ಅಹಮ್ಮದಾಬಾದ್(ಫೆ.23): ಆರು ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ ಅಂತಿಮ ಹಂತದಲ್ಲಿದೆ. 575 ಸ್ಥಾನಗಳ ಪೈಕಿ ಬಿಜೆಪಿ ಈಗಾಗಲೇ 449 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಕಳೆದ ಬಾರಿಗಿಂತ ಅತ್ಯಧಿಕ ಸ್ಥಾನಗಳಲ್ಲಿ ಮತದಾರರ ಬಿಜೆಪಿಗೆ ಆರ್ಶೀವಾದ ಮಾಡಿದ್ದಾರೆ.  ಈ ದಾಖಲೆಯ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಹೇಳಿದ್ದಾರೆ. 

ಗುಜರಾತ್ ಪಾಲಿಕೆ ಚುನಾವಣಾ ಫಲಿತಾಂಶ: ಭರ್ಜರಿ ಮುನ್ನಡೆಯತ್ತ ಬಿಜೆಪಿ!.

ಅಹಮ್ಮದಾಬಾದ್, ಸೂರತ್, ವಡೋದರ, ರಾಜ್‌ಕೋಟ್, ಭಾವ್‌ನಗರ್ ಹಾಗೂ ಜಾಮ್‌ನಗರ ಪಾಲಿಕೆಗೆ ಚುನಾವಣೆ ನಡೆದಿತ್ತು. 6 ಪಾಲಿಕೆಯ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದೆ. 6 ಮಹಾನಗರ ಪಾಲಿಕೆಯಲ್ಲೂ ಬಿಜೆರಿ ಭರ್ಜರಿ ಬಹುಮತ ಪಡೆದಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.

ಅಂತಿಮ ಹಂತದ ಮತ ಎಣಿಕೆ ಪ್ರಕ್ರಿಯೆ ನಡುವೆ ಪ್ರಧಾನಿ ಮೋದಿ, ಸರಣಿ ಟ್ವೀಟ್ ಮೂಲಕ ಗೆಲುವಿನ ಸಂತಸ ಹಾಗೂ ಪರಿಶ್ರಮಕ್ಕೆ ಧನ್ಯವಾದ ಹಂಚಿಕೊಂಡಿದ್ದಾರೆ. ಗುಜರಾತ್‌ಗೆ ಧನ್ಯವಾದಗಳು. ರಾಜ್ಯಾದ್ಯಂತ ಪುರಸಭೆಯ ಚುನಾವಣೆಯ ಫಲಿತಾಂಶಗಳು ಅಭಿವೃದ್ಧಿಯ ರಾಜಕೀಯ ಮತ್ತು ಉತ್ತಮ ಆಡಳಿತದ ಬಗ್ಗೆ ಜನರು ಹೊಂದಿರುವ ಅಚಲ ನಂಬಿಕೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಬಿಜೆಪಿಯನ್ನು ಮತ್ತೊಮ್ಮೆ ನಂಬಿದ್ದಕ್ಕಾಗಿ ರಾಜ್ಯದ ಜನರಿಗೆ ಕೃತಜ್ಞತೆಗಳು. ಗುಜರಾತ್‌ಗೆ ಸೇವೆ ಸಲ್ಲಿಸುವುದು  ಗೌರವದ ವಿಚಾರ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

 

ಇನ್ನು ಗೆಲುವಿಗೆ ಶ್ರಮಿಸಿದ ಬಿಜೆಪಿ ಕಾರ್ಯಕರ್ತರ ಪರಿಶ್ರಮಕ್ಕೆ ನನ್ನ ಪ್ರಶಂಸೆ. ಗುಜರಾತ್ ಪಾಲಿಕೆ ಚುನಾವಣೆ ಫಲಿತಾಂಶ ಇಡೀ ರಾಜ್ಯದ ಮೇಲೆ ಪಾಸಿಟೀವ್ ಇಂಪಾಕ್ಟ್ ಬೀರಲಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. 

ಈ ಗೆಲುವು ಅತೀ  ವಿಶೇಷವಾಗಿದೆ. ಕಳೆದ ಎರಡು ದಶಕಗಳಿಂದ ಗುಜರಾತ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಪಕ್ಷಕ್ಕೆ ಸಂದಿರುವ ಈ ಗೆಲುವು ಗಮನಾರ್ಹವಾಗಿದೆ. ಸಮಾಜದ ಎಲ್ಲಾ ವರ್ಗಗಳಿಂದ, ವಿಶೇಷವಾಗಿ ಗುಜರಾತ್‌ನ ಯುವಜನರಿಂದ ಬಿಜೆಪಿಗೆ ವ್ಯಾಪಕವಾದ ಬೆಂಬಲ ದೊರೆತಿರುವುದು ಅತೀವ ಸಂತಸ ಎಂದು ಮೋದಿ ಟ್ವೀಟ್ ಮೂಲಕ ಹೇಳಿದ್ದಾರೆ.