ನವ ಭಾರತದಲ್ಲಿ ಶ್ರಮಿಕರಿಗೆ ಹೆಚ್ಚು ಅವಕಾಶ: ಆರ್‌ಸಿ
* ನಿಮ್ಮ ಮುಂದೆ ಅವಕಾಶಗಳ ಮಹಾಪೂರ
* ಪುರುಷರಿಗೆ ಪೈಪೋಟಿ ನೀಡುವ ಮೂಲಕ ಮಹಿಳೆಯರಿಂದ ಹಲವು ಕ್ಷೇತ್ರದಲ್ಲಿ ಮೇಲುಗೈ
* ಹೊಸಬರು, ಹೊಸ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ
* ಅವಕಾಶದಲ್ಲಿ ಸಮಾನತೆ ತರುವುದು ಕೇಂದ್ರ ಸರ್ಕಾರದ ಪ್ರಮುಖ ಆಶಯ: ಸಚಿವ
ಬೆಂಗಳೂರು(ಏ.15): ನವಭಾರತದಲ್ಲಿ ಕಠಿಣ ಪರಿಶ್ರಮಿಗಳಿಗೆ, ಕೌಶಲ್ಯ ಹೊಂದಿದವರಿಗೆ ಮತ್ತು ಉದ್ದಿಮೆ ಅಥವಾ ಉದ್ಯೋಗದಲ್ಲಿ ಗಮನ ಕೇಂದ್ರಿಕರಿಸುವರಿಗೆ ಭಾರಿ ಅವಕಾಶಗಳಿವೆ ಎಂದು ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಕೌಶಲ ಅಭಿವೃದ್ಧಿ ಖಾತೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.
ಅಂಬೇಡ್ಕರ್ ಜಯಂತಿಯ ಅಂಗವಾಗಿ ಲಕ್ಕಸಂದ್ರದಲ್ಲಿರುವ ಮಹಿಳೆಯರಿಗಾಗಿನ ರಾಷ್ಟ್ರೀಯ ಕೌಶಲ ತರಬೇತಿ ಸಂಸ್ಥೆ (ಎನ್‌ಎಸ್‌ಟಿಐಡಬ್ಲು)ಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮುಂದಿನ ಕೆಲವು ವರ್ಷಗಳು ಅತ್ಯಂತ ಪ್ರಮುಖವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಆಡಳಿತ ನಡೆಸುತ್ತಿರುವ ಸಂದರ್ಭದಲ್ಲಿ ಯುವ ಜನತೆ ಆಗಿರುವ ಅದೃಷ್ಟನಿಮಗೆ ದಕ್ಕಿದೆ. ಈಗ ನಿಮ್ಮ ಮುಂದೆ ಅವಕಾಶಗಳ ಮಹಾಪೂರವೇ ಇದೆ. ನಾವು ಯುವಕರಾಗಿದ್ದಾಗ ಅವಕಾಶಗಳನ್ನು ಪಡೆಯುವುದು ಕಠಿಣವಾಗಿತ್ತು ಎಂದು ಅಭಿಪ್ರಾಯ ಪಟ್ಟರು.
ಇಂದಿನ ಜಗತ್ತಿನಲ್ಲಿ ಮಹಿಳೆಯರು ಮಹತ್ವಾಕಾಂಕ್ಷಿಗಳಾಗುತ್ತಿದ್ದಾರೆ. ಪುರುಷರಿಗೆ ಪೈಪೋಟಿ ನೀಡುತ್ತಿರುವುದು ಮಾತ್ರವಲ್ಲದೆ ಹಲವು ಕ್ಷೇತ್ರದಲ್ಲಿ ಮೇಲುಗೈಯನ್ನು ಸಾಧಿಸಿದ್ದಾರೆ. ಹೊಸಬರಿಗೆ ಮತ್ತು ಹೊಸ ಕ್ಷೇತ್ರದಲ್ಲಿ ಅವಕಾಶಗಳು ತೆರೆದುಕೊಳ್ಳುತ್ತಿವೆ. ಉದ್ಯೋಗ ಮತ್ತು ಉದ್ದಿಮೆ ಶೀಲತೆ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳುತ್ತಿದೆ ಎಂದು ಹೇಳಿದರು.
ನಾನು ಕೇಂದ್ರ ಸಚಿವನಾದ ಆರಂಭದ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಒಂದು ಕಾರ್ಯಕ್ರಮದ ನಿಮಿತ್ತ ತೆರಳಿದ್ದೆ. ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿದ್ದ ವಿದ್ಯಾರ್ಥಿನಿಯರ ಗುಂಪೊಂದು, ‘ಸರ್ ನಿಮ್ಮ ಜೊತೆ ಮಾತನಾಡಬೇಕು’ ಎಂದು ಹೇಳಿ ಕೈ ಎತ್ತಿದರು. ನಾನು ಭಯೋತ್ಪಾದನೆ, ಕಾನೂನು ಸುವ್ಯವಸ್ಥೆ ಮುಂತಾದ ವಿಷಯಗಳ ಬಗ್ಗೆ ಇವರು ಪ್ರಶ್ನಿಸಬಹುದು, ನಾನು ಕೌಶಲಾಭಿವೃದ್ಧಿ ಸಚಿವನಾಗಿ ಭದ್ರತಾ ವಿಷಯದ ಬಗ್ಗೆ ಏನು ಪ್ರತಿಕ್ರಿಯಿಸುವುದು ಎಂದು ತುಸು ಆತಂಕಿತನಾಗಿದ್ದೆ. ಆದರೆ ಆ ಮಕ್ಕಳು ‘ನಮ್ಮ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಎಂಜಿನಿಯರಿಂಗ್ ಯಾಕಿಲ್ಲ’ ಎಂದು ಪ್ರಶ್ನಿಸಿದರು. ಇದು ದೇಶದ ಮಹಿಳೆಯರಲ್ಲಿ ಬದಲಾದ ಮನೋಭಾವದ ಪ್ರತೀಕ ಮತ್ತು ಎಲ್ಲ ಕ್ಷೇತ್ರಗಳಲ್ಲಿ ಸಮಾನ ಅವಕಾಶ ಪಡೆಯುವ ಅವರ ಬಯಕೆಯನ್ನು ಪ್ರತಿನಿಧಿಸುತ್ತದೆ ಎಂದು ಭಾವಿಸಿದ್ದೇನೆ ಎಂದರು.
ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ, ಸ್ವಾತಂತ್ರ್ಯ ಹೋರಾಟಗಾರರಾಗಿ ಚಿರಪರಿಚಿತರು. ಮೂಲಭೂತ ಹಕ್ಕುಗಳನ್ನು ಒಳಗೊಂಡ ಸಂವಿಧಾನವನ್ನು ದೇಶಕ್ಕೆ ಸಮರ್ಪಿಸಿ ರಾಷ್ಟ್ರ ನಿರ್ಮಾಣದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ. ಅಂಬೇಡ್ಕರ್ ನೀಡಿದ ಸಮಾನತೆಯ ಪರಿಕಲ್ಪನೆಯಿಂದಾಗಿ ನಾವೆಲ್ಲ ಸಮಾನ ಭಾರತೀಯರಾಗಿ ರೂಪುಗೊಳ್ಳಲು ಸಾಧ್ಯವಾಗಿದೆ. ನಮ್ಮ ಸರ್ಕಾರ ಈ ಸಮಾನತೆಯ ಆಶಯವನ್ನು ಸಾಕಾರಗೊಳಿಸುವ ವಿವಿಧ ಯೋಜನೆ, ನೀತಿಗಳನ್ನು ನೀಡುತ್ತಿದೆ. ಅವಕಾಶದಲ್ಲಿ ಸಮಾನತೆ ತರುವುದು ನಮ್ಮ ಸರ್ಕಾರದ ಪ್ರಮುಖ ಆಶಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಟಿ.ವಿ.ಎಲ್.ಎನ್. ರಾವ್, ಪ್ರಾಂಶುಪಾಲೆ ಡಿ.ಶಾಂತಿ ಉಪಸ್ಥಿತರಿದ್ದರು.
ಇಬ್ಬರಿಗೆ ಸ್ಥಳದಲ್ಲೇ ಉದ್ಯೋಗ
ಎನ್‌ಎಸ್‌ಟಿಐಡಬ್ಲುನ ವಿವಿಧ ವಿಭಾಗದ ವಿದ್ಯಾರ್ಥಿನಿಯರ ರೂಪಿಸಿದ ವಿವಿಧ ಮಾಡೆಲ್‌ಗಳ ಪ್ರದರ್ಶನವನ್ನು ರಾಜೀವ್ ಚಂದ್ರಶೇಖರ್ ವೀಕ್ಷಿಸಿದರು. ವಿದ್ಯಾರ್ಥಿನಿಯರ ಉದ್ಯೋಗ ಅವಕಾಶಗಳ ಬಗ್ಗೆ ತರಬೇತಿ ಸಂಸ್ಥೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. 2020-21ರ ಸಾಲಿನ ಕಂಪ್ಯೂಟರ್ ಸಾಫ್‌್ಟವೇರ್ ಅಪ್ಲಿಕೇಷನ್ ವಿಭಾಗದ ವಿದ್ಯಾರ್ಥಿನಿಯರು ರೂಪಿಸಿದ ಮೇಕ್ ಇನ್ ಇಂಡಿಯಾ ಮಾದರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು ಇಬ್ಬರು ವಿದ್ಯಾರ್ಥಿನಿಯರನ್ನು ಸ್ಕಿಲ್ ಇಂಡಿಯಾದ ಡಿಜಿಟಲ್ ಯೋಜನೆಗೆ ಸೇರಿಸಿಕೊಳ್ಳುವ ಭರವಸೆ ನೀಡಿದರು.
13 ವಿಭಾಗದಲ್ಲಿ ತರಬೇತಿ
ಕೇಂದ್ರ ಕೌಶಲ ಸಚಿವಾಲಯಕ್ಕೆ ಸೇರಿರುವ ಮಹಿಳೆಯರಿಗಾಗಿನ ರಾಷ್ಟ್ರೀಯ ಕೌಶಲ ತರಬೇತಿ ಸಂಸ್ಥೆಯಲ್ಲಿ ಹತ್ತನೇ ತರಗತಿ ಉತ್ತೀರ್ಣರಾಗಿರುವ ಯಾವುದೇ ವಯೋಮಾನದ ಮಹಿಳೆಯರಿಗೆ ಒಂದು ಅಥವಾ ಎರಡು ವರ್ಷದ ತರಬೇತಿಯನ್ನು ನೀಡಲಾಗುತ್ತದೆ. ಫ್ಯಾಶನ್ ಡಿಸೈನ್, ಕಂಪ್ಯೂಟರ್ ಸಾಫ್‌್ಟವೇರ್ ಅಪ್ಲಿಕೇಷನ್, ಮಾಹಿತಿ ತಂತ್ರಜ್ಞಾನ, ಸೆಕ್ರೆಟರಿಯಲ್ ಪ್ರ್ಯಾಕ್ಟಿಸ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಕಾಸ್ಮೆಟಲಜಿ, ಡ್ರೆಸ್ ಮೇಕಿಂಗ್ ಹೀಗೆ ಒಟ್ಟು 13 ವಿಭಾಗದಲ್ಲಿ ತರಬೇತಿ ನೀಡಲಾಗುತ್ತದೆ. ಜೂನ್ ಅಥವಾ ಜುಲೈ ತಿಂಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಇಲ್ಲಿ ತರಬೇತಿ ಪಡೆದವರಲ್ಲಿ ಶೇ.80 ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಲಭಿಸಿದೆ ಎಂದು ಸಂಸ್ಥೆಯ ಪ್ರಾಂಶುಪಾಲೆ ಡಿ.ಶಾಂತಿ ತಿಳಿಸಿದ್ದಾರೆ.