ನವದೆಹಲಿ(ಜ.01): ಕರ್ತವ್ಯ ನಿರ್ವಹಿಸುವ ವೇಳೆ ಗಾಯಗೊಂಡು ಅಂಗ ವೈಕಲ್ಯಕ್ಕೆ ತುತ್ತಾದ ಹಾಗೂ ಸೇವೆಯಲ್ಲಿ ಮುಂದುವರಿದ ಎಲ್ಲಾ ನೌಕರರಿಗೂ ಅಂಗ ವೈಕಲ್ಯ ಪರಿಹಾರ ದೊರೆಯಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಶುಕ್ರವಾರ ತಿಳಿಸಿದ್ದಾರೆ.

2009ರಲ್ಲಿ ಹೊರಡಿಸಿದ್ದ ಆದೇಶದ ಪ್ರಕಾರ, 2004 ಜ.1ರ ಬಳಿಕ ನೇಮಗೊಂಡ ಹಾಗೂ ರಾಷ್ಟ್ರೀಯ ಪಿಂಚಣಿ ಯೋಜನೆಯ ಅಡಿಯಲ್ಲಿ ಬರುವ ನೌಕರರಿಗೆ ಅಂಗ ವೈಕಲ್ಯ ಪರಿಹಾರ ಲಭ್ಯವಾಗುತ್ತಿರಲಿಲ್ಲ. ಕೇಂದ್ರ ಸರ್ಕಾರ ಶುಕ್ರವಾರ ಹೊರಡಿಸಿರುವ ಪರಿಷ್ಕೃತ ಆದೇಶದಿಂದಾಗಿ ಸಿಆರ್‌ಪಿಎಫ್‌, ಬಿಎಸ್‌ಎಫ್‌, ಸಿಐಎಸ್‌ಎಫ್‌ನಂತಹ ಕೇಂದ್ರೀಯ ಶಸ್ತ್ರಾಸ್ತ್ರ ಪೊಲೀಸ್‌ ಪಡೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಯುವ ಸಿಬ್ಬಂದಿಗೆ ನಿರಾಳತೆ ದೊರೆಯಲಿದೆ.

ಒಂದು ವೇಳೆ ಅಂಗ ವೈಕಲ್ಯಕ್ಕೆ ತುತ್ತಾಗಿಯೂ ಸೇವೆ ನಿರ್ವಹಿಸಲು ಸಾಧ್ಯವಾದರೆ ಅಂಗವೈಕಲ್ಯತೆಯ ಪ್ರಮಾಣಕ್ಕೆ ತಕ್ಕಂತೆ ಪರಿಹಾರ ಲಭ್ಯವಾಗಲಿದೆ ಎಂದು ಜಿತೇಂದ್ರ ಸಿಂಗ್‌ ತಿಳಿಸಿದ್ದಾರೆ.