ನವದೆಹಲಿ[ಜ.06]: ಗಡಿ ಭದ್ರತೆಯನ್ನು ಮತ್ತಷ್ಟುಸದೃಢಗೊಳಿಸುವ ನಿಟ್ಟಿನಲ್ಲಿ ಕೆಲ ಅರೆಸೇನಾ ಪಡೆಯನ್ನು ವಿಲೀನಗೊಳಿಸಲು ಕೇಂದ್ರ ಸರ್ಕಾರ ಚಿಂತಿಸಿದೆ. ಅರೆ ಸೇನಾಪಡೆಗಳನ್ನು ಚಿಕ್ಕ ಮತ್ತು ಚೊಕ್ಕದಾದ ಹೋರಾಟದ ಘಟಕಗಳನ್ನಾಗಿ ಪರಿವರ್ತಿಸುವ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಚಿಂತನೆಯಲ್ಲಿ ತೊಡಗಿದೆ.

ಇದಕ್ಕಾಗಿ, ಕೇಂದ್ರ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆ(ಸಿಎಪಿಎಫ್‌)ಗಳ ಅಧಿಕಾರಿಗಳನ್ನೊಳಗೊಂಡ ಸಮಿತಿಯೊಂದನ್ನು ರಚಿಸಲಾಗಿದ್ದು, ಇದೇ ವರ್ಷದ ಮಧ್ಯಂತರದಲ್ಲಿ ವರದಿ ಸಲ್ಲಿಸುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಎನ್‌ಎಸ್‌ಜಿ ಹಾಗೂ ಭಯೋತ್ಪಾದಕ ನಿಗ್ರಹ ದಳದ ಪಡೆಯೊಂದಿಗೆ ದೇಶದ ಅತಿದೊಡ್ಡ ಅರೆಸೇನಾ ಪಡೆಯಾಗಿರುವ ಸಿಆರ್‌ಪಿಎಫ್‌ ಅನ್ನು ವಿಲೀನಗೊಳಿಸುವ ಪ್ರಸ್ತಾವನೆ ಈ ಸಮಿತಿ ಮುಂದೆ ಚರ್ಚೆಗೆ ಬಂದಿದೆ.

ಮೊದಲ ಹಂತದಲ್ಲಿ ಚೀನಾ ಗಡಿ ಕಾಯುವ ಐಟಿಬಿಪಿಯಲ್ಲಿ, ನೇಪಾಳ ಗಡಿ ಕಾಯುವ ಸಶಸ್ತ್ರ ಸೀಮಾಬಲವನ್ನು ವಿಲೀನಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.