ಜಡ್ಜ್ ನೇಮಕ ವಿಳಂಬ: ಸುಪ್ರೀಂ ಗರಂ; ಕೇಂದ್ರದಿಂದ ಮತ್ತೆ 20 ನ್ಯಾಯಮೂರ್ತಿಗಳ ಹೆಸರು ವಾಪಸ್..!
ಕಾಲಮಿತಿಯಲ್ಲಿ ಸರ್ಕಾರ ಜಡ್ಜ್‌ಗಳನ್ನು ನೇಮಿಸುತ್ತಿಲ್ಲ, ಇದರಿಂದ ವ್ಯವಸ್ಥೆಯೇ ಕೆಡುತ್ತಿದೆ. ಕೊಲಿಜಿಯಂ 2ನೇ ಬಾರಿ ಶಿಫಾರಸು ಮಾಡಿದರೆ ಸರ್ಕಾರ ಒಪ್ಪಲೇಬೇಕು ಎಂದು ಸುಪ್ರೀಂಕೋರ್ಟ್ ತಾಕೀತು ಮಾಡಿದೆ.
ನವದೆಹಲಿ: ಉನ್ನತ ನ್ಯಾಯಾಲಯಗಳಿಗೆ ನ್ಯಾಯಾಧೀಶರ ನೇಮಕದಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಮತ್ತೊಮ್ಮೆ ಕಿಡಿಕಾರಿರುವ ಸುಪ್ರೀಂಕೋರ್ಟ್, ‘ಕೇಂದ್ರವು ನಿರ್ಧಾರ ಕೈಗೊಳ್ಳುವಲ್ಲಿ ಮಾಡುತ್ತಿರುವ ವಿಳಂಬವು ನೇಮಕಾತಿ ಪ್ರಕ್ರಿಯೆಯ ವ್ಯವಸ್ಥೆಯನ್ನೇ ಹತಾಶಗೊಳಿಸುತ್ತಿದೆ’ ಎಂದು ಚಾಟಿ ಬೀಸಿದೆ. ಇದೇ ವೇಳೆ, ಕಾಲಮಿತಿಯಲ್ಲಿ ನ್ಯಾಯಾಧೀಶರ ನೇಮಕ ಆಗಬೇಕು ಎಂದು ಈ ಹಿಂದೆಯೇ ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು. ಆ ಆದೇಶ ಪಾಲನೆ ಆಗಲೇಬೇಕು ಎಂದಿರುವ ಕೋರ್ಚ್, ತನ್ನ ಆದೇಶ ಪಾಲನೆ ಆಗುವಂತೆ ನೋಡಿಕೊಳ್ಳಬೇಕು ಎಂದು ಸರ್ಕಾರದ ವಕೀಲರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರಿಗೆ ಸೂಚಿಸಿ ಡಿಸೆಂಬರ್ 8ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿದೆ.
ಉನ್ನತ ನ್ಯಾಯಾಲಯಗಳಿಗೆ ನ್ಯಾಯಾಧೀಶರ ನೇಮಕಕ್ಕೆ ಸುಪ್ರೀಂಕೋರ್ಟ್‌ನ ಕೊಲಿಜಿಯಂ ಮಂಡಳಿ ಮಾಡುವ ಶಿಫಾರಸುಗಳನ್ನು ಕಾಲಮಿತಿಯಲ್ಲಿ ಸರ್ಕಾರ ಒಪ್ಪಿಕೊಳ್ಳಬೇಕು ಎಂದು ಕಳೆದ ವರ್ಷ ಏ.20ರಂದು ಸುಪ್ರೀಂ ಕೋರ್ಚ್ ಆದೇಶ ಹೊರಡಿಸಿತ್ತು. ಆದರೆ ಆ ಆದೇಶ ಪಾಲನೆ ಆಗುತ್ತಿಲ್ಲ ಎಂದು ಬೆಂಗಳೂರು ವಕೀಲರ ಸಂಘ ಅರ್ಜಿ ಸಲ್ಲಿಸಿತ್ತು.
ಇದನ್ನು ಓದಿ: ಕೊಲಿಜಿಯಂ ಕುರಿತು ಕೇಂದ್ರ ಸಚಿವ ರಿಜಿಜು ಹೇಳಿಕೆಗೆ ನಿವೃತ್ತ ಸಿಜೆಐ ಲಲಿತ್ ಆಕ್ಷೇಪ
ಸೋಮವಾರ ಇದರ ವಿಚಾರಣೆ ಮುಂದುವರಿಸಿದ ನ್ಯಾಯಮೂರ್ತಿ ಎಸ್.ಕೆ.ಕೌಲ್ ಹಾಗೂ ನ್ಯಾಯಮೂರ್ತಿ ಅಭಯ್ ಓಕಾ, ‘ಒಮ್ಮೆ ಶಿಫಾರಸಾದ ಹೆಸರನ್ನು ಕೊಲಿಜಿಯಂ ಪುನರುಚ್ಚರಿಸಿತು ಎಂದರೆ ಸರ್ಕಾರ ಅಂಗೀಕರಿಸಲೇಬೇಕು ಎಂದಿದೆ. ಆದರೆ ಸರ್ಕಾರ ಅಂಗೀಕರಿಸುತ್ತಿಲ್ಲ. ಕೇಂದ್ರ ಸರ್ಕಾರ ನ್ಯಾಯಾಧೀಶರ ನೇಮಕಕ್ಕೆ 2014ರಲ್ಲಿ ನ್ಯಾಯಾಂಗ ನೇಮಕ ಆಯೋಗ ಕಾಯ್ದೆ ಜಾರಿಗೊಳಿಸಲು ಮುಂದಾಗಿತ್ತು. 2015ರಲ್ಲಿ ಈ ಕಾಯ್ದೆಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತು. ಇದನ್ನೇ ನೆಪ ಮಾಡಿಕೊಂಡು ಸರ್ಕಾರವು ಜಡ್ಜ್‌ಗಳ ನೇಮಕಕ್ಕೆ ಅನುಮೋದನೆ ನೀಡುವುದನ್ನು ವಿಳಂಬ ಮಾಡಕೂಡದು’ ಎಂದು ಹೇಳಿತು.
‘ನಾವು ಒಂದೇ ಸಲಕ್ಕೆ ಹಲವು ಹೆಸರುಗಳನ್ನು ಶಿಫಾರಸು ಮಾಡುತ್ತೇವೆ. ಆಗ ಆ ಗುಂಪಿನಲ್ಲಿ ಒಬ್ಬರ ಹೆಸರನ್ನು ಮಾತ್ರ ಸರ್ಕಾರ ಅನುಮೋದಿಸಿ, ಉಳಿದವರ ಹೆಸರನ್ನು ಬಾಕಿ ಉಳಿಸಿಕೊಳ್ಳುತ್ತದೆ. ಹೀಗಾದಾಗ ಸೇವಾ ಹಿರಿತನದಲ್ಲಿ ವ್ಯತ್ಯಾಸವಾಗುತ್ತದೆ. ನಾವು ಸೇವಾ ಹಿರಿತನ ಗಮನಿಸಿ ಮಾಡಿದ ಶಿಫಾರಸುಗಳಿಗೆ ಚ್ಯುತಿ ಬರುತ್ತದೆ’ ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.
‘ಕೆಲವು ಶಿಫಾರಸುಗಳನ್ನು ಸರ್ಕಾರ ಒಂದೂವರೆ ವರ್ಷದಿಂದ ಬಾಕಿ ಇರಿಸಿಕೊಂಡಿದೆ. ಇದರಿಂದಾಗಿ ಜಡ್ಜ್ ಹುದ್ದೆಗೆ ಶಿಫಾರಸಾದ ಕೆಲವು ವಕೀಲರು ಬೇಸತ್ತು ತಮ್ಮ ಹೆಸರನ್ನು ಹಿಂಪಡೆಯುತ್ತಿದ್ದಾರೆ. ಸರ್ಕಾರ ಮಾಡುವ ವಿಳಂಬದಿಂದ ಜಡ್ಜ್‌ಗಳ ನೇಮಕ ವ್ಯವಸ್ಥೆಯೇ ಹತಾಶವಾಗುತ್ತಿದೆ’ ಎಂದು ಪೀಠ ಕಿಡಿಕಾರಿತು.
ಇದನ್ನೂ ಓದಿ: ಜಡ್ಜ್‌ಗಳ ನೇಮಕ ವಿಳಂಬ: ಕೇಂದ್ರ ಸರ್ಕಾರದ ಬಗ್ಗೆ Supreme Court ಗರಂ
ಇದಕ್ಕೆ ಪ್ರತಿಕ್ರಿಯಿಸಿದ ಅಟಾರ್ನಿ ಜನರಲ್ ವೆಂಕಟರಮಣಿ, ‘ನವೆಂಬರ್ 11ರಂದು ಈ ಕುರಿತು ನೀವು ನೀಡಿದ ಸೂಚನೆಗಳ ಬಗ್ಗೆ ಸರ್ಕಾರ ಚರ್ಚೆ ನಡೆಸುತ್ತಿದೆ. ಶೀಘ್ರ ನಮ್ಮ ಪ್ರತಿಕ್ರಿಯೆ ಸಲ್ಲಿಸುತ್ತೇವೆ’ ಎಂದರು. ಆಗ ಪೀಠವು, ‘ಡಿ.ಸೆಂಬರ್ 8ಕ್ಕೆ ವಿಚಾರಣೆ ಮುಂದೂಡುತ್ತೇವೆ. ಅಷ್ಟರೊಳಗೆ ನೆಲದ ಕಾನೂನು (ಕೋರ್ಟ್ ಆದೇಶ) ಪಾಲನೆ ಆಗುವಂತೆ ಸರ್ಕಾರಕ್ಕೆ ನೀವು ಸಲಹೆ ನೀಡುತ್ತೀರಿ ಎಂದು ಅಪೇಕ್ಷಿಸುತ್ತೇವೆ’ ಎಂದು ಹೇಳಿ ಕಲಾಪ ಮುಗಿಸಿತು.
ಕೊಲಿಜಿಯಂ ಬಗ್ಗೆ ಆಕ್ಷೇಪಿಸಿದ್ದಕ್ಕೆ ಗರಂ
ನ್ಯಾಯಾಧೀಶರ ನೇಮಕಕ್ಕೆ ಶಿಫಾರಸು ಮಾಡುವ ಸಮಿತಿಯಾದ ‘ಕೊಲಿಜಿಯಂ’ ಬಗ್ಗೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಆಡಿದ ಮಾತುಗಳಿಗೆ ಸುಪ್ರೀಂಕೋರ್ಟ್ ಸೋಮವಾರ ನೇರಾನೇರ ಆಕ್ಷೇಪ ವ್ಯಕ್ತಪಡಿಸಿದೆ. ದೊಡ್ಡ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ಕೊಲಿಜಿಯಂ ಬಗ್ಗೆ ಮಾತನಾಡಿದ್ದಾರೆ. ಅಗತ್ಯಬಿದ್ದರೆ ಕ್ರಮ ಜರುಗಿಸುತ್ತೇವೆ ಎಂದು ನ್ಯಾಯಪೀಠ ಕಿಡಿಕಾರಿದೆ.
ಇದನ್ನೂ ಓದಿ: ಮತ್ತೆ ಕೇಂದ್ರ ಸರ್ಕಾರ-ನ್ಯಾಯಾಂಗದ ಮಧ್ಯೆ ಸಂಘರ್ಷ?
ಮತ್ತೆ 20 ಜಡ್ಜ್‌ಗಳ ಹೆಸರು ವಾಪಸ್!
ವಿವಿಧ ಹೈಕೋರ್ಟ್‌ಗಳಿಗೆ ನೇಮಕ ಮಾಡುವಂತೆ ಕೊಲಿಜಿಯಂ ಕಳುಹಿಸಿದ್ದ 20 ಹೆಸರುಗಳ ಕಡತವನ್ನು ಕೇಂದ್ರ ಸರ್ಕಾರ ಮರಳಿಸಿದೆ ಎಂದು ತಿಳಿದುಬಂದಿದೆ. ಈ ಹೆಸರುಗಳನ್ನು ಮರುಪರಿಶೀಲನೆ ಮಾಡುವಂತೆ ಸರ್ಕಾರ ಹೇಳಿದೆ. ಜಡ್ಜ್‌ಗಳ ನೇಮಕದ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಸುಪ್ರೀಂಕೋರ್ಟ್‌ನ ನಡುವೆ ಘರ್ಷಣೆ ನಡೆಯುತ್ತಿರುವಾಗಲೇ ಈ ಬೆಳವಣಿಗೆ ನಡೆದಿದೆ.