ಇಂದು ಗುಜರಾತ್‌, ಹಿಮಾಚಲ ಫಲಿತಾಂಶ: ಸತತ 7ನೇ ಬಾರಿ ಗುಜರಾತ್‌ ಗೆಲ್ಲುವತ್ತ ಬಿಜೆಪಿ ಚಿತ್ತ

ಬಹುನಿರೀಕ್ಷಿತ ಗುಜರಾತ್‌ ಹಾಗೂ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣಾ ಫಲಿತಾಂಶಗಳು ಇಂದು ಪ್ರಕಟವಾಗಲಿದೆ. ಗುಜರಾತ್‌ನಲ್ಲಿ ಸತತ 7ನೇ ಬಾರಿ ಗೆದ್ದು ಬಿಜೆಪಿ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಬಹುತೇಕ ಎಲ್ಲ ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ. ಆದರೆ ಹಿಮಾಚಲ ಪ್ರದೇಶದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಬಹುದು ಎಂದು ಅಂದಾಜಿಸಿವೆ.

Gujarat Himachal result today BJP is determined to win Gujarat for the 7th time in a row akb

ಅಹಮದಾಬಾದ್‌/ಶಿಮ್ಲಾ: ಬಹುನಿರೀಕ್ಷಿತ ಗುಜರಾತ್‌ ಹಾಗೂ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣಾ ಫಲಿತಾಂಶಗಳು ಇಂದು ಪ್ರಕಟವಾಗಲಿದೆ. ಗುಜರಾತ್‌ನಲ್ಲಿ ಸತತ 7ನೇ ಬಾರಿ ಗೆದ್ದು ಬಿಜೆಪಿ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಬಹುತೇಕ ಎಲ್ಲ ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ. ಆದರೆ ಹಿಮಾಚಲ ಪ್ರದೇಶದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಬಹುದು ಎಂದು ಅಂದಾಜಿಸಿವೆ.

ಗುಜರಾತ್‌ನಲ್ಲಿ(Gujarat) ಡಿ.1 ಹಾಗೂ 5ರಂದು 2 ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆದಿತ್ತು. ಇದರಲ್ಲಿ ಒಟ್ಟು ಶೇ. 66.31ರಷ್ಟು ಮತ ಚಲಾಯಿಸಲಾಗಿತ್ತು. ಗುಜರಾತ್‌ನಲ್ಲಿ (Gujarath Assembly election) ಬಿಜೆಪಿ, ಕಾಂಗ್ರೆಸ್‌ಗೆ ಪೈಪೋಟಿ ನೀಡಲು ಮೊಟ್ಟ ಮೊದಲ ಬಾರಿ ಆಮ್‌ ಆದ್ಮಿ ಪಕ್ಷವು ಕಣಕ್ಕಿಳಿದಿದೆ. ಆದರೆ ತ್ರಿಕೋನ ಸ್ಪರ್ಧೆ (triangular contest) ಹೊರತಾಗಿಯೂ ಬಿಜೆಪಿ 117-151 ಸೀಟುಗಳನ್ನು ಗೆಲ್ಲುವ ಸಾಧ್ಯತೆಗಳಿವೆ. ಕಾಂಗ್ರೆಸ್‌ 16-51 ಹಾಗೂ ಆಮ್‌ ಆದ್ಮಿ ಪಕ್ಷ 2-13 ಸೀಟುಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಗಬಹುದು ಎಂದು ಸಮೀಕ್ಷೆಗಳು ಹೇಳಿವೆ.

ದೆಹಲಿ ಪಾಲಿಕೆ ಗೆದ್ದ ಆಪ್‌‌ಗೆ ಕೌಂಟರ್, ರಾಜಧಾನಿಗೆ ನಮ್ಮವರೇ ಮೇಯರ್ ಎಂದ ಬಿಜೆಪಿ

ಅದೇ ರೀತಿ ನ.12 ರಂದು ನಡೆದ ಹಿಮಾಚಲ ಪ್ರದೇಶದ (Himachal Pradesh Aseembly Election) ಮತ ಎಣಿಕೆ ಕಾರ್ಯವೂ ಇಂದು ಮುಂಜಾನೆ 8 ಗಂಟೆಗೆ ಆರಂಭವಾಗಲಿದೆ. ಒಟ್ಟು ಶೇ. 76.44ರಷ್ಟು ಮತದಾನ ನಡೆದಿದೆ. ಚುನಾವಣೋತ್ತರ ಸಮೀಕ್ಷೆಗಳು, 68 ಸ್ಥಾನ ಹೊಂದಿರುವ ಹಿಮಾಚಲದಲ್ಲಿ ಬಿಜೆಪಿ 24-41, ಕಾಂಗ್ರೆಸ್‌ 20-40 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆಗಳು ಹೇಳಿವೆ. ಇನ್ನೂ ಕೆಲ ಸಮೀಕ್ಷೆಗಳು ಸ್ಪಷ್ಟ ಬಹುಮತ ಸಾಧಿಸಲಾಗದೇ ಅತಂತ್ರ ಸ್ಥಿತಿ ನಿರ್ಮಾಣವೂ ಆಗಬಹುದು ಎಂದು ಹೇಳಿವೆ. ಹೀಗಾಗಿ ಹಿಮಾಚಲ ಪ್ರದೇಶದಲ್ಲಿ ಪ್ರತಿ 5 ವರ್ಷಗಳಿಗೊಮ್ಮೆ ಸರ್ಕಾರ ಬದಲಾಗುವ ಪ್ರವೃತ್ತಿಗೆ ಈ ಬಾರಿ ಬ್ರೇಕ್‌ ಬೀಳಬಹುದೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಜನಾರ್ಧನ ರೆಡ್ಡಿ ರಾಜಕೀಯ ಎಂಟ್ರಿಗೆ ಭಾರಿ ಮುನ್ನಡೆ: 4 ಕೋರ್ಟ್ ಕೇಸ್‌ ರದ್ದು 

ಗುಜರಾತ್‌, ಹಿಮಾಚಲ ಗೆದ್ದು ಬಿಜೆಪಿ ದಾಖಲೆ?
ಗುಜರಾತ್‌ ಹಾಗೂ ಹಿಮಾಚಲ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ 2 ರಾಜ್ಯಗಳಲ್ಲಿ ಗೆಲುವು ಸಾಧಿಸಿ ಹೊಸ ದಾಖಲೆಗಳನ್ನು ನಿರ್ಮಿಸುವ ಹುಮ್ಮಸ್ಸಿನಲ್ಲಿದೆ. ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ಪಕ್ಷವು ಸತತ 7 ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿ, 1977ರಿಂದ 2011ರವರೆಗೆ 34 ವರ್ಷಗಳ ಕಾಲ ಅಧಿಕಾರ ಸೂತ್ರ ಹಿಡಿದಿತ್ತು. ಬಿಜೆಪಿ 2022 ರ ಚುನಾವಣೆಯನ್ನು ಗೆದ್ದರೆ ಈ ದಾಖಲೆಯನ್ನು ಸರಿಗಟ್ಟಿ ಅತಿ ಹೆಚ್ಚು ಅವಧಿಯವರೆಗೆ ರಾಜ್ಯವೊಂದರಲ್ಲಿ ಅಧಿಕಾರ ನಡೆಸಿದ 2ನೇ ರಾಜಕೀಯ ಪಕ್ಷವಾಗಿ ಹೊರಹೊಮ್ಮಲಿದೆ. 2002ರಲ್ಲಿ ಬಿಜೆಪಿ 182 ಸ್ಥಾನಗಳ ಪೈಕಿ 127 ಸೀಟುಗಳನ್ನು ಗೆದ್ದಿದ್ದು, ಸಾರ್ವಕಾಲಿಕ ಗರಿಷ್ಠ ಎನಿಸಿಕೊಂಡಿತ್ತು. ಆದರೆ ಚುನಾವಣೋತ್ತರ ಸಮೀಕ್ಷೆಗಳು ಈ ಬಾರಿ ಬಿಜೆಪಿ 117-151 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಿದೆ. ಹೀಗಾಗಿ ಬಿಜೆಪಿ ಅತಿಹೆಚ್ಚು ಸೀಟುಗಳಿಸುವ ತನ್ನ ದಾಖಲೆಯನ್ನೂ ಮುರಿಯುವ ಸಾಧ್ಯತೆ ಇದೆ.ಇನ್ನೊಂದೆಡೆ ಹಿಮಾಚಲ ಪ್ರದೇಶದಲ್ಲಿ 1985ರ ನಂತರ ಯಾವುದೇ ಪಕ್ಷವು ಸತತವಾಗಿ 2 ಬಾರಿ ಅಧಿಕಾರಕ್ಕೆ ಬಂದಿಲ್ಲ. ಆದರೆ ಈ ಬಾರಿ ಬಿಜೆಪಿ ಮರಳಿ ಅಧಿಕಾರ ಸೂತ್ರ ಹಿಡಿದಲ್ಲಿ ಇದು ಮತ್ತೊಂದು ದಾಖಲೆಯೆನಿಕೊಳ್ಳಲಿದೆ.

Latest Videos
Follow Us:
Download App:
  • android
  • ios