ಶ್ರೀರಾಮ ವನವಾಸ ಕೈಗೊಂಡ ಮಾರ್ಗ ಹೊಸದಾಗಿ ಅಭಿವೃದ್ದಿ| ರಾಜ್ಯ ತೊರೆದು ಕಾಡಿಗೆ ತೆರಳಿದ ರಾಮನ ನೆನಪಿಗಾಗಿ ರಸ್ತೆ
ನವದೆಹಲಿ(ಏ.05): ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿರುವಾಗಲೇ, ಶ್ರೀರಾಮ ತನ್ನ ರಾಜಪಟ್ಟತೊರೆದು ವನವಾಸ ಕೈಗೊಂಡು 14 ವರ್ಷಗಳ ಕಾಲ ನಡೆದುಹೋದ ಉತ್ತರಪ್ರದೇಶದಲ್ಲಿನ 201 ಕಿ.ಮೀ ಮಾರ್ಗವನ್ನು ಹೊಸದಾಗಿ ಅಭಿವೃದ್ಧಿಪಡಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆಚ್ಚಾರಿ ಸಚಿವಾಲಯ ನಿರ್ಧರಿಸಿದೆ.
ಉತ್ತರಪ್ರದೇಶದ ಅಯೋಧ್ಯೆಯಿಂದ ಹಿಡಿದು ಮಧ್ಯಪ್ರದೇಶದ ಚಿತ್ರಕೂಟದವರೆಗಿನ ಜಾಗವನ್ನು ‘ರಾಮ ವನ ಗಮನ ಮಾರ್ಗ’ ಎಂಬ ಹೆಸರಿನಲ್ಲಿ ಅಭಿವೃದ್ಧಿಪಡಿಸಲಾಗುವುದು. ಈ ಎರಡೂ ನಗರಗಳ ನಡುವಿನ ಹಾದಿಯ ಪೈಕಿ ಹಾಲಿ ಉತ್ತರಪ್ರದೇಶದಲ್ಲಿ ಬರುವ ಫೈಝಾಬಾದ್, ಸುಲ್ತಾನ್‌ಪುರ, ಪ್ರತಾಪ್‌ಗಢ, ಜೇಥ್ವಾರ್, ಶೃಂಗವೇರ್‌ಪುರ, ಮಂಝನಾಪುರ, ರಾಜಾಪುರ ಪ್ರದೇಶದಲ್ಲಿ ಹೊಸ ಮಾರ್ಗ ಅಭಿವೃದ್ಧಿಪಡಿಸಲಾಗುವುದು.
ಜೊತೆಗೆ ಈ ಮಾರ್ಗವು ಎನ್‌ಎಚ್-28, ಎನ್‌ಎಚ್- 96 ಮತ್ತು ಎನ್‌ಎಚ್- 731ಎ ಮೂಲಕ ಹಾದುಹೋಗಲಿದೆ. ಮೊದಲ ಹಂತದಲ್ಲಿ ಯೋಜನೆಯನ್ನು 138 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲು ಸಚಿವಾಲಯ ಉದ್ದೇಶಿಸಿದೆ.
ರಾಮ ವನ ಗಮನ ಮಾರ್ಗವು ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ರಾಜ್ಯದ ಮೂಲಕವೂ ಹಾದು ಹೋಗುತ್ತಿದ್ದು, ಆ ರಾಜ್ಯಗಳು ಕೂಡಾ ಪ್ರತ್ಯೇಕವಾಗಿ ಮಾರ್ಗ ಅಭಿವೃದ್ಧಿಗೆ ಈಗಾಗಲೇ ಯೋಜಿಸಿದ್ದು, ಕೇಂದ್ರ ಸರ್ಕಾರದ ನೆರವು ಕೋರಿವೆ.
