ಗುಜರಾತ್‌ನಲ್ಲಿ ಕಾಂಗ್ರೆಸ್ ಧೂಳೀಪಟ; ಆದರೂ ರಾಹುಲ್ ಗಾಂಧಿ ಒಡೆದು ಆಳುವ ನೀತಿ ಬಿಟ್ಟಿಲ್ಲ ಎಂದ ನಡ್ಡಾ!
ಗುಜರಾತ್ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ದಾಖಲೆಯ ಗೆಲುವಿಗೆ ಧನ್ಯವಾದ ಹೇಳಿದ್ದಾರೆ. ಇದರ ನಡುವೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡ, ರಾಹುಲ್ ಗಾಂಧಿಗೆ ತಕ್ಕ ತಿರುಗೇಟು ನೀಡಿದ್ದಾರೆ.
ನವದೆಹಲಿ(ಫೆ.23): ಗುಜರಾತ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 575 ಸ್ಥಾನದ ಪೈಕಿ ಈಗಾಗಲೇ 451 ಸ್ಥಾನಗಳಲ್ಲಿ ಬಿಜೆಪಿ ಗೆಲುವಿನ ಪತಾಕೆ ಹಾರಿಸಿದೆ. ಆದರೆ ಕಾಂಗ್ರೆಸ್ 44 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇದೇ ಮೊದಲ ಬಾರಿಗೆ ಸ್ಪರ್ಧಿಸಿದ ಆಮ್ ಆದ್ಮಿ ಪಾರ್ಟಿ 19 ಸ್ಥಾನಗಳನ್ನು ಗೆಲ್ಲೋ ಮೂಲಕ ಕಾಂಗ್ರೆಸ್‌ಗೆ ತೀವ್ರ ಪೈಪೋಟಿ ನೀಡಿದೆ.
ಗುಜರಾತ್ ಪಾಲಿಕೆ ಚುನಾವಣೆ ಫಲಿತಾಂಶ; ಭರ್ಜರಿ ಗೆಲುವಿಗೆ ಪ್ರಧಾನಿ ಮೋದಿ ಅಭಿನಂದನೆ!
ಬಿಜೆಪಿ ಗೆಲುವಿನ ಸಂತಸವನ್ನು ಜೆಪಿ ನಡ್ಡ ವಿಶಿಷ್ಠವಾಗಿ ಆಚರಿಸಿದ್ದಾರೆ. ಕೇರಳ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಭಿನ್ನ ಹೇಳಿಕೆ ನೀಡಿದ್ದಾರೆ. ಉತ್ತರ ಹಾಗೂ ದಕ್ಷಿಣದಲ್ಲಿನ ಹೇಳಿಕೆಗಳನ್ನೇ ಮೂಲವಾಗಿಟ್ಟುಕೊಂಡ ಜೆಪಿ ನಡ್ಡಾ, ಜನರು ಒಡೆದು ಆಳುವ ನೀತಿಯನ್ನು ವಿರೋಧಿಸಿದ್ದಾರೆ. ಇದಕ್ಕೆ ಗುಜರಾತ್ ಚುನಾವಣೆ ಸಾಕ್ಷಿ ಎಂದು ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ.
ಕಳೆದ 15 ವರ್ಷಗಳಿಂದ ಉತ್ತರ ಭಾರತದಲ್ಲಿ ಸಂಸದನಾಗಿರುವ ನಾನು ಬೇರೆ ರೀತಿಯ ರಾಜಕೀಯಕ್ಕೆ ಒಗ್ಗಿಕೊಂಡಿದ್ದೆ. ಆದರೆ ಕೇರಳಕ್ಕೆ ಆಗಮಿಸಿದ ನನಗೆ ಉತ್ಸಾಹ ಹೆಚ್ಚಿಸಿ,ನನ್ನನ್ನು ಉಲ್ಲಾಸಕರವಾಗಿ ಮಾಡಿದೆ. ಇಲ್ಲಿನ ಜನರು ಸಮಸ್ಯೆಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಇಷ್ಟೇ ಅಲ್ಲ ಆ ಜನರು ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇದೇ ಹೇಳಿಕೆಗೆ ಜೆಪಿ ನಡ್ಡಾ ತಿರುಗೇಟು ನೀಡಿದ್ದಾರೆ. ಕೆಲ ದಿನಗಳ ಹಿಂದೆ ಈಶಾನ್ಯ ಪ್ರವಾಸದಲ್ಲಿದ್ದ ರಾಹುಲ್ ಗಾಂಧಿ ಪಶ್ಚಿಮ ಹಾಗೂ ದಕ್ಷಿಣ ವಿರುದ್ಧ ಅಸಮಾಧಾನ ಹಾಗೂ ವಿಷ ಹೊರಹಾಕಿದ್ದರು. ಇದೀಗ ಉಲ್ಟಾ ಹೊಡೆದಿರುವ ರಾಹುಲ್, ದಕ್ಷಿಣವನ್ನು ಹೊಗಳುತ್ತಾ, ಇದೀಗ ಉತ್ತರವನ್ನು ತೆಗಳಿದ್ದಾರೆ. ಕಾಂಗ್ರೆಸ್‌ನ ಈ ರೀತಿಯ ಒಡೆದು ಆಳುವ ನೀತಿಯನ್ನು ಜನರು ತಿರಸ್ಕರಿದ್ದಾರೆ. ಇದಕ್ಕೆ ಗುಜರಾತ್ ಮಹಾನಗರ ಪಾಲಿಕೆ ಚುನಾವಣೆ ಸಾಕ್ಷಿ ಎಂದಿದ್ದಾರೆ.
ಗುಜರಾತ್ ಮಹಾನಗರ ಪಾಲಿಕೆ ಚುನಾವಣೆ ಅಂತಿಮ ಫಲಿತಾಂಶ ಇನ್ನಷ್ಟೇ ಹೊರಬೀಳಬೇಕಿದೆ. ಇನ್ನು 27 ಸ್ಥಾನಗಳ ಮತ ಎಣಿಕೆ ಪ್ರಕ್ರಿಯೆ ಚಾಲನೆಯಲ್ಲಿದೆ.