ನವದೆಹಲಿ(ಮಾ.14): ರಾಜ್ಯ ಚುನಾವಣಾ ಆಯುಕ್ತರಾಗಿ ನೇಮಕಗೊಳ್ಳುವವರು ಸ್ವತಂತ್ರ ವ್ಯಕ್ತಿಗಳಾಗಿರಬೇಕೇ ಹೊರತೂ, ಕೇಂದ್ರ ಅಥವಾ ರಾಜ್ಯ ಸರ್ಕಾರದಲ್ಲಿ ಯಾವುದೇ ಹುದ್ದೆ ಹೊಂದಿರುವವರಾಗಿರಬಾರದು. ಒಂದು ವೇಳೆ ಯಾವುದೇ ರಾಜ್ಯದಲ್ಲಿ ಹೀಗೆ ಸರ್ಕಾರದ ಹುದ್ದೆಯಲ್ಲಿ ಇರುವವರನ್ನು ನೇಮಕ ಮಾಡಿದ್ದರೆ ತಕ್ಷಣವೇ ಅವರನ್ನು ತೆರವುಗೊಳಿಸಬೇಕು ಎಂದು ಸುಪ್ರೀಂಕೋರ್ಟ್‌ ಮಹತ್ವದ ಆದೇಶ ನೀಡಿದೆ.

ಗೋವಾ ಸರ್ಕಾರ ತನ್ನ ಕಾನೂನು ಇಲಾಖೆ ಕಾರ್ಯದರ್ಶಿಗೆ ರಾಜ್ಯ ಚುನಾವಣಾ ಆಯುಕ್ತರ ಹೊಣೆಯನ್ನು ಹೆಚ್ಚುವರಿಯಾಗಿ ನೀಡಿತ್ತು. ಅವರು ಕೊರೋನಾ ಕಾರಣ ನೀಡಿ ಮುನಿಸಿಪಲ್‌ ಚುನಾವಣೆ ಮುಂದೂಡಿದ್ದರು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಆರ್‌.ಎಫ್‌. ನಾರಿಮನ್‌ ಅವರನ್ನು ಒಳಗೊಂಡ ಮೂವರು ಸದಸ್ಯರ ನ್ಯಾಯಪೀಠ ಈ ಮಹತ್ವದ ಆದೇಶ ಹೊರಡಿಸಿದೆ.

ರಾಜ್ಯ ಚುನಾವಣಾ ಆಯುಕ್ತರಾಗಿ ನೇಮಕಗೊಳ್ಳುವವರು, ರಾಜ್ಯ ಸರ್ಕಾರದಿಂದ ಸಂಪೂರ್ಣ ಸ್ವತಂತ್ರರಾಗಿರಬೇಕು. ಏಕೆಂದರೆ ಅವರು ಇಡೀ ಚುನಾವಣೆಯ ಉಸ್ತುವಾರಿ ಹೊತ್ತಿರುತ್ತಾರೆ. ಸರ್ಕಾರದ ಅಧೀನದಲ್ಲಿ ಕೆಲಸ ಮಾಡುವ ಅಧಿಕಾರಿಯನ್ನು ಚುನಾವಣಾ ಆಯುಕ್ತರಾಗಿ ನೇಮಕ ಮಾಡಿರುವುದು ಸಂವಿಧಾನದ ಕಾನೂನುಗಳನ್ನು ಅಣಕ ಮಾಡಿದಂತೆ ಎಂದು ನ್ಯಾಯಪೀಠ ಕಿಡಿಕಾರಿದೆ.