ಬದುಕುವ ಆಸೆ ಬಿಟ್ಟಿದ್ದ ನಮ್ಮನ್ನು ರಕ್ಷಿಸಿದ್ದು ಭಾರತ ಸರ್ಕಾರ: ಸುಮಿ ಅನುಭವ ಬಿಚ್ಚಿಟ್ಟ ಕನ್ನಡಿಗ!

*14 ದಿನ ಯತ್ನಿಸಿದೆವು, ಕೊನೆಗೆ ಭಾರತ ಸರ್ಕಾರ ನೆರವಿಗೆ ಬಂತು!
*3 ದಿನ ನೀರು ಕುಡಿದು ಬದುಕಿದ್ದೆವು: ಸುಮಿ ಅನುಭವ ಬಿಚ್ಚಿಟ್ಟಅಜಯ್‌
*ಉಕ್ರೇನ್‌ನಿಂದ 12 ಕನ್ನಡಿಗರ ಕೊನೆಯ ತಂಡ ವಾಪಸ್‌
*ಸುಮಿಯಲ್ಲಿ ಸಿಲುಕಿದ್ದವರು ಸುರಕ್ಷಿತವಾಗಿ ತವರಿಗೆ
*ಉಕ್ರೇನ್‌ನಲ್ಲಿ ಒಟ್ಟಾರೆ 633 ಕನ್ನಡಿಗರ ರಕ್ಷಣೆ! 

Had lost hope that we would survive Indian Govt helped us Ukraine Return Karnataka Student mnj

ಬೆಂಗಳೂರು (ಮಾ. 13): ‘ಸುಮಿ ನಗರದ ಒಳಭಾಗದಲ್ಲಿ ಉಕ್ರೇನ್‌, ಹೊರಭಾಗರದಲ್ಲಿ ರಷ್ಯಾ ಸೈನಿಕರು ಸುತ್ತುವರೆದಿದ್ದರು. ಮೂರು ದಿನ ಊಟ ಇಲ್ಲದೇ ಹಸಿವಿನಲ್ಲಿ ನರಳಿದ್ದೇವೆ. ಸತತ 14 ದಿನ ಪ್ರಯತ್ನಪಟ್ಟರೂ ಭಾರತಕ್ಕೆ ಸಾಧ್ಯವಾಗಿರಲಿಲ್ಲ. ತವರು ಸೇರುತ್ತೇವೆ ಎಂಬ ಆಸೆಯನ್ನೇ ಕೈಬಿಟ್ಟಿದ್ದೆವು. ಕೊನೆಗೂ ಕೇಂದ್ರ ಸರ್ಕಾರ ನಮ್ಮ ನೆರವಿಗೆ ಬಂತು. ಕೇಂದ್ರ ಸರ್ಕಾರಕ್ಕೆ ಧನ್ಯವಾದ’- ಇದು ಆಪರೇಷನ್‌ ಗಂಗಾ ಕಾರ್ಯಾಚರಣೆಯ ಕೊನೆಯ ವಿಮಾನದಲ್ಲಿ ಉಕ್ರೇನ್‌ನ ಸುಮಿ ನಗರದಿಂದ ತವರಿಗೆ ಮರಳಿದ ಅಜಯ್‌ ಮಾತು.

‘ಯುದ್ಧದ ತೀವ್ರತೆ ಹೆಚ್ಚಿದ್ದ ಪ್ರದೇಶಗಳಲ್ಲಿ ಸುಮಿಯೇ ಪ್ರಮುಖವಾಗಿತ್ತು. ಸುಮಿ ಒಳಭಾಗವನ್ನು ಉಕ್ರೇನ್‌ ಸೈನಿಕರು ಸುತ್ತುವರೆದಿದ್ದರೇ, ಹೊರಭಾಗದಲ್ಲಿ ರಷ್ಯಾದ ಸೈನ್ಯ ಸುತ್ತುವರೆದಿದ್ದರು. ನಿರಂತರ ಶೆಲ್‌ ದಾಳಿಗಳು ನಡೆಯುತ್ತಿದ್ದವು. ಇದರಿಂದಾಗಿ ಉಕ್ರೇನ್‌ನ ಬೇರೆ ನಗರಗಳಂತೆ ಗಡಿಭಾಗಕ್ಕೆ ಇಲ್ಲಿಂದ ತೆರಳಲು ಅವಕಾಶ ಇರಲಿಲ್ಲ. ಇತರೆ ನಗರಗಳ ವಿದ್ಯಾರ್ಥಿಗಳಿಗೆ ಗಡಿಭಾಗಕ್ಕೆ ಬನ್ನಿ ಎನ್ನುತ್ತಿದ್ದ ಭಾರತೀಯ ರಾಯಭಾರಿ ಕಚೇರಿ ಸಿಬ್ಬಂದಿ ಸುಮಿಯಲ್ಲಿದ್ದ ನಮಗೆ ಬಂಕರ್‌ಗಳಿಂದ ಹೊರಬರಲೇ ಬೇಡಿ ಎಂಬ ಸೂಚನೆಯನ್ನು ನೀಡಿದ್ದರು’ ಎಂದರು.

ಇದನ್ನೂ ಓದಿ: ಆಪರೇಷನ್‌ ಗಂಗಾ ಯಶಸ್ವಿ: ಕನ್ನಡಿಗರ ಪರವಾಗಿ ಮೋದಿಗೆ ತೇಜಸ್ವಿ ಸೂರ್ಯ ಧನ್ಯವಾದ!

‘ಆದರೂ ಧೈರ್ಯ ಮಾಡಿ ಗಡಿಗೆ ಹೊಗೋಣ ಎಂದರೆ, ಖಾರ್ಕೀವ್‌ನಲ್ಲಿ ನವೀನ್‌ ಅವರ ಸಾವು ಕೂಡಾ ದೊಡ್ಡ ಆಘಾತ ನೀಡಿತು. ಹಾಗಾಗಿ ಅನಿವಾರ್ಯವಾಗಿ ಬಂಕರ್‌ಗಳಲ್ಲಿ ಉಳಿಯಬೇಕಾಗಿತ್ತು. ದಿನ ಕಳೆದಂತೆ ರಷ್ಯಾದ ಸೈನಿಕರು ಸುಮಿ ನಗರದ ಮೂಲ ಸೌಕರ್ಯಗಳನ್ನು ಸಿಗದಂತೆ ಮಾಡಿದರು. ವಿದ್ಯುತ್‌, ನೀರು, ಆಹಾರ ಪೂರೈಕೆಯಲ್ಲಿ ಸಾಕಷ್ಟುತೊಂದರೆಯಾಗಿತ್ತು. ಮೂರು ದಿನ ಊಟಕ್ಕೂ ಸಿಗದೇ ಕಚ್ಚಾ ನೀರು (ಟ್ಯಾಪ್‌ ನೀರು) ಕುಡಿದುಕೊಂಡಿದ್ದೆವು’ ಎಂದು ತಮ್ಮ ಸಂಕಷ್ಟಗಳನ್ನು ವಿವರಿಸಿದರು.

ಉಕ್ರೇನ್‌ನಿಂದ ಕನ್ನಡಿಗರ ಕೊನೆಯ ತಂಡ ವಾಪಸ್‌: ಆಪರೇಷನ್‌ ಗಂಗಾ ಕಾರ್ಯಾಚರಣೆಯ ಅಂತಿಮ ತಂಡದಲ್ಲಿದ್ದ 12 ಕನ್ನಡಿಗ ವಿದ್ಯಾರ್ಥಿಗಳು ಶುಕ್ರವಾರ ತಡರಾತ್ರಿ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಮೂಲಕ ಒಟ್ಟಾರೆ ಯುದ್ಧ ಪ್ರದೇಶದಲ್ಲಿ ಸಿಲುಕಿದ್ದ 633 ವಿದ್ಯಾರ್ಥಿಗಳು ತವರಿಗೆ ಮರಳಿದಂತಾಗಿದೆ. ಉಕ್ರೇನ್‌ನ ಸುಮಿಯಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ಹೊತ್ತ ವಿಮಾನವು ಶುಕ್ರವಾರ ದೆಹಲಿಗೆ ಬಂದತ್ತು. 

ಆ ವಿಮಾನದಲ್ಲಿ 12 ಕನ್ನಡಿಗ ವಿದ್ಯಾರ್ಥಿಗಳಿದ್ದರು. ದೆಹಲಿಯ ಕನ್ನಡ ಭವನದಲ್ಲಿ ವಿಶ್ರಾಂತಿ ಪಡೆದು ಶುಕ್ರವಾರ ತಡರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಯುದ್ಧ ಪ್ರದೇಶದಲ್ಲಿ ಎರಡು ವಾರ ಇದ್ದು, ಅಂತಿಮವಾಗಿ ಮನೆ ಸೇರುತ್ತಿರುವ ವಿದ್ಯಾರ್ಥಿಗಳನ್ನು ಪೋಷಕರು ಸಂತಸದಿಂದ ಬರಮಾಡಿಕೊಂಡರು. ಆಗಮಿಸಿದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.

ಇದನ್ನೂ ಓದಿ: Russia Ukraine War: ಒಂದ್ಹೊತ್ತು ಊಟ..! ಕುಡಿಯೋಕೆ ಮಂಜುಗಡ್ಡೆ ನೀರು..!: ಸುಮಿಯಿಂದ ಮರಳಿದ ಕನ್ನಡಿಗರ ಅನುಭವ!

ಉಕ್ರೇನ್‌ ಗಡಿಗಳಿಂದ ಮುಂಬೈಗೆ ಬಂದ 10 ವಿಮಾನಗಳಲ್ಲಿ 54, ದೆಹಲಿಗೆ ಬಂದ 53 ವಿಮಾನಗಳಲ್ಲಿ 518 ಸೇರಿದಂತೆ 572 ಕನ್ನಡಿಗರ ವಿದ್ಯಾರ್ಥಿಗಳು ಆಪರೇಷನ್‌ ಗಂಗಾ ಕಾರ್ಯಾಚರಣೆಯಲ್ಲಿ ರಾಜ್ಯಕ್ಕೆ ಮರಳಿದ್ದಾರೆ. ಇನ್ನು ಕಾರ್ಯಾಚರಣೆ ಆರಂಭಕ್ಕೂ ಮುನ್ನ 61 ವಿದ್ಯಾರ್ಥಿಗಳು ರಾಜ್ಯಕ್ಕೆ ಹಿಂದಿರುಗಿದ್ದರು.

ಇದರೊಂದಿಗೆ ಉಕ್ರೇನ್‌ನಿಂದ ಆಗಮಿಸಿದ ಕನ್ನಡಿಗರ ಒಟ್ಟಾರೆ ಸಂಖ್ಯೆ 633ಕ್ಕೆ ಹೆಚ್ಚಳವಾಗಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ.

ಆಪರೇಷನ್‌ ಗಂಗಾದಲ್ಲಿ ತವರು ಸೇರಿದವರು: ದಿನಾಂಕ-ಆಗಮಿಸಿದ ಕನ್ನಡಿಗರು: ಫೆ.27-30, ಫೆ.28-7, ಮಾ.1-18, ಮಾ.2-31, ಮಾ.3-104, ಮಾ.4-92, ಮಾ.5-90, ಮಾ.6-88, ಮಾ.7-43, ಮಾ.8-57, ಮಾ.11-12,  ಯುದ್ಧಾರಂಭ ಮುನ್ನ-61, ಒಟ್ಟು-633
 

Latest Videos
Follow Us:
Download App:
  • android
  • ios