ನವದೆಹಲಿ[ಜ.15]: ಅಪರೂಪದ ಕಾಯಿಲೆಯಿಂದ ನರಳುತ್ತಿರುವ ರೋಗಿಗಳ ಚಿಕಿತ್ಸೆಗಾಗಿ ರಾಷ್ಟ್ರೀಯ ಆರೋಗ್ಯ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರ 15 ಲಕ್ಷ ರು. ಆರ್ಥಿಕ ನೆರವು ನೀಡುವ ಸಾಧ್ಯತೆ ಇದೆ.

ಅಪರೂಪದ ಕಾಯಿಲೆಗಳಿಗೆ ಸಂಬಂಧಿಸಿದ ಕರಡು ರಾಷ್ಟ್ರೀಯ ನೀತಿಯನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಅದರಲ್ಲಿ ಈ ಕುರಿತ ಪ್ರಸ್ತಾಪವಿದೆ. ಒಂದು ವೇಳೆ, ಇದು ಜಾರಿಗೆ ಬಂದರೆ ಹೀಮೋಫಿಲಿಯಾ, ಥಲಸ್ಸೇಮಿಯಾ, ಸಿಕಲ್‌ ಸೆಲ್‌ ಅನೀಮಿಯಾ, ಲೈಸೋಸೋಮಲ್‌ ಸ್ಟೋರೇಜ್‌ ಡಿಸಾರ್ಡರ್‌, ಗೌಚ​ರ್‍ಸ್ ಡಿಸೀಸ್‌, ಹರ್ಲರ್‌ ಸಿಂಡ್ರೋಮ್‌, ವೋಲ್ಮನ್‌ ಡಿಸೀಸ್‌ನಂತಹ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸಹಾಯವಾಗಲಿದೆ.

ಮೂತ್ರಪಿಂಡ ಅಥವಾ ಯಕೃತ್‌ ಕಸಿಗೂ ಇದೇ ಯೋಜನೆಯಡಿ ನೆರವು ಸಿಗಲಿದೆ. ಈ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ರೋಗಿಗಳಿಗೆ ಮಾತ್ರವಲ್ಲದೇ, ಆಯುಷ್ಮಾನ್‌ ಭಾರತ್‌- ಪ್ರಧಾನ್‌ ಮಂತ್ರಿ ಜನ ಆರೋಗ್ಯ ಯೋಜನೆ ವ್ಯಾಪ್ತಿಗೆ ಬರುವ ದೇಶದ ಒಟ್ಟು ಜನಸಂಖ್ಯೆಯ ಶೇ.40ರಷ್ಟುಜನರಿಗೂ ಚಿಕಿತ್ಸೆ ಸಿಗಲಿದೆ.

ಅಪರೂಪದ ಕಾಯಿಲೆಯ ರೋಗಿಗಳಿಗೆ ಆರ್ಥಿಕ ಸಹಾಯ ಹರಿದುಬರುವಂತೆ ಮಾಡಲು ಸರ್ಕಾರವೇ ಡಿಜಿಟಲ್‌ ವೇದಿಕೆಯೊಂದನ್ನು ಸೃಷ್ಟಿಸಲು ಒಲವು ತೋರಿದೆ. ಅದಕ್ಕೆ ವ್ಯಕ್ತಿಗಳು ಹಾಗೂ ಕಾರ್ಪೋರೆಟ್‌ ದೇಣಿಗೆದಾರರು ಹಣ ನೀಡಬಹುದಾಗಿದೆ.

ಈ ಕಾಯಿಲೆಗಳ ಔಷಧ ವೆಚ್ಚವೂ ದುಬಾರಿಯಾಗಿರುವ ಕಾರಣ ಸರ್ಕಾರ ಉಚಿತವಾಗಿ ಒದಗಿಸಲು ಆಗುತ್ತಿಲ್ಲ. ಗಂಭೀರ ಪ್ರಮಾಣದ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ 10 ಕೆಜಿ ತೂಕದ ಮಗುವಿನ ವಾರ್ಷಿಕ ಚಿಕಿತ್ಸೆಗೆ 10 ಲಕ್ಷದಿಂದ 1 ಕೋಟಿ ರು.ವರೆಗೂ ಹಣ ಬೇಕಾಗುತ್ತದೆ. ಹೀಗಾಗಿ ಸರ್ಕಾರ ಸಂಪೂರ್ಣ ಬದಲು ಒಂದು ಬಾರಿ ಆರ್ಥಿಕ ನೆರವು ನೀಡುವ ಚಿಂತನೆಯಲ್ಲಿದೆ. ಕರಡು ನೀತಿಯನ್ನು ಆರೋಗ್ಯ ಸಚಿವಾಲಯ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ಫೆ.10ರವರೆಗೆ ಸಲಹೆಗಳನ್ನು ನೀಡಬಹುದಾಗಿದೆ.