ಪೊಲೀಸ್ ಠಾಣೆಯೊಳಗೆ ನಾಗರಿಕರು ವಿಡಿಯೋ ಮಾಡುವುದನ್ನು ನಿಷೇಧಿಸಿದ್ದಕ್ಕಾಗಿ ಗುಜರಾತ್ ಹೈಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಸಿಸಿಟಿವಿಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ಅನ್ಯಾಯದ ವಿರುದ್ಧ ಸಾಕ್ಷಿಗಾಗಿ ವಿಡಿಯೋ ಮಾಡುವುದರಲ್ಲಿ ತಪ್ಪೇನಿದೆ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ.

ಇಂದು ಎಲ್ಲ ಜನರ ಕೈಯಲ್ಲಿಯೂ ಮೊಬೈಲ್‌ ಇರುವ ಕಾರಣ, ಅದು ಕೆಲವೊಮ್ಮೆ ಮಿಸ್‌ಯೂಸ್‌ ಆಗುವ ಜೊತೆಗೆ, ಕೆಲವೊಮ್ಮೆ ಭ್ರಷ್ಟಾಚಾರಿಗಳ, ಮೋಸಗಾರರ, ಲೂಟಿಕೋರರ, ವಂಚಕರ, ಅನ್ಯಾಯ ಎಸಗುವವರ ಮೋಸವನ್ನು ಬಯಲು ಮಾಡುವಲ್ಲಿಯೂ ಪ್ರಮುಖ ಸಾಕ್ಷಿಯಾಗಿ ಹೊರಹೊಮ್ಮುತ್ತದೆ. ಆದರೆ, ತಾವು ಮಾಡುವ ಅನ್ಯಾಯವನ್ನು ಜನರು ವಿಡಿಯೋ ಮಾಡುವುದೇ ತಪ್ಪು ಎನ್ನುವಂತೆ ಹೈಕೋರ್ಟ್‌ನಲ್ಲಿ ವಾದ ಮಾಡಿ, ನ್ಯಾಯಮೂರ್ತಿಗಳಿಂದ ಸರ್ಕಾರ ಉಗಿಸಿಕೊಂಡಿರುವ ಕುತೂಹಲದ ಘಟನೆಯೊಂದು ಹೈಕೋರ್ಟ್‌ನಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ಸರ್ಕಾರದ ಬೆವರಿಳಿಸಿದ ಕೋರ್ಟ್

ಗುಜರಾತ್‌ ಹೈಕೋರ್ಟ್‌‌ನಲ್ಲಿ ಈ ಘಟನೆ ನಡೆದಿದ್ದು, ಕೋರ್ಟ್ ಕಲಾಪದ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಪೊಲೀಸ್ ಠಾಣೆಯೊಳಗೆ ನಾಗರಿಕರು ವಿಡಿಯೋಗ್ರಫಿ ಮಾಡುವುದನ್ನು ನಿಷೇಧಿಸಿದ್ದಕ್ಕಾಗಿ ಪೊಲೀಸರನ್ನು ಹೈಕೋರ್ಟ್ ನ್ಯಾಯಮೂರ್ತಿ ನಿರ್ಜರ್ ಎಸ್. ದೇಸಾಯಿ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು. ಜನರು ಹೀಗೆ ಮಾಡುವುದು ಸರಿಯಲ್ಲ, ಅವರಿಗೆ ವಿಡಿಯೋ ಮಾಡುವ ಅಧಿಕಾರ ಇಲ್ಲ ಎಂದು ವಾದಿಸಿದ್ದ ಸರ್ಕಾರಿ ವಕೀಲರಿಗೆ ಕೋರ್ಟ್ ಬೆವರಿಳಿಸಿದೆ.

ಎಷ್ಟು ಸಿಸಿಟಿವಿ ಕೆಲ್ಸ ಮಾಡತ್ತೆ?

ಸಿಸಿಟಿವಿ ಇರುವಾಗ, ಜನರು ಹೀಗೆ ಪೊಲೀಸ್ ಠಾಣೆ ಒಳಗೆ ವಿಡಿಯೋ ಮಾಡುವುದು ಸರಿಯಲ್ಲ, ಅದು ಕಾನೂನು ಉಲ್ಲಂಘನೆ ಎಂದು ಸರ್ಕಾರ ಪರ ವಕೀಲರು ವಾದಿಸಿದರು. ಸರಿ, ನಿಮ್ಮ ವಾದವನ್ನು ಒಪ್ಪೋಣ, ಮೊದಲು ಹಾಗೆಂದು ಯಾವ ಕಾಯ್ದೆ, ಯಾವ ಸೆಕ್ಷನ್‌ ಹೇಳುತ್ತದೆ ಎಂದು ಪ್ರಶ್ನಿಸಿದಾಗ ವಕೀಲರು ಕಕ್ಕಾಬಿಕ್ಕಿಯಾದರು. ಸಿಸಿಟಿವಿ ಎಲ್ಲಾ ಇರುತ್ತದೆ, ವಿಡಿಯೋ ಯಾಕೆ ಎಂದು ಅವರು ಪ್ರಶ್ನಿಸಿದಾಗ, ಸರ್ಕಾರಗಳ ಎಷ್ಟು ಸಿಸಿಟಿವಿ ಕೆಲಸ ಮಾಡುತ್ತದೆ ಎನ್ನುವುದು ನಮಗೆ ಗೊತ್ತಿದೆ. ಶೇಕಡಾ 80 ರಷ್ಟು ಸಿಸಿಟಿವಿ ಕೆಲಸವೇ ಮಾಡುವುದಿಲ್ಲ. ಹೀಗಿರುವಾಗ ಸಾಕ್ಷಿಗಾಗಿ ವಿಡಿಯೋ ಮಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ನೀವು (ಪೊಲೀಸರು) ಏನು ಬೇಕಾದರೂ ಅನ್ಯಾಯ ಮಾಡಬಹುದು, ಅದನ್ನು ಜನರು ಪ್ರಶ್ನಿಸಬಾರದೇ, ಇದು ಯಾವ ಕಾನೂನಿನಲ್ಲಿ ಇದೆ ಎಂದು ತೋರಿಸಿ ಎಂದಾಗ ಉತ್ತರಿಸಲಾಗದೇ ಸರ್ಕಾರಿ ವಕೀಲೆ ಸುಮ್ಮನಾದರು.

ಹಿಂದೆಯೂ ತೀರ್ಪು

ಈ ವಿಷಯವು ಹೊಸದಲ್ಲ. 2022 ರಲ್ಲಿ, ಬಾಂಬೆ ಹೈಕೋರ್ಟ್ ರವೀಂದ್ರ ಶೀತಲ್‌ರಾವ್ ಉಪಾಧ್ಯಾಯ ವರ್ಸಸ್ ಮಹಾರಾಷ್ಟ್ರ ಸ್ಟೇಟ್ ಪ್ರಕರಣದಲ್ಲಿ, ಅಧಿಕೃತ ರಹಸ್ಯ ಕಾಯ್ದೆಯಡಿಯಲ್ಲಿ ಪೊಲೀಸ್ ಠಾಣೆಗಳು "ನಿಷೇಧಿತ ಸ್ಥಳಗಳಲ್ಲ" ಎಂದು ತೀರ್ಪು ನೀಡಿತ್ತು. ಪೊಲೀಸ್ ಠಾಣೆಯೊಳಗೆ ರಹಸ್ಯವಾಗಿ ಚಿತ್ರೀಕರಣ ಮಾಡುವುದು ಆ ಕಾಯ್ದೆಯಡಿ ಅಪರಾಧವಲ್ಲ, ಏಕೆಂದರೆ ಅದು ಬೇಹುಗಾರಿಕೆಗೆ ಒಳಪಡುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು.