ರಾಜಧಾನಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಸುರಿದ ರಣಭೀಕರ ಮಳೆಯಿಂದ ಪ್ರವಾಹ ಸೃಷ್ಟಿಯಾಗಿ ಈ ವರೆಗೆ 7,770 ಮನೆಗಳಿಗೆ ನೀರು ನುಗ್ಗಿದ್ದು, ಮೂರು ಕಿ.ಮೀ. ಪಾದಚಾರಿ ಮಾರ್ಗ ಸೇರಿದಂತೆ 400 ಕಿ.ಮೀ. ರಸ್ತೆ ಹಾಳಾಗಿದ್ದು, ಬರೋಬ್ಬರಿ .400 ಕೋಟಿ ನಷ್ಟಉಂಟಾಗಿದೆ ಎಂದು ಬಿಬಿಎಂಪಿ ಅಂದಾಜಿಸಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು (ಸೆ.20) : ರಾಜಧಾನಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಸುರಿದ ರಣಭೀಕರ ಮಳೆಯಿಂದ ಪ್ರವಾಹ ಸೃಷ್ಟಿಯಾಗಿ ಈ ವರೆಗೆ 7,770 ಮನೆಗಳಿಗೆ ನೀರು ನುಗ್ಗಿದ್ದು, ಮೂರು ಕಿ.ಮೀ. ಪಾದಚಾರಿ ಮಾರ್ಗ ಸೇರಿದಂತೆ 400 ಕಿ.ಮೀ. ರಸ್ತೆ ಹಾಳಾಗಿದ್ದು, ಬರೋಬ್ಬರಿ .400 ಕೋಟಿ ನಷ್ಟಉಂಟಾಗಿದೆ ಎಂದು ಬಿಬಿಎಂಪಿ ಅಂದಾಜಿಸಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ರಾಜಕಾಲುವೆ, ಕೆರೆ ಒತ್ತುವರಿ ಮಾಡಿದ 600 ಕಟ್ಟಡಗಳಿಗೆ ನೋಟಿಸ್‌: ತುಷಾರ್‌ ಗಿರಿನಾಥ್

ಬೆಂಗಳೂರು ನಗರದಲ್ಲಿ ಪ್ರಸಕ್ತ ಮುಂಗಾರು ಅವಧಿಯಲ್ಲಿ 783 ಮಿ.ಮೀ. ಮಳೆಯಾಗಿದ್ದು, ಇದು ವಾಡಿಕೆ ಪ್ರಮಾಣಕ್ಕಿಂತ ಹೆಚ್ಚಿನ ಮಳೆಯಾಗಿದೆ. ಮಳೆಯಿಂದ 209ಕ್ಕೂ ಅಧಿಕ ಪ್ರದೇಶದಲ್ಲಿ ಹಾನಿ ಉಂಟಾಗಿದೆ. ತಗ್ಗು ಪ್ರದೇಶ ಸೇರಿದಂತೆ ವಿವಿಧ ಕಡೆ ಸಾವಿರಾರು ಸಂಖ್ಯೆಯ ಮನೆಗಳಿಗೆ ನೀರು ನುಗ್ಗಿ ಪಾತ್ರೆ, ಬಟ್ಟೆ, ಹಾಸಿಗೆ, ದಿನಸಿ ಸೇರಿದಂತೆ ಮತ್ತಿತ್ತರೆ ವಸ್ತುಗಳು ನೀರು ಪಾಲಾಗಿದೆ. ಇನ್ನು ಪ್ರವಾಹ ಸೃಷ್ಟಿಯಿಂದ ರಸ್ತೆ ಕಿತ್ತು ಹೋಗಿವೆ. ಶಾಲೆ, ಆಸ್ಪತ್ರೆ ಸೇರಿದಂತೆ ಸರ್ಕಾರಿ ಕಟ್ಟಡಗಳು ಶಿಥಿಲಗೊಂಡಿವೆ. ಒಟ್ಟಾರೆ .400 ಕೋಟಿ ನಷ್ಟಉಂಟಾಗಿದೆ ಎಂದು ಅಂದಾಜಿಸಿ ಕಂದಾಯ ಇಲಾಖೆಗೆ ಪರಿಹಾರ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಸಂತ್ರಸ್ತರಿಗೆ ಪರಿಹಾರ ವಿತರಣೆ ಇನ್ನೂ ಬಾಕಿ:

ಬಿಬಿಎಂಪಿ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಈವರೆಗೆ 7,770 ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಈ ಪೈಕಿ ಈಗಾಗಲೇ ರಾಜ್ಯ ವಿಪತ್ತು ಪರಿಹಾರ ನಿಧಿ ಮಾರ್ಗಸೂಚಿ ಪ್ರಕಾರ .13.45 ಕೋಟಿ ಪರಿಹಾರ ಮೊತ್ತವನ್ನು ಸಂತ್ರಸ್ತರ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗಿದೆ. ಇನ್ನೂ ಸುಮಾರು 2,800 ಅಧಿಕ ಸಂತ್ರಸ್ತರಿಗೆ .2.86 ಕೋಟಿ ಪರಿಹಾರ ನೀಡುವುದು ಬಾಕಿದೆ.

ಭಾರೀ ಮಳೆಯಿಂದ ನಗರದಲ್ಲಿ ಒಂದೇ ಒಂದು ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಅವರಿಗೆ .5 ಲಕ್ಷ ಪರಿಹಾರ ನೀಡಲಾಗಿದೆ. 170 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಈ ಪೈಕಿ .9 ಲಕ್ಷ ಪರಿಹಾರ ಮೊತ್ತ ಬಿಡುಗಡೆ ಆಗಿದೆ. ಇನ್ನೂ .2.06 ಕೋಟಿ ಪರಿಹಾರ ವಿತರಣೆ ಬಾಕಿ ಉಳಿದಿದೆ.

341 ಕೋಟಿರೂ. ಮೌಲ್ಯದ 397 ಕಿ.ಮೀ. ರಸ್ತೆ ಹಾನಿ:

ನಗರದಲ್ಲಿ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದ ಒಟ್ಟು 396.72 ಕಿ.ಮೀ ಉದ್ದದ ರಸ್ತೆಗೆ ಹಾಳಾಗಿದ್ದು, ಇದರಿಂದ .336.63 ಕೋಟಿ ನಷ್ಟಉಂಟಾಗಿದೆ. ಅತಿ ಹೆಚ್ಚು ಮಹದೇವಪುರ ಒಂದೇ ವಲಯದಲ್ಲಿ 165 ಕಿ.ಮೀ ಉದ್ದದ ರಸ್ತೆ ಹಾಳಾಗಿರುವುದರಿಂದ .245 ಕೋಟಿ ನಷ್ಟವಾಗಿದೆ. ಇನ್ನು ಬೊಮ್ಮನಹಳ್ಳಿ ವಲಯದಲ್ಲಿ 81 ಕಿ.ಮೀ. ಉದ್ದದ ರಸ್ತೆ ಹಾಳಾಗಿರುವುದರಿಂದ .39 ಕೋಟಿ ನಷ್ಟವಾಗಿದೆ. ರಸ್ತೆಯ ಜತೆಗೆ ಬೊಮ್ಮನಹಳ್ಳಿ ವಲಯದ ಮೂರು ಕಿ.ಮೀ ಉದ್ದದ ಪಾದಚಾರಿ ಮಾರ್ಗ ಹಾಳಾಗಿದ್ದು, .4 ಕೋಟಿ ನಷ್ಟವಾಗಿದೆ. ಪೂರ್ವ ವಲಯದಲ್ಲಿ ಶಾಲೆ, ಆಸ್ಪತ್ರೆ ಸೇರಿದಂತೆ ಸರ್ಕಾರದ 11 ಕಟ್ಟಡಗಳು ಮಳೆಯಿಂದ ಶಿಥಿಲಗೊಂಡಿದ್ದು, .65 ಲಕ್ಷ ನಷ್ಟವಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರು ಪ್ರವಾಹ ಎಫೆಕ್ಟ್: ಒತ್ತುವರಿ ತೆರವಿಗೆ ಟೊಂಕಕಟ್ಟಿ ನಿಂತ ಸಿಎಂ!

2 ಪ್ರಾಣ ಹಾನಿ:

ಮಳೆಯಿಂದ ಮಹದೇವಪುರ ವಲಯದಲ್ಲಿ ಎರಡು ಪ್ರಾಣ ಹಾನಿಯಾಗಿದ್ದು, ಪಾಲಿಕೆಯಿಂದ ತಲಾ .5 ಲಕ್ಷದಂತೆ .10 ಲಕ್ಷ ಪರಿಹಾರ ನೀಡಲಾಗಿದೆ. ಬೊಮ್ಮನಹಳ್ಳಿಯಲ್ಲಿ .2 ಲಕ್ಷ ಪ್ರಾಣ ಹಾನಿಗೆ ಸಂಬಂಧಿಸಿದಂತೆ ಪರಿಹಾರ ನೀಡಲಾಗಿದ್ದು, ಒಟ್ಟಾರೆ .12 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ಪಾಲಿಕೆ ಸಿದ್ಧಪಡಿಸಿರುವ ವರದಿಯಲ್ಲಿ ತಿಳಿಸಿದೆ.

ಮಳೆಯಿಂದ ನಗರದ ರಸ್ತೆ, ರಾಜಕಾಲುವೆ, ಸೇತುವೆ, ಪಾದಚಾರಿ ಮಾರ್ಗ, ಸರ್ಕಾರಿ ಕಟ್ಟಡ ಸೇರಿದಂತೆ ಮೂಲಸೌಕರ್ಯಕ್ಕೆ ಉಂಟಾದ ಹಾನಿಯ ಬಗ್ಗೆ ವರದಿ ಸಿದ್ಧಪಡಿಸಿ ಪರಿಹಾರ ನೀಡುವಂತೆ ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಟ್ಟಾರೆ ಮಳೆಯಿಂದ .400 ಕೋಟಿ ನಷ್ಟವಾಗಿದೆ.

-ತುಷಾರ್‌ ಗಿರಿನಾಥ, ಮುಖ್ಯ ಆಯುಕ್ತ, ಬಿಬಿಎಂಪಿ

ವಲಯ ಮನೆಗೆ ನೀರು ನುಗ್ಗಿದ ಸಂಖ್ಯೆ ಹಾಳಾದ ರಸ್ತೆ ವಿವರ(ಕಿ.ಮೀ.)

  • ಪೂರ್ವ 1,141 83.48
  • ಪಶ್ಚಿಮ 946 0
  • ದಕ್ಷಿಣ 1,048 18.74
  • ಆರ್‌ಆರ್‌ನಗರ 686 39
  • ದಾಸರಹಳ್ಳಿ 261 7
  • ಬೊಮ್ಮನಹಳ್ಳಿ 337 81
  • ಮಹದೇವಪುರ 3,009 165
  • ಯಲಹಂಕ 342 2.50
  • ಒಟ್ಟು 7,770 396.72