ಭಾರೀ ಮಳೆಗೆ ಹೊಳೆಯಂತಾದ ಹರಿಯಾಣ ರಸ್ತೆ: ಬೆಂಗಳೂರು ಟ್ರೋಲ್ ಮಾಡಿದವರು ಈಗೇನ್ ಅಂತಾರೆ?
ಉತ್ತರದ ರಾಜ್ಯಗಳಲ್ಲಿ ವರುಣಾರ್ಭಟ ಶುರುವಾಗಿದ್ದು, ಅನೇಕ ರಾಜ್ಯಗಳಲ್ಲಿ ಮಳೆ ಜೋರಾಗಿ ಸುರಿಯುತ್ತಿದೆ. ಪರಿಣಾಮ ಅಲ್ಲಿನ ನಗರಗಳ ರಸ್ತೆಯೂ ಹೊಳೆಯಂತಾಗಿದೆ. . ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿದೆ.
ಬೆಂಗಳೂರು: ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಸುರಿದ ದಾಖಲೆಯ ಮಳೆಗೆ ರಸ್ತೆಗಳು ಹೊಳೆಗಳಂತಾಗಿದ್ದವು, ಅಪಾರ್ಟ್‌ಮೆಂಟ್‌ಗಳು ಕೂಡ ಕೆಳಭಾಗ ಮುಳುಗಡೆಯಾಗಿ, ಆಫೀಸಿನಿಂದ ಕಾರು ಬೈಕ್‌ಗಳಲ್ಲಿ ಹೋಗಬೇಕಾದವರು ದೋಣಿ ಬೋಟ್ ಬಳಸುವ ಸ್ಥಿತಿ ಬಂದೊದಗಿತ್ತು. ಈಜುಕೊಳಗಳಂತಾದ ರಸ್ತೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಟ್ರೋಲ್ ಮಾಡಲಾಗಿತ್ತು. ರಾಜ್ಯ ಬಿಟ್ಟು ಬಂದು ಬೆಂಗಳೂರಿನಲ್ಲಿ ನೆಲೆಸಿದ ಅನೇಕ ಐಟಿ ಬಿಟಿ ಉದ್ಯೋಗಿಗಳು, ಸ್ಟಾರ್ಟ್‌ಅಪ್‌ಗಳ ಮಾಲೀಕರು ಬೆಂಗಳೂರನ್ನು ಬೈಯ್ಯಲು ಶುರು ಮಾಡಿದ್ದರು. ಇದನ್ನು ವಿರೋಧಿಸಿ ಕೆಲ ಕನ್ನಡಿಗರು ಬೆಂಗಳೂರು ಪರ ಅಭಿಯಾನವನ್ನು ಕೂಡ ನಡೆಸಿದ್ದರು. ಆದರೆ ಇವೆಲ್ಲಾ ಈಗ ಹಳೇ ವಿಚಾರ.
ಹೊಸದೇನು ಅಂತೀರಾ ಈಗ ಉತ್ತರದ ರಾಜ್ಯಗಳಲ್ಲಿ ವರುಣಾರ್ಭಟ ಶುರುವಾಗಿದ್ದು, ಅನೇಕ ರಾಜ್ಯಗಳಲ್ಲಿ ಮಳೆ ಜೋರಾಗಿ ಸುರಿಯುತ್ತಿದೆ. ಪರಿಣಾಮ ಅಲ್ಲಿನ ನಗರಗಳ ರಸ್ತೆಯೂ ಹೊಳೆಯಂತಾಗಿದೆ. ಹರಿಯಾಣದ (Haryana) ಗುರುಗ್ರಾಮ್‌ನಲ್ಲಿ (Gurugram) ಭಾರಿ ಮಳೆಯಾಗಿದ್ದು, ಇದರ ಪರಿಣಾಮ ದೆಹಲಿ ಗುರುಗ್ರಾಮ್ ಎಕ್ಸ್‌ಪ್ರೆಸ್ ವೇ (Express way) ನದಿಯಂತಾಗಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿದೆ. ಗುರುಗ್ರಾಮದ ರಸ್ತೆಗಳು ನೀರಿನಿಂದ ತುಂಬಿ ಹೊಳೆಯಂತಾಗಿರುವ ಹಲವು ವಿಡಿಯೋಗಳು ಫೋಟೋಗಳ ಪ್ರವಾಹದಿಂದ ಟ್ವಿಟ್ಟರ್ ತುಂಬಿದೆ.
ದೇಶದ ಬೇರೆ ಮಹಾನಗರಗಳಲ್ಲಿ ಪ್ರವಾಹ ಪರಿಸ್ಥಿತಿ ಆವರಿಸಿದಾಗ ಆ ನಗರದ ಹೆಸರಿನ ಮುಂದೆ ಸೇವ್ ಹ್ಯಾಷ್‌ಟಾಗ್ ಬಳಸುತ್ತಿದ್ದ ಜನ ಬೆಂಗಳೂರಿನಲ್ಲಿ ಪ್ರವಾಹವಾದಾಗ ಬೆಂಗಳೂರಿನ ಮೂಲ ಸೌಕರ್ಯಗಳು ಸರಿ ಇಲ್ಲ ಎಂದು ಬೈಯ್ಯಲು ಶುರು ಮಾಡಿದ್ದರು. ಇದರಿಂದ ಬೆಂಗಳೂರಿನ (Bangaluru) ಮೂಲ ನಿವಾಸಿಗಳು ಹಾಗೂ ಬೆಂಗಳೂರಿಗೆ ವಲಸೆ ಬಂದವರು ಎಂದು ಟ್ವಿಟ್ಟರ್‌ನಲ್ಲಿ ಚರ್ಚೆ ಶುರುವಾಗಿತ್ತು. ಅಲ್ಲದೇ #ಕನ್ನಡಿಗರು #ಲೀವ್ ಬೆಂಗಳೂರು ಎಂಬ ಹೆಸರಿನಲ್ಲಿ ಟ್ವಿಟ್ಟರ್‌ನಲ್ಲಿ ಅಭಿಯಾನ ಶುರು ಮಾಡಿದ್ದರು. ಆದರೆ ಈಗ ಉತ್ತರದ ಕೆಲ ರಾಜ್ಯಗಳ ಪರಿಸ್ಥಿತಿ ಬೆಂಗಳೂರಿಗಿಂತಲೂ ಕಡೇ ಇದೆ ಎಂಬುದನ್ನು ಟ್ವಿಟ್ಟರ್‌ನಲ್ಲಿ(Twitter) ಹರಿದು ಬರುತ್ತಿರುವ ಫೋಟೋ ವಿಡಿಯೋಗಳು ತೋರಿಸುತ್ತಿವೆ. ಈಗ ಟ್ರೋಲ್ ಮಾಡುವ ಸರದಿ ಬೆಂಗಳೂರಿಗರದ್ದಾಗಿದೆ.
Bengaluru Floods: ಭೀಕರ ಮಳೆಗೆ 400 ಕೋಟಿ ರೂ. ನಷ್ಟ!
ಉತ್ತರಪ್ರದೇಶದಲ್ಲಿಯೂ ಮಳೆಯ ಆರ್ಭಟ ಜೋರಾಗಿದ್ದು, ರಾಷ್ಟ್ರ ರಾಜಧಾನಿ ಪ್ರದೇಶದಲ್ಲೂ (NCR) ಮಳೆಯಿಂದ ಜನ ಸಂಕಷ್ಟ ಪಡುವಂತಾಗಿದೆ. ಉತ್ತರಪ್ರದೇಶದ ಒಟ್ಟು ನಾಲ್ಕು ಜಿಲ್ಲೆಗಳಲ್ಲಿ ಮಳೆಯಿಂದಾಗಿ ಸಾವುನೋವು ಉಂಟಾಗಿದ್ದು, ಮಳೆಗೆ ಒಟ್ಟು 12 ಜನ ಬಲಿ ಆಗಿದ್ದಾರೆ. ಮಳೆಯಿಂದ ಮೃತರಾದವರಲ್ಲಿ ನಾಲ್ವರು ಅನಾಥ ಮಕ್ಕಳು ಸೇರಿದ್ದಾರೆ. ಭಾರಿ ಮಳೆ ಹಿನ್ನೆಲೆಯಲ್ಲಿ ಗುರುಗ್ರಾಮ್ ಹಾಗೂ ನೋಯ್ಡಾದಲ್ಲಿ ಇಂದು ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಲ್ಲದೇ ಗುರುಗ್ರಾಮದ ವಿಪತ್ತು ನಿರ್ವಹಣಾ ವಿಭಾಗವೂ ಆ ಪ್ರದೇಶದ ಖಾಸಗಿ ಕಾರ್ಪೋರೇಟ್ ಸಂಸ್ಥೆಗಳಿಗೆ ಇಂದು ಮನೆಯಿಂದಲೇ ಕೆಲಸ ಮಾಡುವಂತೆ ತನ್ನ ಉದ್ಯೋಗಿಗಳಿಗೆ ನಿರ್ದೇಶನ ನೀಡುವಂತೆ ತಿಳಿಸಿದೆ.
ಭಾರಿ ಮಳೆಗೆ ಕರ್ನಾಟಕದಲ್ಲಿ 127 ಜನ ಬಲಿ: ಸಚಿವ ಅಶೋಕ್‌ರಿಂದ ಮಾಹಿತಿ
ಹರ್ಯಾಣ ಹಾಗೂ ಮಧ್ಯಪ್ರದೇಶದಲ್ಲಿ ಇಂದು ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹಾಗೆಯೇ ಉತ್ತರಾಖಂಡ್‌ನಲ್ಲಿ ಮುಂದಿನ ಎರಡು ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.