ಸೋಮವಾರ ನುಹ್‌ನ ಪಚ್‌ಗಾಂವ್ ಬಳಿ ಗಣಿಗಾರಿಕೆ ಮಾಫಿಯಾ ತಡೆಯಲು ಸ್ಥಳಕ್ಕೆ ಭೇಟಿ ನೀಡಿದ್ದ ತೌರು ಡಿಎಸ್‌ಪಿ ಸುರೇಂದ್ರ ಸಿಂಗ್ ಅವರನ್ನು ಡಂಪರ್ ಹತ್ತಿಸಿ ಹತ್ಯೆಗೈಯ್ಯಲಾಗಿದೆ. ಗಂಭೀರವಾಗಿ ಗಾಯಗೊಂಡ ಅಧಿಕಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರ ದೇಹವು ತೆರೆದ ಕಸದ ತೊಟ್ಟಿಯಲ್ಲಿ ಪತ್ತೆಯಾಗಿದೆ.
ಹರ್ಯಾಣ(ಜು.19): ಹರಿಯಾಣದ ನನ್ಹು ಜಿಲ್ಲೆಯಿಂದ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಇಲ್ಲಿನ ಅಕ್ರಮ ಗಣಿಗಾರಿಕೆ ಮಾಫಿಯಾ ಡಿಎಸ್ಪಿ ಸುರೇಂದ್ರ ಸಿಂಗ್ ಅವರನ್ನು ಬಲಿ ಪಡೆದಿದೆ. ಪೊಲೀಸ್ ಅಧಿಕಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರ ದೇಹವು ತೆರೆದ ಕಸದ ತೊಟ್ಟಿಯಲ್ಲಿ ಪತ್ತೆಯಾಗಿದೆ. ಈ ಘಟನೆಯ ನಂತರ ಆಡಳಿತ ವಲಯದಲ್ಲಿ ಅಲ್ಲೋಲಕಲ್ಲೋಲ ಉಂಟಾಗಿದೆ. ಅದೇ ಸಮಯದಲ್ಲಿ, ಇಡೀ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಪಡೆ ನಿಯೋಜಿಸಲಾಗಿದೆ.
ಆಗಿದ್ದೇನು?
ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗ ಸುಳಿವು ಸಿಕ್ಕ ಬೆನ್ನಲ್ಲೇ ಡಿಎಸ್‌ಪಿ ಸುರೇಂದರ್ ಕುಮಾರ್ ಬಿಷ್ಣೋಯ್ ಅವರು ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ತೌಡು ಬೆಟ್ಟದಲ್ಲಿ ದಾಳಿ ನಡೆಸಲು ತೆರಳಿದ್ದರು. ಪ್ರತ್ಯಕ್ಷದರ್ಶಿಯೊಬ್ಬರು ಈ ಬಗ್ಗೆ ಮಾತನಾಡುತ್ತಾ ಡಿಎಸ್ಪಿ ತಮ್ಮ ಅಧಿಕೃತ ವಾಹನದ ಬಳಿ ನಿಂತಿದ್ದರು. ಈ ವೇಳೆ 12:10 ರ ಸುಮಾರಿಗೆ ಅವರು ಅಕ್ರಮ ಕಲ್ಲುಗಣಿಗಾರಿಕೆ ವಸ್ತುಗಳನ್ನು ಸಾಗಿಸುತ್ತಿದ್ದ ಡಂಪರ್ ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಿದ್ದರು. ಆದರೆ ಡಂಪರ್ ಚಾಲಕ ಪೊಲೀಸ್ ಅಧಿಕಾರಿ ಮೇಳೆ ಡಂಪರ್ ಹತ್ತಿಸಿದ್ದಾನೆ ಎಂದಿದ್ದಾರೆ
ನೆಲದ ಮೇಲೆ ಬಿದ್ದ ಬೀಳುತ್ತಿದ್ದಂತೆಯೇ ಮೇಲೇರಿದ ಡಂಪರ್
ಮೇವಾತ್‌ನಲ್ಲಿರುವ ಡೆಪ್ಯುಟಿ ಎಸ್‌ಪಿ ಸುರೇಂದರ್ ಸಿಂಗ್ ತಮ್ಮ ತಂಡದೊಂದಿಗೆ ಪಚಗಾಂವ್‌ನ ಬೆಟ್ಟಗಳಲ್ಲಿ ಮಾಫಿಯಾವನ್ನು ಹಿಡಿಯಲು ಹೋದಾಗ ಈ ಘಟನೆ ನಡೆದಿದೆ. ಏಕೆಂದರೆ ಪಂಚಗಾಂವ್ ಬೆಟ್ಟಗಳಲ್ಲಿ ಅಕ್ರಮ ಗಣಿಗಾರಿಕೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ ಎಂದು ವರದಿಯಾಗಿದೆ. ಅದಕ್ಕಾಗಿಯೇ ಡಿಎಸ್ಪಿ ಇಲ್ಲಿ ದಾಳಿ ನಡೆಸಿದ್ದರು. ಡಿಎಸ್ಪಿ ಅವರ ಕಾರಿನ ಬಳಿ ನಿಂತು, ಚಾಲಕನಿಗೆ ವಾಹನ ನಿಲ್ಲಿಸುವಂತೆ ಹೇಳಿದ್ದರು. ಆದರೆ ಡಂಪರ್ ಚಾಲಕ ಪೊಲೀಸರ ಮಾತಿಗೆ ಕಿವಿ ಕೊಡದೇ ವಾಹನ ಚಲಾಯಿಸಿದ್ದಾನೆ. ಈ ವೇಳೆ ಡಿಎಸ್‌ಪಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದರು, ಡಂಪರ್ ಅವರ ಮೇಲೆ ಹರಿದಿದೆ. ಈ ವೇಳೆ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಡಿಎಸ್‌ಪಿಯನ್ನು ಕೊಂದು ಚಾಲಕ ಪರಾರಿಯಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಪ್ರಕಟಣೆ ಹೊರಡಿಸಿದ ಹರ್ಯಾಣ ಪೊಲೀಸ್
ದುರಂತದ ಬೆನ್ನಲ್ಲೇ ಹರಿಯಾಣ ಪೊಲೀಸರು ದುಃಖತಪ್ತ ಕುಟುಂಬಕ್ಕೆ ಸಂತಾಪ ಸೂಚಿಸುವ ಹೇಳಿಕೆಯನ್ನು ನೀಡಿದರು. ತಪ್ಪಿತಸ್ಥರನ್ನು ನ್ಯಾಯಾಂಗಕ್ಕೆ ತರಲಾಗುವುದು ಎಂದು ರಾಜ್ಯ ಪೊಲೀಸರು ಭರವಸೆ ನೀಡಿದರು.
ರಾಜ್ಯ ಸರ್ಕಾರವನ್ನು ದೂಷಿಸಿದ ಕಾಂಗ್ರೆಸ್
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಹರಿಯಾಣ ಕಾಂಗ್ರೆಸ್, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಪ್ರಶ್ನಿಸುವ ಮೂಲಕ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರವನ್ನು ದೂಷಿಸಿದೆ.
ಹರ್ಯಾಣ ಕಾಂಗ್ರೆಸ್ ಟ್ವೀಟ್ ಮಾಡಿ, "ಎಂಎಲ್ ಖಟ್ಟರ್, ನೀವು ನಮ್ಮ ರಾಜ್ಯವನ್ನು ಏನು ಮಾಡಿದ್ದೀರಿ? ಇಲ್ಲಿ ಶಾಸಕರಾಗಲೀ ಅಥವಾ ಪೊಲೀಸರಾಗಲೀ ಸುರಕ್ಷಿತವಾಗಿಲ್ಲ. ಸಾರ್ವಜನಿಕರಿಗೆ ಏನಾಗಬಹುದು? ಇದು ತುಂಬಾ ದುಃಖದ ಸುದ್ದಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವು ಪ್ರಾರ್ಥಿಸುತ್ತೇವೆ. ಕುಟುಂಬಕ್ಕೆ ಬೇಗ ನ್ಯಾಯ ಸಿಗಲಿ ಎಂದು ಬರೆದಿದೆ.
