ನವದೆಹಲಿ[ಫೆ.06]: ಹಿರಿಯ ನಾಗರಿಕರನ್ನು ನೋಡಿಕೊಳ್ಳಲು ಸ್ವಯಂ ಸೇವಾ ಸಂಸ್ಥೆ (ಎನ್‌ಜಿಒ)ಗಳಿಗೆ ಅವಕಾಶ ನೀಡುವ ಹೊಸ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸುತ್ತಿದೆ. ಈ ಸಂಬಂಧ ಹೊಸ ಕಾನೂನನ್ನು ಶೀಘ್ರವೇ ರಚಿಸಲಾಗುವುದು ಎಂದು ಸರ್ಕಾರ ಹೇಳಿದೆ.

ಈ ಪ್ರಕಾರ, ಈಗ ಮಕ್ಕಳನ್ನು ನೋಡಿಕೊಳ್ಳಲು ಇರುವ ‘ಡೇ ಕೇರ್‌ ಸೆಂಟರ್‌’ಗಳ ರೀತಿ ಹಿರಿಯ ನಾಗರಿಕರನ್ನೂ ನೋಡಿಕೊಳ್ಳಲು ಡೇ ಕೇರ್‌ ಸೆಂಟರ್‌ಗಳ ಸ್ಥಾಪನೆಗೆ ಅವಕಾಶ ಲಭಿಸಲಿದೆ. ಈ ಕೇಂದ್ರಗಳಲ್ಲಿ ವೃದ್ಧರು ಬೆಳಗ್ಗೆಯಿಂದ ಸಂಜೆಯವರೆಗೆ ಕಾಲ ಕಳೆದು ಮನೆಗೆ ಮರಳಬಹುದು.

ರಾಜ್ಯಸಭೆಗೆ ಈ ವಿಷಯ ತಿಳಿಸಿದ ಸಮಾಜ ಕಲ್ಯಾಣ ಸಚಿವ ಥಾವರ್‌ಚಂದ್‌ ಗೆಹ್ಲೋಟ್‌, ‘2007ರಲ್ಲಿ ಹಿರಿಯ ನಾಗರಿಕರನ್ನು ನೋಡಿಕೊಳ್ಳಲು ಕಾನೂನು ರೂಪಿಸಲಾಗಿತ್ತು. ಆದರೆ ಏಕಾಂಗಿಯಾಗಿರುವ ವೃದ್ಧರನ್ನು ನೋಡಿಕೊಳ್ಳಲು ಅವಕಾಶ ನೀಡುವ ಹೊಸ ಕಾನೂನು ರೂಪಿಸುತ್ತಿದ್ದೇವೆ. ಹಿರಿಯ ನಾಗರಿಕರಕಗೆಂದೇ ಡೇ ಕೇರ್‌ ಸೆಂಟರ್‌ಗಳನ್ನು ಸ್ಥಾಪಿಸಬಹುದು. ಇಲ್ಲಿ ಹಿರಿಯ ನಾಗರಿಕರು ಬೆಳಗ್ಗೆಯಿಂದ ಸಂಜೆವರೆಗೆ ಸಮಯ ಕಳೆಯಬಹುದು’ ಎಂದರು. ಈ ಸೆಂಟರ್‌ಗಳಲ್ಲಿ ಗ್ರಂಥಾಲಯ, ಕ್ಯಾಂಟೀನ್‌ ಹಾಗೂ ಇತರ ವ್ಯವಸ್ಥೆಗಳು ಇರಲಿವೆ ಎಂದು ಹೇಳಿದರು.

ಮನೆಯಲ್ಲಿ ಇರುವ ಏಕಾಂಗಿ ವೃದ್ಧರನ್ನು ನೋಡಿಕೊಳ್ಳಲು ಎನ್‌ಜಿಒಗಳಿಗೆ ಅವಕಾಶ ನೀಡುವ ಹೊಸ ಯೋಜನೆಯನ್ನು ಸರ್ಕಾರ ರೂಪಿಸುತ್ತಿದೆ ಎಂದರು.