ನವದೆಹಲಿ[ನ.16]: ಲಕ್ಷಾಂತರ ಆದಿವಾಸಿ ಕುಟುಂಬಗಳಿಗೆ ಮಾರಕವಾಗುವ ಅಂಶಗಳನ್ನು ಹೊಂದಿದ್ದ, ದೇಶಾದ್ಯಂತ ಭಾರೀ ಪ್ರತಿಭಟನೆಗೂ ಕಾರಣವಾಗಿದ್ದ ಅರಣ್ಯಹಕ್ಕು ತಿದ್ದುಪಡಿ ಕುರಿತ ಕರಡು ಮಸೂದೆಯನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಕೇಂದ್ರ ಅರಣ್ಯ ಸಚಿವ ಪ್ರಕಾಶ್‌ ಜಾವಡೇಕರ್‌ æೕಳಿದ್ದಾರೆ. ಅಲ್ಲದೇ ತಿದ್ದುಪಡಿ ಕರಡು ಪ್ರತಿಯನ್ನು ಕೇಂದ್ರ ಸರ್ಕಾರ ರಚಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿವಾಸಿಗಳು ಹಾಗೂ ಅರಣ್ಯವಾಸಿಗಳಿಗೆ ಹೆಚ್ಚು ಹಕ್ಕು ಕೊಡುವ ನಿಟ್ಟಿನಲ್ಲಿ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿದಿದೆ. ಅಲ್ಲದೇ ಕರಡು ಪ್ರತಿಯನ್ನು ಸಂಪೂರ್ಣವಾಗಿ ಹಿಂಪಡೆಯಲಾಗಿದೆ ಎಂದು ಹೇಳಿದ್ದಾರೆ. ನಮ್ಮ ಸರ್ಕಾರ ಆದಿವಾಸಿಗಳ ಪರವಾಗಿದ್ದು, ದೇಶದ ಅಭಿವೃದ್ಧಿಯಲ್ಲಿ ಅವರ ಪಾತ್ರ ಪ್ರಮುಖವಾಗಿದೆ. ಕೆಲವು ರಾಜ್ಯಗಳು ತಮ್ಮದೇ ಆದ ಅರಣ್ಯ ಕಾಯ್ದೆ ಹೊಂದಿದ್ದರಿಂದ, ಅಧಿಕಾರಿಗಳು ಸೇರಿ ಶೂನ್ಯ ಕರಡನ್ನು ರಚಿಸಿದರು. ಆದರೆ ಈ ಕರಡು ಅರಣ್ಯಹಕ್ಕು ಕಾಯ್ದೆಯನ್ನು ತಿದ್ದುಪಡಿ ಮಾಡಲು ಮುಂದಾಗಿದೆ ಎಂದು ಬಿಂಬಿತವಾಗಿತ್ತು ಎಂದು ಹೇಳಿದ್ದಾರೆ.

ಕಾಡು ರಕ್ಷಣೆಗೆ ಶಸ್ತ್ರಾಸ್ತ್ರ ಉಪಯೋಗಿಸಬಹದು, ವಾರಂಟ್‌ ಇಲ್ಲದೇ ಬಂಧಿಸಬಹುದು, ಅರಣ್ಯ ನಿಯಮ ಉಲ್ಲಂಘಿಸಿದ ಆದಿವಾಸಿಗಳು ಸೇರಿದಂತೆ ಯಾವುದೇ ವ್ಯಕ್ತಿಗಳನ್ನು ಬಂಧಿಸಿ, ಶಿಕ್ಷೆಗೆ ಗುರಿಪಡಿಸಬಹುದು, ಸಂರಕ್ಷಿತ ಪ್ರದೇಶಗಳಿಗೆ ತೆರಳಿ ಆದಿವಾಸಿಗಳು ಅರಣ್ಯ ಉತ್ಪನ್ನ ಸಂಗ್ರಹಿಸುವಂತಿಲ್ಲ, ಅರಣ್ಯದ ಯಾವುದೇ ಭಾಗವನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಲು ಅವಕಾಶ ಮಾಡಿಕೊಡಬಹುದು, ಸಂರಕ್ಷಿತ ಅರಣ್ಯ ಪ್ರದೇಶ ನಿಯಮ ಕಾಪಾಡಲು ಅರಣ್ಯಾಧಿಕಾರಿಗಳಿಗೆ ಹೆಚ್ಚಿನ ಕಾನೂನು ಬಲ ತುಂಬು ಅಂಶಗಳು ಪ್ರಸ್ತಾಪಿತ ಮಸೂದೆಯಲ್ಲಿದ್ದವು.

ಆದರೆ ಈ ನಿಯಮಗಳು ತಮ್ಮ ಜೀವನೋಪಾಯಕ್ಕಾಗಿ ಅರಣ್ಯ ಉತ್ಪನ್ನಗಳನ್ನೇ ಅವಲಂಬಿಸಿರುವ ಆದಿವಾಸಿಗಳ ಜೀವನದ ಹಕ್ಕನ್ನೇ ಕಸಿದುಕೊಳ್ಳುತ್ತದೆ ಎಂಬ ಆತಂಕ ವ್ಯಕ್ತವಾಗಿತ್ತು. ಹೀಗಾಗಿಯೇ ಇದರ ವಿರುದ್ಧ ದೇಶವ್ಯಾಪಿ ಹೋರಾಟ ಕೂಡಾ ನಡೆದಿತ್ತು.