ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಪಕ್ಷ ಬರೆದಿದ್ದ ಪತ್ರಕ್ಕೆ ಹರಿತ ಶಬ್ದ ಬಳಸಿ ತಿರುಗೇಟು ನೀಡಿದ್ದ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್‌ ಗರಂ ಆಗಿದೆ.

ನವದೆಹಲಿ (ನ.2): ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಪಕ್ಷ ಬರೆದಿದ್ದ ಪತ್ರಕ್ಕೆ ಹರಿತ ಶಬ್ದ ಬಳಸಿ ತಿರುಗೇಟು ನೀಡಿದ್ದ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್‌ ಗರಂ ಆಗಿದೆ. ಆಯೋಗವು ಕಾಂಗ್ರೆಸ್‌, ಅದರ ನಾಯಕರ ವಿರುದ್ಧ ದಾಳಿ ಮಾಡುತ್ತಿದೆ. ಇಂತಹ ಶಬ್ದಗಳನ್ನು ಮುಂದೆಯೂ ಬಳಸಿದರೆ ಕಾನೂನು ಕ್ರಮದ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಹರ್ಯಾಣ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಆಯೋಗಕ್ಕೆ ದೂರು ನೀಡಿತ್ತು. ಆದರೆ ಆರೋಪಗಳನ್ನು ನಿರಾಕರಿಸಿದ್ದ ಆಯೋಗವು, ಈ ಹಿಂದೆಯೂ ಮಾಡಿದಂತೆ ಇಡೀ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆಯ ಬಗ್ಗೆಯೇ ಅನುಮಾನದ ಹೊಗೆಯನ್ನು ಕಾಂಗ್ರೆಸ್ ಎಬ್ಬಿಸುತ್ತಿದೆ ಎಂದು ಹೇಳಿತ್ತು.

ಲಡಾಖ್ ಗಡಿಯ ಡೆಮ್ಚೊಕ್ ನಲ್ಲಿ ಭಾರತೀಯ ಸೈನಿಕರ ಗಸ್ತು ಆರಂಭ

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕಾಂಗ್ರೆಸ್ಸಿನ 9 ನಾಯಕರು ಆಯೋಗಕ್ಕೆ ಪತ್ರವೊಂದನ್ನು ಬರೆದಿದ್ದಾರೆ. ಪಕ್ಷ ಮಾಡಿರುವ ಆರೋಪವನ್ನು ಆಯೋಗ ನಿರಾಕರಿಸುತ್ತಿದೆ. ಅಲ್ಲದೆ ತನಗೇ ತಾನೇ ಕ್ಲೀನ್‌ಚಿಟ್‌ ಕೊಟ್ಟುಕೊಳ್ಳುತ್ತಿದೆ. ಪಕ್ಷ ಮಾಡಿರುವ ಆರೋಪಗಳಿಗೆ ಯಾವುದೇ ಉತ್ತರವನ್ನೂ ಆಯೋಗ ನೀಡಿಲ್ಲ. ಆಯೋಗವು ಒಂದು ವೇಳೆ ನಮ್ಮ ಮನವಿ ಸ್ವೀಕರಿಸಲು ನಿರಾಕರಿಸಿದರೆ, ನಮ್ಮ ದೂರುಗಳಿಗೆ ಸ್ಪಂದಿಸದೇ ಇದ್ದರೆ ಕೋರ್ಟ್‌ಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಜೈರಾಂ ರಮೇಶ್‌, ಕೆ.ಸಿ. ವೇಣುಗೋಪಾಲ್‌, ಅಶೋಕ್‌ ಗೆಹಲೋತ್‌, ಭೂಪಿಂದರ್‌ ಹೂಡಾ ಮತ್ತಿತರರು ಈ ಪತ್ರಕ್ಕೆ ಸಹಿ ಮಾಡಿದ್ದಾರೆ.