ನವದೆಹಲಿ(ಜೂ.02): ಅರೆಸೇನಾ ಪಡೆಗಳ ಕ್ಯಾಂಟೀನ್‌ನಲ್ಲಿ ಕೇವಲ ಸ್ವದೇಶಿ ಉತ್ಪನ್ನಗಳನ್ನು ಮಾತ್ರ ಮಾರುವ ಘೋಷಣೆಯ ಭಾಗವಾಗಿ 1000 ‘ವಿದೇಶಿ’ ಉತ್ಪನ್ನಗಳಿಗೆ ನಿಷೇಧ ಹೇರಿದ್ದ ಕೇಂದ್ರ ಸರ್ಕಾರ, ಕೆಲವೇ ತಾಸಿನಲ್ಲಿ ಆ ಪಟ್ಟಿಹಿಂಪಡೆದ ಘಟನೆ ಸೋಮವಾರ ನಡೆದಿದೆ.

‘ವಿದೇಶಿ ಉತ್ಪನ್ನಗಳು’ ಎಂದು ಪರಿಗಣಿಸಿ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದ್ದ ಕೆಲವು ಉತ್ಪನ್ನಗಳು ‘ಸ್ವದೇಶಿ’ ಆಗಿದ್ದವು. ಈ ಕಾರಣಕ್ಕೆ ‘ವಿದೇಶಿ ಉತ್ಪನ್ನ’ಗಳ ಹೊಸ ಪರಿಷ್ಕೃತ ಪಟ್ಟಿಬಿಡುಗಡೆ ಆಗುವವರೆಗೆ ಘೋಷಣೆಯ ಜಾರಿಗೆ ಬ್ರೇಕ್‌ ಬಿದ್ದಿದೆ.

ದೇಶದ 1700 ಅರೆಸೇನಾ ಪಡೆ ಕ್ಯಾಂಟೀನ್‌ಗಳಿಂದ ಸೋಮವಾರ 1026 ‘ವಿದೇಶಿ ಉತ್ಪನ್ನ’ಗಳ ಮಾರಾಟ ನಿರ್ಬಂಧಿಸಲಾಗಿತ್ತು. ಸೋಮವಾರ ಬೆಳಗ್ಗೆಯೇ ಈ ಘೋಷಣೆ ಜಾರಿಗೆ ಬಂದಿತ್ತು. ಬಜಾಜ್‌ ಎಲೆಕ್ಟ್ರಿಕಲ್‌, ಟೈಮೆಕ್ಸ್‌, ಡಾಬರ್‌, ವಿಐಪಿ ಇಂಡಸ್ಟ್ರೀಸ್‌, ನೀಲ್‌ ಕಮಲ್‌, ಸಿಂಗರ್‌, ವಿಪ್ರೋ, ಹ್ಯಾವೆಲ್ಸ್‌, ಯುರೇಕಾ ಫೋಬ್ಸ್‌ರ್‍, ಜಾಗ್ವಾರ್‌, ಹಿಂದುಸ್ತಾನ್‌ ಯುನಿಲಿವರ್‌ (ಫುಡ್ಸ್‌), ನೆಸ್ಲೆ, ಕೋಲ್ಗೇಟ್‌ ಪಾಮೋಲಿವ್‌ ಲಿ. ಕಂಪನಿಗಳ 1026 ಉತ್ಪನ್ನ ಕೇಂದ್ರೀಯ ಸಶಸ್ತ್ರ ಮೀಸಲು ಪೊಲೀಸ್‌ ಪಡೆ (ಸಿಎಪಿಎಫ್‌) ಕ್ಯಾಂಟೀನ್‌ನಿಂದ ನಿರ್ಬಂಧಿಸಲಾಗಿತ್ತು.

‘ಈ ಉತ್ಪನ್ನಗಳ ಪಟ್ಟಿಯಲ್ಲಿ ಅನೇಕ ಸ್ವದೇಶೀ ಉತ್ಪನ್ನಗಳೂ ಅಚಾತುರ್ಯದಿಂದ ನುಸುಳಿಕೊಂಡಿದ್ದವು. ಹೀಗಾಗಿ ಮಾರಾಟ ನಿರ್ಬಂಧದ ಪಟ್ಟಿಯನ್ನು ತಡೆಹಿಡಿಯಲಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕೊರೋನಾ ಸಂದರ್ಭದಲ್ಲಿ ದೇಶೀ ಆರ್ಥಿಕತೆಗೆ ಚೇತರಿಕೆ ನೀಡಬೇಕು ಎಂದು ಕರೆ ನೀಡಿದ ಅನ್ವಯ, ಇಲ್ಲಿ ಕೇವಲ ಸ್ವದೇಶೀ ವಸ್ತು ಮಾರಾಟದ ನಿರ್ಧಾರ ಕೈಗೊಳ್ಳಲಾಗಿತ್ತು.

ದೇಶದಲ್ಲಿ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ ಸುಮಾರು 1700 ಕ್ಯಾಂಟೀನ್‌ಗಳಿವೆ. ಸುಮಾರು 10 ಲಕ್ಷ ಸಿಬ್ಬಂದಿಗಳ 50 ಲಕ್ಷ ಕುಟುಂಬ ಸದಸ್ಯರು ಇಲ್ಲಿನ ಉತ್ಪನ್ನಗಳನ್ನು ಖರೀದಿಸುತ್ತಾರೆ. ವಾರ್ಷಿಕ ವಹಿವಾಟು 2,800 ಕೋಟಿ ರು. ಇದೆ.