ನವದೆಹಲಿ(ಮೇ.30): ಕೊರೋನಾ ರೋಗಿಗಳ ಚಿಕಿತ್ಸೆಗೆ ಬಳಸಲಾಗುವ, ಕಾಳಸಂತೆಯಲ್ಲಿ ಭಾರಿ ಬೇಡಿಕೆ ಹೊಂದಿರುವ ರೆಮ್‌ಡೆಸಿವಿರ್‌ ವೈರಾಣು ನಿಗ್ರಹ ಇಂಜೆಕ್ಷನ್‌ ಈಗ ಸಾಕಷ್ಟುಪ್ರಮಾಣದಲ್ಲಿ ರಾಜ್ಯಗಳಿಗೆ ಲಭ್ಯವಾಗುತ್ತಿದೆ. ಬೇಡಿಕೆಗಿಂತ ಅಧಿಕ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಈ ಇಂಜೆಕ್ಷನ್‌ ಅನ್ನು ರಾಜ್ಯಗಳಿಗೆ ವಿತರಿಸಲು ಅನುಸರಿಸುತ್ತಿದ್ದ ಕೇಂದ್ರೀಯ ಹಂಚಿಕೆ ಪದ್ಧತಿಯನ್ನು ಸ್ಥಗಿತಗೊಳಿಸಿದೆ.

‘ಏ.11ರಂದು ಪ್ರತಿನಿತ್ಯ 33 ಸಾವಿರ ರೆಮ್‌ಡೆಸಿವಿರ್‌ ವಯಲ್‌ ಉತ್ಪಾದನೆಯಾಗುತ್ತಿದ್ದವು. ಈಗ ನಿತ್ಯ 3,50,000 ವಯಲ್‌ ಉತ್ಪಾದನೆಯಾಗುತ್ತಿವೆ. 10 ಪಟ್ಟು ಉತ್ಪಾದನೆ ಏರಿಕೆಯಾಗಿದೆ. ಹೀಗಾಗಿ ಕೇಂದ್ರೀಯ ಹಂಚಿಕೆ ಸ್ಥಗಿತಗೊಳಿಸಲಾಗಿದೆ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಮನ್ಸುಖ್‌ ಎಲ್‌. ಮಾಂಡವೀಯ ಅವರು ಟ್ವೀಟ್‌ ಮಾಡಿದ್ದಾರೆ.

ರೆಮ್‌ಡೆಸಿವಿರ್‌ ಇಂಜೆಕ್ಷನ್‌ಗೆ ಭಾರಿ ಬೇಡಿಕೆ ಕಂಡುಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಉತ್ಪಾದನಾ ಘಟಕಗಳ ಸಂಖ್ಯೆಯನ್ನು ಒಂದೇ ತಿಂಗಳಲ್ಲಿ 20ರಿಂದ 60ಕ್ಕೆ ಹೆಚ್ಚಳ ಮಾಡಿದೆ. ತುರ್ತು ಬಳಕೆಗೆ ದಾಸ್ತಾನಿಡಲು 50 ಲಕ್ಷ ವಯಲ್‌ಗಳ ಖರೀದಿಗೆ ನಿರ್ಧರಿಸಿದೆ. ರೆಮ್‌ಡೆಸಿವಿರ್‌ ಲಭ್ಯತೆ ಮೇಲೆ ನಿರಂತರ ನಿಗಾ ಇಡಲು ಸೂಚಿಸಲಾಗಿದೆ ಎಂದಿದ್ದಾರೆ.

ಗಂಭೀರ ಸ್ಥಿತಿಯಲ್ಲಿರುವ ಕೊರೋನಾ ರೋಗಿಗಳಿಗೆ ರೆಮ್‌ಡೆಸಿವಿರ್‌ ಇಂಜೆಕ್ಷನ್‌ ಬಳಸಲಾಗುತ್ತಿದೆ. ಆದರೆ ಇದಕ್ಕೆ ತೀವ್ರ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಅಕ್ರಮ ಮಾರಾಟ ದಂಧೆ ಆರಂಭವಾಗಿತ್ತು. ಕಾಳಸಂತೆಯಲ್ಲಿ 25 ಸಾವಿರ ರು.ವರೆಗೂ ಇಂಜೆಕ್ಷನ್‌ ಮಾರಾಟವಾಗುತ್ತಿತ್ತು. ಇದರಿಂದ ರೋಗಿಗಳ ಸಂಬಂಧಿಕರು ಸಮಸ್ಯೆಗೆ ಸಿಲುಕಿದ್ದರು. ಬೆಲೆ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ರೆಮ್‌ಡೆಸಿವಿರ್‌, ಅದರ ಕಚ್ಚಾ ವಸ್ತು, ಔಷಧ ಅಂಶಗಳ ಮೇಲಿನ ಸೀಮಾಸುಂಕ ಕಡಿತಗೊಳಿಸಿತ್ತು. ಇಂಜೆಕ್ಷನ್‌ ಹಾಗೂ ಅದಕ್ಕೆ ಬಳಸುವ ಔಷಧ ಅಂಶಗಳ ರಫ್ತನ್ನೂ ನಿಷೇಧಿಸಿತ್ತು. ಈ ಕ್ರಮಗಳ ಬಳಿಕ ಔಷಧ ಕಂಪನಿಗಳು ರೆಮ್‌ಡೆಸಿವಿರ್‌ ಬೆಲೆ ಕಡಿತಗೊಳಿಸಿದ್ದವು.