ವಿಶ್ವ ಹಿಂದು ಪರಿಷತ್ ಶೋಭಾಯಾತ್ರೆಯ ವೇಳೆ ಕಲ್ಲುತೂರಾಟ, 40ಕ್ಕೂ ಅಧಿಕ ವಾಹನಗಳಿಗೆ ಬೆಂಕಿ!
ವಿಶ್ವ ಹಿಂದು ಪರಿಷತ್‌ನ ಶೋಭಾಯಾತ್ರೆಯ ವೇಳೆ ಕಲ್ಲುತೂರಾಟ ನಡೆಸಿದ ಪ್ರಕರಣ ಸೋಮವಾರ ಹರಿಯಾಣದ ಮೇವಾತ್‌ನಲ್ಲಿ ನಡೆದಿದೆ. 40ಕ್ಕೂ ಅಧಿಕ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಹರಿಯಾಣದ ನುಹ್ ಜಿಲ್ಲೆಯ ಗಡಿಗಳನ್ನು ಪೊಲೀಸರು ಸೀಲ್ ಮಾಡಿದ್ದಾರೆ.
ಚಂಡೀಗಢ (ಜು.31): ಹರಿಯಾಣದ ನುಹ್‌ನಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಮಾತೃಶಕ್ತಿ ದುರ್ಗಾ ವಾಹಿನಿಯಿಂದ ಸೋಮವಾರ ಬ್ರಜಮಂಡಲ ಯಾತ್ರೆ ಹೊರಡುವಾಗ ಕಲ್ಲುತೂರಾಟ ನಡೆಸಲಾಗಿದೆ. ಎರಡು ಗುಂಪುಗಳ ನಡುವಿನ ಘರ್ಷಣೆಯ ನಂತರ, 40ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಲಾಗಿದೆ. ಇದರಿಂದ ಅನೇಕ ಜನರು ಮತ್ತು ಪೊಲೀಸರು ಗಾಯಗೊಂಡಿದ್ದಾರೆ. ಗುಂಡಿನ ದಾಳಿಯಿಂದ ಇಬ್ಬರು ಸಾವು ಕಂಡಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ಇನ್ನೂ ಅಧಿಕೃತ ಪ್ರಕಟಣೆ ಬಂದಿಲ್ಲ. ಪರಿಸ್ಥಿತಿಯನ್ನು ನಿಭಾಯಿಸಲು ನುಹ್ ಜಿಲ್ಲಾಡಳಿತವು ಇತರ ಜಿಲ್ಲೆಗಳಿಂದ ಪೊಲೀಸರನ್ನು ಕರೆಸಿದೆ, ಜೊತೆಗೆ ಸೆಕ್ಷನ್ 144 ವಿಧಿಸುವುದರ ಜೊತೆಗೆ ಇಡೀ ಜಿಲ್ಲೆಯಲ್ಲಿ ಇಂಟರ್ನೆಟ್ ಅನ್ನು ಸಹ ಸ್ಥಗಿತಗೊಳಿಸಲಾಗಿದೆ. ಜಿಲ್ಲೆಯ ಗಡಿಗಳನ್ನು ಮುಚ್ಚಲಾಗಿದೆ. ಬ್ರಜಮಂಡಲ ಯಾತ್ರೆಯು ನುಹ್‌ನಲ್ಲಿರುವ ನಲ್ಹಾದ್ ಶಿವ ದೇವಾಲಯದಿಂದ ಫಿರೋಜ್‌ಪುರ-ಜಿರ್ಕಾ ಕಡೆಗೆ ಹೊರಟಿತ್ತು. ಯಾತ್ರೆ ತಿರಂಗಾ ಪಾರ್ಕ್ ಬಳಿ ತಲುಪುತ್ತಿದ್ದಂತೆಯೇ ಅಲ್ಲಿ ಜನರ ಗುಂಪು ಎದುರಾಯಿತು. ಎರಡೂ ಕಡೆಯುವರು ಮುಖಾಮುಖಿ ಆಗುತ್ತಿದ್ದಂತೆ ವಾಗ್ವಾದ ನಡೆದು ಕಲ್ಲು ತೂರಾಟ ಆರಂಭವಾಗಿತ್ತು.
40ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ: ಸೋಮವಾರ ಮಧ್ಯಾಹ್ನ, ಮೊದಲ ಹಿಂಸಾಚಾರವು ತಿರಂಗಾ ಪಾರ್ಕ್ ಬಳಿ ಭುಗಿಲೆದ್ದಿತು, ಕೆಲವೇ ಸಮಯದಲ್ಲೇ ಅದು ಇಡೀ ನುಹ್ ನಗರವನ್ನು ಆವರಿಸಿತು. ಈ ಸಂದರ್ಭದಲ್ಲಿ, ಹಳೆಯ ಬಸ್ ನಿಲ್ದಾಣ, ಹೋಟೆಲ್ ಬೈಪಾಸ್, ಮುಖ್ಯ ಬಜಾರ್, ಅನಾಜ್ ಮಂಡಿ ಮತ್ತು ಗುರುಗ್ರಾಮ್-ಆಲ್ವಾರ್ ಹೆದ್ದಾರಿಯಲ್ಲಿ ಒಂದರ ನಂತರ ಒಂದರಂತೆ ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಮಧ್ಯಾಹ್ನದ ವೇಳೆಗೆ 40ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿ ಧ್ವಂಸಗೊಳಿಸಲಾಯಿತು. ಇವುಗಳಲ್ಲಿ ಕಾರುಗಳ ಹೊರತಾಗಿ ಬಸ್‌ಗಳು, ಬೈಕ್‌ಗಳು, ಸ್ಕೂಟಿಗಳು ಮತ್ತು ಇತರ ವಾಹನಗಳು ಸೇರಿವೆ.
10 ಪೊಲೀಸ್ ತುಕಡಿಗೆ ಬುಲಾವ್: ಸಂಜೆ 5 ಗಂಟೆಯವರೆಗೆ ನುಹ್ ಚೌಕ್ ಉದ್ವಿಗ್ನವಾಗಿತ್ತು. ಪಾಲ್ಡಿ ರಸ್ತೆಯ ಸ್ಮಶಾನದ ಬಳಿ ಇರುವ ಕಾಳಿ ಮಾತೆಯ ದೇವಸ್ಥಾನವನ್ನೂ ಧ್ವಂಸಗೊಳಿಸಿ ಬೆಂಕಿ ಹಚ್ಚಲಾಗಿದೆ. ಮತ್ತೊಂದೆಡೆ, ಹಿಂಸಾಚಾರ ನಡೆದ ತಕ್ಷಣ, ಇಡೀ ನುಹ್ ನಗರದ ಮಾರುಕಟ್ಟೆಯನ್ನು ಮುಚ್ಚಲಾಗಿದೆ.ನುಹ್ ನಗರದ ಮುಖ್ಯ ಮಾರುಕಟ್ಟೆಯಲ್ಲದೆ, ನಯಾ ಬಜಾರ್, ಗಾಲಿ ಬಜಾರ್ ಮತ್ತು ಹೊಡಲ್ ಬೈಪಾಸ್ ಸೇರಿದಂತೆ ನಗರದ ಇತರ ಮಾರುಕಟ್ಟೆಗಳನ್ನೂ ಅಂಗಡಿಕಾರರು ಮುಚ್ಚಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಜಿಲ್ಲಾಡಳಿತವು ನೆರೆಯ ಪಲ್ವಾಲ್, ಫರಿದಾಬಾದ್ ಮತ್ತು ರೇವಾರಿ ಜಿಲ್ಲೆಗಳಿಂದ 10 ಕಂಪನಿ ಪೊಲೀಸರನ್ನು ಕರೆಸಿದೆ.
ಬ್ರಜಮಂಡಲ ಯಾತ್ರೆಯ ವೇಳೆ ಹಿಂಸಾಚಾರ ಭುಗಿಲೆದ್ದ ತಕ್ಷಣ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶಗಳ ಯುವಕರ ವಿವಿಧ ಗುಂಪುಗಳು ನುಹ್ ನಗರದತ್ತ ಸಾಗಿದವು. ಆಯುಧಗಳನ್ನು ಹಿಡಿದ ಈ ಜನರು ದಾರಿಯಲ್ಲಿ ಬರುತ್ತಿದ್ದ ವಾಹನಗಳನ್ನು ದೋಚಿ ಲೂಟಿ ಮಾಡಿದರು. ಹಲವೆಡೆ ಪೊಲೀಸ್ ತಂಡಗಳ ಮೇಲೂ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಅವರ ಕಿಡಿಗೇಡಿತನಕ್ಕೆ ಸಂಬಂಧಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ವಂದೇ ಭಾರತ್ ರೈಲಿಗೆ ಯುವಕರಿಂದ ಕಲ್ಲು ತೂರಾಟ... ರೈಲ್ವೇ ಇಲಾಖೆಗೆ ಪ್ರಾಣ ಸಂಕಟ
ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಮಾತೃಶಕ್ತಿ ದುರ್ಗಾವಾಹಿನಿಯ ಪರವಾಗಿ ಪ್ರತಿ ವರ್ಷ ಬ್ರಜಮಂಡಲ ಯಾತ್ರೆಯನ್ನು ನುಹ್ ಪ್ರದೇಶದಲ್ಲಿ ನಡೆಸಲಾಗುತ್ತದೆ. ಈ ಯಾತ್ರೆಯು ನುಹ್‌ನಿಂದ ಪ್ರಾರಂಭವಾಗುತ್ತದೆ ಮತ್ತು ಫಿರೋಜ್‌ಪುರ ಜಿರ್ಕಾದ ಸಿಗರ್ ಹಳ್ಳಿಯಲ್ಲಿ ಕೊನೆಗೊಳ್ಳುತ್ತದೆ. ಸೋಮವಾರ ಬೆಳಿಗ್ಗೆ, ಬಜರಂಗದಳ ಮತ್ತು ಗೌ ರಕ್ಷಾ ದಳವು ನೂಹ್‌ನಿಂದ ಯಾತ್ರೆಗೆ ಚಾಲನೆ ನೀಡಿತು.
ವಂದೇ ಭಾರತ್ ರೈಲಿಗೆ ಮತ್ತೆ ಕಲ್ಲೆಸೆತ! ಮೂರ್ನಾಲ್ಕು ಕಿಟಕಿಗಳ ಗಾಜು ಪೀಸ್‌ಪೀಸ್