ನವದೆಹಲಿ (ಅ.23): ಭಾರತ ಮತ್ತು ಚೀನಾ ಮಧ್ಯೆ ತ್ವೇಷಮಯ ಪರಿಸ್ಥಿತಿಗೆ ತುಪ್ಪ ಸುರಿದಿರುವ ಪ್ರಸಿದ್ಧ ಸಾಮಾಜಿಕ ಜಾಲತಾಣ ಟ್ವಿಟ್ಟರ್‌, ಲಡಾಖ್‌ ಕೇಂದ್ರಾಡಳಿತ ಪ್ರದೇಶದ ಪ್ರಮುಖ ನಗರ ಲೇಹ್‌ ಅನ್ನು ಚೀನಾದ ಭೂಭಾಗ ಎಂದು ತೋರಿಸುವ ಮೂಲಕ ಉದ್ಧಟತನ ಪ್ರದರ್ಶಿಸಿದೆ. ಅ.18ರಂದು ಟ್ವಿಟ್ಟರ್‌ ಈ ಪ್ರಮಾದ ಎಸಗಿತ್ತು. ಆದರೆ, ತಪ್ಪನ್ನು ಸರಿಪಡಿಸಿಕೊಳ್ಳುವಲ್ಲಿ ವಿಫಲವಾದ ಕಾರಣಕ್ಕೆ ಭಾರತ ಸರ್ಕಾರ ಟ್ವಿಟ್ಟರ್‌ಗೆ ಖಡಕ್‌ ಎಚ್ಚರಿಕೆ ನೀಡಿದೆ.

ರಾಷ್ಟ್ರೀಯ ಭದ್ರತಾ ವಿಶ್ಲೇಷಕ ನಿತಿನ್‌ ಗೋಖಲೆ ಅವರು ಲೇಹ್‌ ವಿಮಾನ ನಿಲ್ದಾಣದ ಸಮೀಪ ಅ.18ರಂದು ಟ್ವಿಟ್ಟರ್‌ ಲೈವ್‌ ಮಾಡುವ ಸಂದರ್ಭದಲ್ಲಿ ಲೇಹ್‌ ಅನ್ನು ಚೀನಾದ ಭಾಗ ಎಂದು ಟ್ವಿಟ್ಟರ್‌ ತೋರಿಸಿದ್ದು ಕಂಡುಬಂದಿತ್ತು. ಬಳಿಕ ಅದನ್ನು ಅವರು ಟ್ವಿಟ್ಟರ್‌ ಗಮನಕ್ಕೆ ತಂದಿದ್ದರು. ಆದರೆ, ತಾಂತ್ರಿಕ ಕಾರಣದಿಂದ ಈ ಪ್ರಮಾದ ಆಗಿದೆ ಎಂದು ಟ್ವಿಟ್ಟರ್‌ ಸ್ಪಷ್ಟನೆ ನೀಡಿತ್ತು. ಆದರೆ, ಈ ಪ್ರಮಾದವನ್ನು ಟ್ವಿಟ್ಟರ್‌ ಸರಿಪಡಿಸಿಕೊಂಡಿಲ್ಲ.

ಉಲ್ಟಾ ಹೊಡೀತು ಚೀನಾ ಗ್ರೀನ್ ಹೌಸಿಂಗ್ ಯೋಜನೆ: ಡ್ರ್ಯಾಗನ್ ಮನೆಗಳೀಗ ಸೊಳ್ಳೆ ಕಾಡು ..

ಈ ಸಂಬಂಧ ಟ್ವಿಟ್ಟರ್‌ ಸಿಇಒ ಜಾಕ್‌ ಡೊರ್ಸಿ ಅವರಿಗೆ ಕಟು ಶಬ್ದಗಳಿಂದ ಪತ್ರವನ್ನು ಬರೆದಿರುವ ಐಟಿ ಇಲಾಖೆ ಕಾರ್ಯದರ್ಶಿ ಅಜಯ್‌ ಸಾಹ್ನಿ, ಭಾರತದ ಸಾರ್ವಭೌಮತ್ವ ಹಾಗೂ ಸಮಗ್ರತೆಗೆ ಧಕ್ಕೆ ತರುವ ಯಾವುದೇ ಯತ್ನವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಭಾರತದ ನಕಾಶೆಯನ್ನು ತಪ್ಪಾಗಿ ನಿರೂಪಿಸಿದ್ದನ್ನು ಭಾರತ ಖಂಡಿಸುತ್ತದೆ. ಈ ರೀತಿಯ ನಡುವಳಿಕೆ ಟ್ವಿಟ್ಟರ್‌ ಖ್ಯಾತಿಗೆ ತಕ್ಕನಾದುದಲ್ಲ. ಅಲ್ಲದೇ ಸಂಸ್ಥೆಯ ಪಾರದರ್ಶಕ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಹೇಳಿದ್ದಾರೆ.