ಹರ್ಯಾಣದ ನೂಹ್‌ ಪಟ್ಟಣದಲ್ಲಿ ನಡೆದ ಕೋಮುಗಲಭೆ ಪೂರ್ವನಿಯೋಜಿತ ಗಲಭೆಯಾಗಿದ್ದು ಘರ್ಷಣೆ ವೇಳೆ ‘ಪೊಲೀಸರನ್ನು ಜೀವಂತವಾಗಿ ಸುಡುವ ಬೆದರಿಕೆ ಹಾಕಲಾಗಿದ್ದು ಕೊಲೆ ಮಾಡುವ ಉದ್ದೇಶದಿಂದಲೇ ಪೊಲೀಸರ ಮೇಲೆ ದಾಳಿ ನಡೆಸಲಾಗಿದೆ ಎಂದು ಎಫ್‌ಐಆರ್‌ಗಳಲ್ಲಿ ದಾಖಲಿಸಲಾಗಿದೆ.

ಚಂಡೀಗಢ: ಹರ್ಯಾಣದ ನೂಹ್‌ ಪಟ್ಟಣದಲ್ಲಿ ನಡೆದ ಕೋಮುಗಲಭೆ ಪೂರ್ವನಿಯೋಜಿತ ಗಲಭೆಯಾಗಿದ್ದು ಘರ್ಷಣೆ ವೇಳೆ ‘ಪೊಲೀಸರನ್ನು ಜೀವಂತವಾಗಿ ಸುಡುವ ಬೆದರಿಕೆ ಹಾಕಲಾಗಿದ್ದು ಕೊಲೆ ಮಾಡುವ ಉದ್ದೇಶದಿಂದಲೇ ಪೊಲೀಸರ ಮೇಲೆ ದಾಳಿ ನಡೆಸಲಾಗಿದೆ ಎಂದು ಎಫ್‌ಐಆರ್‌ಗಳಲ್ಲಿ ದಾಖಲಿಸಲಾಗಿದೆ. ಸೈಬರ್‌ ಸೆಲ್‌ ಪೊಲಿಸ್‌ ಠಾಣೆಯ ಮೇಲೆ ದಾಳಿ ಮಾಡಿದ್ದ ವೇಳೆ ನೂರಾರು ಜನರು ಠಾಣೆಯನ್ನು ಸುತ್ತುವರೆದಿದ್ದರು. ಕಲ್ಲುಗಳನ್ನು ಎಸೆದರು ಹಾಗೂ ಪೊಲೀಸರನ್ನು ಜೀವಂತವಾಗಿ ಸುಟ್ಟು ಹಾಕಿ ಎಂದು ಘೋಷಣೆಗಳನ್ನು ಕೂಗಲಾಯಿತು. ಈ ವೇಳೆ ಪೊಲೀಸರ ಮೇಲೆ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಲಾಯಿತು. ಠಾಣೆಯ ಹೊರಗಿದ್ದ 15ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಆಗ ಪೊಲೀಸರು ಆಶ್ರವಾಯು ಬಳಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಬಳಿಕ ಅನಿವಾರ್ಯವಾಗಿ 100 ಸುತ್ತು ಗುಂಡು ಹಾರಿಸಬೇಕಾಯಿತು ಎಂದು ಉಲ್ಲೇಖಿಸಲಾಗಿದೆ. ಇನ್ನು ನೂಹ್‌ನಲ್ಲಿ ವಿಎಚ್‌ಪಿಯ ಯಾತ್ರೆ ಸಾಗುತ್ತಿದ್ದಾಗ ಸುಮಾರು 600 ರಿಂದ 700ಜನ ಪೊಲೀಸರ ಮೇಲೆ ದಾಳಿ ಮಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಉ.ಪ್ರದೇಶದ 3 ಜಿಲ್ಲೇಲಿ ಹೈ ಅಲರ್ಟ್

ಸಹರಾನ್‌ಪುರ: ನೂಹ್‌ ಹಿಂಸಾಚಾರದಿಂದ ಎಚ್ಚೆತ್ತುಕೊಂಡಿರುವ ಉತ್ತರ ಪ್ರದೇಶ ಸರ್ಕಾರ ಹರ್ಯಾಣಕ್ಕೆ ಗಡಿಹೊಂದಿರುವ 3 ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಎಚ್ಚರಿಕೆ ಕೈಗೊಂಡಿದೆ. ಇದರ ಭಾಗವಾಗಿ ಗಡಿಯಲ್ಲಿ ಕಟ್ಟುನಿಟ್ಟಿನ ಪರಿಶೀಲನೆ ಕೈಗೊಂಡಿದ್ದು, ಜಿಲ್ಲೆಯಾದ್ಯಂತ ಪೊಲೀಸರ ನಿಯೋಜನೆ ಮಾಡಿದೆ. ಇದರ ಜೊತೆಗೆ ಹರ್ಯಾಣ ಭಾಗದ ಗಡಿ ಪ್ರದೇಶದಲ್ಲೂ ಅಲ್ಲಿನ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಉತ್ತರ ಪ್ರದೇಶದ ಸಹರಾನ್‌ಪುರ, ಶಮ್ಲಿ ಹಾಗೂ ಮುಜ್ಜಾಫರ್‌ನಗರ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಿ, ಸಾಮಾಜಿಕ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರ ನಿಯೋಜನೆಯಾಗಿದೆ ಎಂದು ಸಹರಾನ್‌ಪುರ ಡಿಐಜಿ ಅಜಯ್‌ ಕುಮಾರ್‌ ಸಾಹ್ನಿ ತಿಳಿಸಿದ್ದಾರೆ.

ಹರಿಯಾಣ ಕೋಮುಗಲಭೆಯಲ್ಲಿ ನಾಲ್ವರ ಸಾವು, ನುಹ್‌ ಜಿಲ್ಲೆಯಲ್ಲಿ ಎರಡು ದಿನ ಕರ್ಫ್ಯೂ!

ರಾಜಸ್ಥಾನದ ಗಡಿ ಜಿಲ್ಲೆಯಲ್ಲಿ ಕಟ್ಟೆಚ್ಚರ
ಹಾಗೆಯೇ ಹರ್ಯಾಣದ ಗಡಿಗೆ ಹೊಂದಿಕೊಂಡಿರುವ ರಾಜಸ್ಥಾನದ ಭರತ್‌ಪುರ ಜಿಲ್ಲೆಯ 4 ತಾಲೂಕುಗಳಲ್ಲಿ ಜಾಗೂ ಅಲ್ವಾರ್‌ ಜಿಲ್ಲೆಯಲ್ಲಿ ಮೊಬೈಲ್‌ ಇಂಟರ್ನೆಟ್‌ ಮೇಲೆ ವಿಧಿಸಿರುವ ನಿಷೇಧವನ್ನು ಮುಂದುವರೆಸಲಾಗಿದೆ. ನುಹ್‌ನಲ್ಲಿ ಉಂಟಾಗಿರುವ ಕೋಮು ಸಂಘರ್ಷ ರಾಜಸ್ಥಾನಕ್ಕೆ ಹಬ್ಬುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಭರತ್‌ಪುರದ ಸಿಕ್ರಿ, ಪಹಾಡಿ, ಕಮನ್‌, ನಗರ್‌ ತಾಲೂಕುಗಳಲ್ಲಿ ಇಂಟರ್ನೆಟ್‌ ಹಾಗೂ ಯಾವುದೇ ರೀತಿಯ ಮೆರವಣಿಗೆಗಳಿಗೆ ನಿಷೇಧ ಹೇರಲಾಗಿದೆ. ಭರತ್‌ಪುರ ಮತ್ತು ಹರ್ಯಾಣ ಗಡಿಯಲ್ಲಿ ಭದ್ರತಾ ಪಡೆಗಳನ್ನು ನಿಯೋಜನೆ ಮಾಡಲಾಗಿದ್ದು, ಎಲ್ಲಾ ವಾಹನಗಳನ್ನು ತನಿಖೆ ಮಾಡಲಾಗುತ್ತಿದೆ. ಅಲ್ವಾರ್‌ ಜಿಲ್ಲೆಯಲ್ಲಿ 10 ದಿನಗಳ ಕಾಲ ಇಂಟರ್ನೆಟ್‌ ಸೇವೆ ಸ್ಥಗಿತಗೊಳಿಸಲಾಗಿದೆ.

ದೆಹಲಿಯಲ್ಲಿ 4000 ಪೊಲೀಸರ ನಿಯೋಜನೆ

ಪಕ್ಕದ ಹರ್ಯಾಣದ ನುಹ್‌ನಲ್ಲಿ ನಡೆಯುತ್ತಿರುವ ಕೋಮು ಸಂಘರ್ಷ ಗುರುಗ್ರಾಮಕ್ಕೂ ಹಬ್ಬಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದು, 4 ಸಾವಿರ ಪೊಲೀಸ್‌ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ದೆಹಲಿ- ಗುರುಗ್ರಾಮ ಮತ್ತು ದೆಹಲಿ-ಫರೀದಾಬಾದ್‌ ನಡುವಿನ ಗಡಿ ಪ್ರದೇಶದಲ್ಲಿ ಭದ್ರತಾ ಪಡೆಗಳನ್ನು ನೇಮಕ ಮಾಡಲಾಗಿದೆ. ದೆಹಲಿಯಲ್ಲಿರುವ ಸೂಕ್ಷ್ಮ ಪ್ರದೇಶಗಳ ಮೇಲೆ ಹೆಚ್ಚಿನ ನಿಗಾ ವಹಿಸಿರುವ ಪೊಲೀಸರು ಗಸ್ತು ನಡೆಸುತ್ತಿದ್ದಾರೆ. ಸುಳ್ಳುಸುದ್ದಿ ಹರಡುವುದು ಮತ್ತು ಸುಖಾಸುಮ್ಮನೆ ಗುಂಪು ಸೇರುವುದನ್ನು ತಡೆಗಟ್ಟಲು ಪೊಲೀಸರಿಗೆ ಸೂಚಿಸಲಾಗಿದೆ.

ವಿಶ್ವ ಹಿಂದು ಪರಿಷತ್‌ ಶೋಭಾಯಾತ್ರೆಯ ವೇಳೆ ಕಲ್ಲುತೂರಾಟ, 40ಕ್ಕೂ ಅಧಿಕ ವಾಹನಗಳಿಗೆ ಬೆಂಕಿ!

116 ಜನ ಅರೆಸ್ಟ್‌, 41 ಎಫ್‌ಐಆರ್‌ ದಾಖಲು

ಈ ಕೋಮುಗಲಭೆಯ ಹಿಂಸಾಚಾರದಲ್ಲಿ ಸಾವನ್ನಪ್ಪಿದವರ ಸಂಖ್ಯೆ 6ಕ್ಕೆ ಏರಿಕೆಯಾಗಿದ್ದು ಗಲಭೆಯಲ್ಲಿ ಭಾಗಿಯಾಗಿದ್ದ 116 ಜನರನ್ನು ಬಂಧಿಸಲಾಗಿದ್ದು ಇತರಿಗಾಗಿ ಶೋಧ ನಡೆಸಲಾಗುತ್ತಿದೆ. ಇನ್ನು ನೂಹ್‌ ಪಟ್ಟಣದ ಗಲಭೆ ಪ್ರೇರಿತವಾಗಿ ರಾಜ್ಯದ ಇತರೆಡೆ ಸೃಷ್ಟಿಯಾಗಿದ್ದ ಗಲಭೆಗಳು ನಿಯಂತ್ರಣಕ್ಕೆ ಬಂದಿದ್ದು ಇದೀಗ ಪರಿಸ್ಥಿತಿ ಸಾಮಾನ್ಯವಾಗಿದೆ. ಗಾಯಾಳುಗಳಿಗೆ ನೂಹ್‌ ಮತ್ತು ಗುರುಗ್ರಾಮದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಂಚುಕೋರರನ್ನು ಗುರುತಿಸಲಾಗುತ್ತಿದ್ದು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹರಾರ‍ಯಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಹೇಳಿದ್ದಾರೆ. ಅಲ್ಲದೆ ಹಿಂಸಾಕೃತ್ಯದಲ್ಲಿ ಭಾಗಿಯಾದವರಿಂದಲೇ ನಷ್ಟದ ಹಣ ವಸೂಲಿ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ಇನ್ನು ಹರಾರ‍ಯಣ ಪೊಲೀಸರನ್ನು ಹೊರತುಪಡಿಸಿ 20 ವಿವಿಧ ಕೇಂದ್ರೀಯ ಭದ್ರತಾ ಪಡೆಗಳನ್ನು ರಾಜ್ಯದಲ್ಲಿ ಗಲಭೆ ನಿಯಂತ್ರಣಕ್ಕಾಗಿ ನಿಯೋಜಿಸಲಾಗಿದ್ದು ಪಲ್ವಾಲ್‌ನಲ್ಲಿ 3, ಗುರುಗ್ರಾಮದಲ್ಲಿ 2, ಫರೀದಾಬಾದ್‌ನಲ್ಲಿ 1 ಮತ್ತು ನೂಹ್‌ನಲ್ಲಿ 14 ಪಡೆಗಳನ್ನು ನಿಯೋಜಿಸಲಾಗಿದೆ. ಇನ್ನೂ 4 ಕೇಂದ್ರೀಯ ಪಡೆಗಳನ್ನು ರಾಜ್ಯದಲ್ಲಿ ನಿಯೋಜಿಸುವಂತೆ ಮುಖ್ಯಮಂತ್ರಿ ಖಟ್ಟರ್‌ ಕೋರಿದ್ದಾರೆ.