ನವ​ದೆ​ಹ​ಲಿ(ಮಾ.17): 2 ರಾಷ್ಟ್ರೀಯ ಬ್ಯಾಂಕ್‌​ಗಳ ಖಾಸ​ಗೀ​ಕ​ರ​ಣ​ಗೊ​ಳಿ​ಸುವ ಕೇಂದ್ರದ ಪ್ರಸ್ತಾ​ವನೆ ವಿರುದ್ಧ ಬ್ಯಾಂಕ್‌ ನೌಕ​ರರ 9 ಸಂಘ​ಟ​ನೆ​ಗಳು 2 ದಿನಗಳ ಮುಷ್ಕರ ನಡೆಸಿದ ಬೆನ್ನಲ್ಲೇ, ಎಲ್ಲಾ ರಾಷ್ಟ್ರೀಯ ಬ್ಯಾಂಕ್‌​ಗ​ಳನ್ನು ಖಾಸ​ಗೀ​ಕ​ರ​ಣ​ಗೊ​ಳಿ​ಸು​ವು​ದಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾ​ರಾ​ಮನ್‌ ಅವರು ಭರ​ವಸೆ ನೀಡಿ​ದ್ದಾರೆ. ಅಲ್ಲದೆ ಖಾಸ​ಗೀ​ಕ​ರ​ಣ​ಗೊ​ಳಿ​ಸ​ಲಾ​ಗುವ ಬ್ಯಾಂಕ್‌​ಗಳ ನೌಕ​ರ​ರ ವೇತನ, ಪಿಂಚಣಿಯ ಹಿತಾ​ಸ​ಕ್ತಿ ಕಾಪಾ​ಡ​ಲಾ​ಗು​ತ್ತದೆ ಎಂದು ಭರ​ವ​ಸೆ ನೀಡಿ​ದ್ದಾರೆ.

ಈ ಬಗ್ಗೆ ಮಂಗ​ಳ​ವಾರ ಸುದ್ದಿ​ಗಾ​ರ​ರ​ನ್ನು​ದ್ದೇ​ಶಿಸಿ ಮಾತ​ನಾ​ಡಿದ ಸಚಿವೆ ನಿರ್ಮಲಾ ಅವರು, ‘ಬ್ಯಾಂಕ್‌​ಗಳು ದೇಶದ ಆಕಾಂಕ್ಷೆ​ಗ​ಳನ್ನು ಈಡೇ​ರಿ​ಸಬೇಕು. ಹೀಗಾಗಿ ಬ್ಯಾಂಕ್‌​ಗ​ಳಿಗೆ ನ್ಯಾಯ ದೊರಕಿ​ಸಲು ಖಾಸ​ಗೀ​ಕ​ರಣ ಅತ್ಯು​ತ್ತಮ ನಿರ್ಧಾ​ರ​ವಾ​ಗಿ​ದೆ. ಹೀಗಾಗಿ ಖಾಸ​ಗೀ​ಕ​ರ​ಣ​ಗೊ​ಳ್ಳುವ ರಾಷ್ಟ್ರೀಕೃತ ಬ್ಯಾಂಕ್‌ನ ಎಲ್ಲಾ ಸಿಬ್ಬಂದಿಯ ಹಿತಾ​ಸ​ಕ್ತಿ ರಕ್ಷಿ​ಸ​ಲಾ​ಗು​ತ್ತದೆ’ ಎಂದಿ​ದ್ದಾರೆ.

ಏತ​ನ್ಮಧ್ಯೆ ದೇಶದ ಲಾಭ​ವನ್ನು ಖಾಸ​ಗೀ​ಕ​ರ​ಣ​ಗೊ​ಳಿ​ಸು​ತ್ತಿ​ರುವ ಕೇಂದ್ರ ಸರ್ಕಾರ ನಷ್ಟ​ವನ್ನು ರಾಷ್ಟ್ರೀ​ಕ​ರ​ಣ​ಗೊ​ಳಿ​ಸು​ತ್ತಿದೆ ಎಂಬ ರಾಹುಲ್‌ ಗಾಂಧಿ ಟ್ವೀಟ್‌ ಬಗ್ಗೆ ಕೇಂದ್ರ ಸಚಿವೆ ಆಕ್ರೋಶ ವ್ಯಕ್ತ​ಪ​ಡಿ​ಸಿ​ದ್ದಾರೆ.