ ವೇಳೆ ಸುಮಾರು ಇನ್ನೂರು ಸ್ವಯಂಸೇವಕರಿಗೆ ವ್ಯಾಕ್ಸಿನ್ ನಿಡಲಾಗಿತ್ತು.

ಲಸಿಕೆ ಇನ್ನೇನು ಬಿಡುಗಡೆಯಾಗುತ್ತದೆ ಎನ್ನುವ ಮಾತುಗಳು ಚರ್ಚೆಯಲ್ಲಿರುವಾಗಲೇ ಸಚಿವರಿಗೇ ಲಸಿಕೆ ನೀಡಿದರೂ ಕೊರೋನಾ ತಗುಲಿರುವುದು ಜನರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ.