ಅಯೋಧ್ಯೆ(ಅ.08): ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ಭವ್ಯ ಶ್ರೀರಾಮ ಮಂದಿರಕ್ಕೆಂದೇ ಸಿದ್ಧಪಡಿಸಲಾದ ವಿಶೇಷ ಬೃಹತ್ ಗಂಟೆ ರಾಮೇಶ್ವರಂನಿಂದ ತರಲಾಗಿದೆ.  613 ಕೆ. ಜಿ. ತೂಕ ಹಾಗೂ ನಾಲ್ಕು ಅಡಿ ಎತ್ತರ ಮತ್ತು 3.9 ಅಡಿ ವ್ಯಾಸವಿರುವ ಈ ವಿಶಾಲ ಗಂಟೆ  ರಾಮೇಶ್ವರಂನಿಂದ 11 ರಾಜ್ಯಗಳನ್ನು ಹಾದು ಬರೋಬ್ಬರಿ 4555 ಕಿ. ಮೀ ದೂರವಿರುವ ರಾಮ ಜನ್ಮಭೂಮಿ ತಲುಪಿದೆ. ಈ ಗಂಟೆಯೊಂದಿಗೆ ಶ್ರೀರಾಮ, ಸೀತೆ, ಲಕ್ಷ್ಮಣ, ಹನುಮಂತ ಹಾಗೂ ಗನೇಶನ ಮೂರ್ತಿಯನ್ನೂ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಹಸ್ತಾಂತರಿಸಲಾಗಿದೆ.

ಸೆ.17ರಂದು ರಾಮೇಶ್ವರಂನಿಂದ ಆರಂಭವಾಗಿತ್ತು ಯಾತ್ರೆ 

ಸೆಪ್ಟೆಂಬರ್ 17 ರಂದು ಲೀಗಲ್ ರೈಟ್ಸ್ ಕೌನ್ಸಿಲ್ ಇಂಡಿಯಾದ 18 ಸದಸ್ಯರ ತಂಡ ಈ ಗಂಟೆಯೊಂದಿಗೆ ತರಾಮ ಜನ್ಮಭೂಮಿಯತ್ತ ಪ್ರಯಾಣ ಬೆಳೆಸಿತ್ತು. ಈ ನತಂಡ ಬುಧವಾರ ಅಯೋಧ್ಯೆಗೆ ತಲುಪಿದೆ. 

ಸದ್ಯ ತಂಡ ತಾವು ತಂದ ಈ ಗಂಟೆ ಹಾಗೂ ಪ್ರತಿಮೆಗಳನ್ನು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ರಾಯ್ ಹಾಗೂ ಇತರ ಸದಸ್ಯರ ಸಮ್ಮುಖದಲ್ಲಿ ಹಸ್ತಾಂತರಿಸಿದ್ದಾರೆ. 

ಶೀಘ್ರದಲ್ಲೇ ಮಂದಿರ ನಿರ್ಮಾಣ

ಇನ್ನು ರಾಮ ಮಂದಿರ ನಿರ್ಮಾಣಕ್ಕಾಗಿ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಇದುವರೆಗೆ 100 ಕೋಟಿ ರು. ದೇಣಿಗೆಯನ್ನು ಸ್ವೀಕರಿಸಿದ್ದು, ನವರಾತ್ರಿಯ ಮೊದಲ ದಿನವಾದ ಅ.17ರಂದು ಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಅಂದು ದೇವಾಲಯ ಆಧಾರ ಸ್ತಂಭಗಳನ್ನು ನಿರ್ಮಿಸಲಾಗುವುದು ಎಂದು ವರದಿಗಳು ತಿಳಿಸಿವೆ.