ಭಾರತ ಸರ್ಕಾರವು ವಿಪತ್ತುಗಳ ಸಮಯದಲ್ಲಿ ನಾಗರಿಕರಿಗೆ ಎಚ್ಚರಿಕೆ ನೀಡಲು 'ಸೆಲ್ ಬ್ರಾಡ್‌ಕಾಸ್ಟ್' ಎಂಬ ಹೊಸ ತಂತ್ರಜ್ಞಾನವನ್ನು ಪರೀಕ್ಷಿಸುತ್ತಿದೆ. ಇದರ ಭಾಗವಾಗಿ, ಮೊಬೈಲ್‌ಗಳಿಗೆ 'Extremely Severe Alert' ಎಂಬ ಪರೀಕ್ಷಾರ್ಥ ಸಂದೇಶವನ್ನು ಕಳುಹಿಸಲಾಗಿದೆ.

ನವದೆಹಲಿ/ಬೆಂಗಳೂರು (ಮೇ.2): ನಿಮ್ಮ ಮೊಬೈಲ್ ಫೋನ್ ಇಂದು ದಿಢೀರನೆ ವಿಚಿತ್ರವಾದ ಶಬ್ದದೊಂದಿಗೆ ರಿಂಗ್ ಆಗಿದೆಯೇ? ಸ್ಕ್ರೀನ್ ಮೇಲೆ 'Extremely Severe Alert' ಎಂಬ ಸಂದೇಶ ಕಾಣಿಸಿಕೊಂಡು ಗಾಬರಿ ಹುಟ್ಟಿಸಿದೆಯೇ? ಆದ್ರೆ, ಈ ವಿಚಾರವಾಗಿ ನೀವು ಭಯಪಡುವ ಅಗತ್ಯವಿಲ್ಲ. ಇದು ಭಾರತ ಸರ್ಕಾರವು ಜಾರಿಗೆ ತರುತ್ತಿರುವ ಹೊಸ ಸುರಕ್ಷಾ ತಂತ್ರಜ್ಞಾನದ ಪರೀಕ್ಷಾರ್ಥ ಪ್ರಯೋಗವಾಗಿದೆ.

ಭಾರತ ಸರ್ಕಾರವು ವಿಪತ್ತು ನಿರ್ವಹಣಾ ಪ್ರಾಧಿಕಾರದೊಂದಿಗೆ ಸೇರಿ ದೇಶೀಯ ತಂತ್ರಜ್ಞಾನವನ್ನು ಬಳಸಿಕೊಂಡು 'ಸೆಲ್ ಬ್ರಾಡ್‌ಕಾಸ್ಟ್' (Cell Broadcast) ಎಂಬ ಹೊಸ ವ್ಯವಸ್ಥೆಯನ್ನು ರೂಪಿಸಿದೆ. ಪ್ರಕೃತಿ ವಿಕೋಪಗಳು (ಪ್ರವಾಹ, ಸುನಾಮಿ, ಭೂಕಂಪ) ಅಥವಾ ತುರ್ತು ಪರಿಸ್ಥಿತಿಗಳು ಎದುರಾದಾಗ ನಾಗರಿಕರಿಗೆ ತಕ್ಷಣವೇ ಎಚ್ಚರಿಕೆ ನೀಡಲು ಈ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಅದರ ಭಾಗವಾಗಿಯೇ ಇಂದು ಅನೇಕ ಮೊಬೈಲ್‌ಗಳಿಗೆ ಈ ಪರೀಕ್ಷಾರ್ಥ ಸಂದೇಶವನ್ನು ಕಳುಹಿಸಲಾಗಿದೆ.

ಪರೀಕ್ಷಾರ್ಥ ಸಂದೇಶದಲ್ಲಿ ಏನಿದೆ?

ಇಂದು ಬಂದಿರುವ ಸಂದೇಶವು ಇಂಗ್ಲಿಷ್ ಮತ್ತು ಕನ್ನಡ ಎರಡೂ ಭಾಷೆಗಳಲ್ಲಿದೆ.

Extremely severe alert

India, launches Cell Broadcast using indigenous technology, for instant disaster alerting service for its citizens. Alert citizens, safe nation. No action is required by the public upon receipt of this message. This is a test message. Govt of India.

ಭಾರತ ಸರ್ಕಾರವು ತನ್ನ ನಾಗರಿಕರಿಗೆ ತ್ವರಿತ ವಿಪತ್ತು ಮುನ್ನೆಚ್ಚರಿಕೆ ಸೇವೆಯನ್ನು ಒದಗಿಸಲು ದೇಶೀಯ ತಂತ್ರಜ್ಞಾನವನ್ನು ಬಳಸಿಕೊಂಡು ಸೆಲ್ ಬ್ರಾಡ್ಕಾಸ್ಟ್ ವ್ಯವಸ್ಥೆಯನ್ನು ಪ್ರಾರಂಭಿಸುತ್ತಿದೆ. ಸುರಕ್ಷಿತ ರಾಷ್ಟ್ರ;. ಈ ಸಂದೇಶವು ಬಂದಾಗ ಸಾರ್ವಜನಿಕರು ಯಾವುದೇ ಕ್ರಮ ಕೈಗೊಳ್ಳುವ ಅಗತ್ಯವಿರುವುದಿಲ್ಲ. ಇದು ಕೇವಲ ಪ್ರಾಯೋಗಿಕ ಪರೀಕ್ಷಾರ್ಥ ಸಂದೇಶವಾಗಿದೆ. -ಭಾರತ ಸರ್ಕಾರ.

ಜನರು ಏನು ಮಾಡಬೇಕು?

ಇದು ಯಾವುದೇ ಹ್ಯಾಕಿಂಗ್ ಅಥವಾ ವೈರಸ್ ಅಲ್ಲ. ಸರ್ಕಾರದ ಅಧಿಕೃತ ಸುರಕ್ಷಾ ಕ್ರಮವಾಗಿದೆ. ಈ ಸಂದೇಶ ಬಂದಾಗ ನೀವು ಯಾರಿಗೂ ಕರೆ ಮಾಡುವ ಅಥವಾ ಸ್ಕ್ರೀನ್ ಮೇಲೆ ಯಾವುದೇ ಲಿಂಕ್ ಕ್ಲಿಕ್ ಮಾಡುವ ಅಗತ್ಯವಿಲ್ಲ. ಕೇವಲ 'OK' ಒತ್ತಿದರೆ ಸಾಕು. ಇಂತಹ ಪರೀಕ್ಷೆಗಳು ಭವಿಷ್ಯದಲ್ಲಿ ದೊಡ್ಡ ಅನಾಹುತಗಳನ್ನು ತಡೆಯಲು ಮತ್ತು ಸಾವಿರಾರು ಜೀವಗಳನ್ನು ಉಳಿಸಲು ಸಹಕಾರಿಯಾಗಲಿವೆ.

ಈ ತಂತ್ರಜ್ಞಾನದ ವಿಶೇಷತೆ ಏನು?

ಸಾಮಾನ್ಯ ಎಸ್ಎಂಎಸ್ (SMS) ಸಂದೇಶಗಳಿಗಿಂತ ಇದು ಭಿನ್ನವಾಗಿದೆ. ನಿಮ್ಮ ಫೋನ್‌ನಲ್ಲಿ ನೆಟ್‌ವರ್ಕ್ ಸಮಸ್ಯೆ ಇದ್ದರೂ ಅಥವಾ ಫೋನ್ 'ಸೈಲೆಂಟ್ ಮೋಡ್'ನಲ್ಲಿದ್ದರೂ ಸಹ, ಈ ಎಚ್ಚರಿಕೆ ಸಂದೇಶವು ದೊಡ್ಡ ಶಬ್ದದೊಂದಿಗೆ ನಿಮ್ಮನ್ನು ಎಚ್ಚರಿಸುತ್ತದೆ. ಇದರಿಂದಾಗಿ ತುರ್ತು ಪರಿಸ್ಥಿತಿಯಲ್ಲಿ ಯಾರೂ ಮಾಹಿತಿಯಿಂದ ವಂಚಿತರಾಗುವುದಿಲ್ಲ. 'ಜಾಗೃತ ನಾಗರಿಕರು, ಸುರಕ್ಷಿತ ರಾಷ್ಟ್ರ' ಎಂಬ ಧ್ಯೇಯದೊಂದಿಗೆ ಸರ್ಕಾರವು ಈ ಹೆಜ್ಜೆ ಇಟ್ಟಿದೆ. ಹಾಗಾಗಿ ಇನ್ನು ಮುಂದೆ ಇಂತಹ ಸಂದೇಶಗಳು ನಿಮ್ಮ ಫೋನ್‌ಗೆ ಬಂದರೆ ಸಮಾಧಾನದಿಂದಿರಿ, ಇದು ನಿಮ್ಮ ಸುರಕ್ಷತೆಗಾಗಿ ಸರ್ಕಾರ ಮಾಡುತ್ತಿರುವ ವ್ಯವಸ್ಥೆ ಎಂದು ತಿಳಿಯಿರಿ.