ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಕುಟುಂಬಕ್ಕೆ ಸಂಬಂಧಿಸಿದ ಪಟೌಡಿ ಕುಟುಂಬದ 15,000 ಕೋಟಿ ರೂಪಾಯಿ ಮೌಲ್ಯದ ಐತಿಹಾಸಿಕ ಆಸ್ತಿಗಳು ಸರ್ಕಾರದ ನಿಯಂತ್ರಣಕ್ಕೆ ಬರುವ ಹಂತಕ್ಕೆ ಹತ್ತಿರವಾಗಿದೆ ಎಂದು ವರದಿಯಾಗಿದೆ.

ಭೋಪಾಲ್: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಕುಟುಂಬಕ್ಕೆ ಸಂಬಂಧಿಸಿದ ಪಟೌಡಿ ಕುಟುಂಬದ 15,000 ಕೋಟಿ ರೂಪಾಯಿ ಮೌಲ್ಯದ ಐತಿಹಾಸಿಕ ಆಸ್ತಿಗಳು ಸರ್ಕಾರದ ನಿಯಂತ್ರಣಕ್ಕೆ ಬರುವ ಹಂತಕ್ಕೆ ಹತ್ತಿರವಾಗಿದೆ ಎಂದು ವರದಿಯಾಗಿದೆ. ಮಧ್ಯಪ್ರದೇಶ ಹೈಕೋರ್ಟ್ 2015 ರಲ್ಲಿ ಮಹತ್ವದ ತೀರ್ಪಿನಲ್ಲಿ, ಈ ಆಸ್ತಿಗಳ ಮೇಲೆ ವಿಧಿಸಲಾಗಿದ್ದ ತಡೆಯಾಜ್ಞೆಯನ್ನು ತೆಗೆದುಹಾಕಿತು. ಇದು 1968 ರ ಶತ್ರು ಆಸ್ತಿ ಕಾಯ್ದೆಯ ಅಡಿಯಲ್ಲಿ ಅವುಗಳ ಸ್ವಾಧೀನಕ್ಕೆ ದಾರಿ ಮಾಡಿಕೊಡುತ್ತದೆ. ಈಗ ಸರ್ಕಾರ ಕಣ್ಣಿಟ್ಟಿರುವ ಆಸ್ತಿಯಲ್ಲಿ ಸೈಫ್ ಅಲಿ ಖಾನ್ ತಮ್ಮ ಬಾಲ್ಯವನ್ನು ಕಳೆದ ಫ್ಲ್ಯಾಗ್ ಸ್ಟಾಫ್ ಹೌಸ್, ನೂರ್-ಉಸ್-ಸಬಾ ಅರಮನೆ, ದಾರ್-ಉಸ್-ಸಲಾಮ್, ಹಬೀಬಿಯ ಬಂಗಲೆ, ಅಹಮದಾಬಾದ್ ಅರಮನೆ, ಕೊಹೆಫಿಜಾ ಆಸ್ತಿ ಪರಿಶೀಲನೆಯಲ್ಲಿರುವ ಪ್ರಮುಖ ಆಸ್ತಿಗಳಾಗಿವೆ.

ಈ ಆಸ್ತಿಗಳ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ವಿವೇಕ್ ಅಗರ್ವಾಲ್ ಅವರು ಆದೇಶ ಹೊರಡಿಸುತ್ತಾ, ತಿದ್ದುಪಡಿ ಮಾಡಿದ ಶತ್ರು ಆಸ್ತಿ ಕಾಯ್ದೆ, 2017 ರ ಅಡಿಯಲ್ಲಿ ಶಾಸನಬದ್ಧ ಪರಿಹಾರವಿದೆ ಎಂದು ಹೇಳಿದ್ದರು ಹಾಗೂ ಸಂಬಂಧಪಟ್ಟ ಪಕ್ಷಗಳು 30 ದಿನಗಳಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾತಿನಿಧ್ಯ ವಹಿಸುವಂತೆ ನಿರ್ದೇಶಿಸಿದರು. ಇಂದಿನಿಂದ 30 ದಿನಗಳ ಒಳಗೆ ಪ್ರಾತಿನಿಧ್ಯ ಸಲ್ಲಿಸಿದರೆ, ಮೇಲ್ಮನವಿ ಪ್ರಾಧಿಕಾರವು ಮಿತಿಯ ಅಂಶವನ್ನು ಪ್ರಕಟಿಸುವುದಿಲ್ಲ ಮತ್ತು ತನ್ನದೇ ಆದ ಅರ್ಹತೆಯ ಆಧಾರದ ಮೇಲೆ ಮೇಲ್ಮನವಿಯನ್ನು ಪರಿಗಣಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ. ವಿಭಜನೆಯ ನಂತರ ಪಾಕಿಸ್ತಾನಕ್ಕೆ ವಲಸೆ ಹೋದ ವ್ಯಕ್ತಿಗಳ ಒಡೆತನದ ಆಸ್ತಿಗಳನ್ನು ಕೇಂದ್ರ ಸರ್ಕಾರವು ಪಡೆಯಲು ಶತ್ರು ಆಸ್ತಿ ಕಾಯ್ದೆ ಅನುಮತಿಸುತ್ತದೆ. 

ಪಾಕಿಸ್ತಾನಕ್ಕೆ ವಲಸೆ ಹೋಗಿದ್ದ ಅಬಿದಾ ಸುಲ್ತಾನ್

ಭೋಪಾಲ್‌ನ ಕೊನೆಯ ನವಾಬ ಹಮೀದುಲ್ಲಾ ಖಾನ್‌ಗೆ ಮೂವರು ಹೆಣ್ಣು ಮಕ್ಕಳಿದ್ದರು. ಅವರ ಮಕ್ಕಳಲ್ಲಿ ಹಿರಿಯಳಾದ ಅಬಿದಾ ಸುಲ್ತಾನ್ 1950 ರಲ್ಲಿ ಪಾಕಿಸ್ತಾನಕ್ಕೆ ವಲಸೆ ಹೋದಳು. ಎರಡನೇ ಮಗಳು ಸಾಜಿದಾ ಸುಲ್ತಾನ್ ಭಾರತದಲ್ಲಿಯೇ ಉಳಿದು, ನವಾಬ್ ಇಫ್ತಿಕರ್ ಅಲಿ ಖಾನ್ ಪಟೌಡಿ ಅವರನ್ನು ವಿವಾಹವಾದರು ಮತ್ತು ಆಸ್ತಿಗೆ ಕಾನೂನುಬದ್ಧ ಉತ್ತರಾಧಿಕಾರಿಯಾದರು. ಸಾಜಿದಾ ಅವರ ಮೊಮ್ಮಗನಾದ ನಟ ಸೈಫ್ ಅಲಿ ಖಾನ್ ಆಸ್ತಿಯಲ್ಲಿ ಒಂದು ಪಾಲನ್ನು ಪಡೆದರು. ಆದರೂ, ಅಬಿದಾ ಸುಲ್ತಾನ್ ಅವರ ವಲಸೆಯಿಂದಾಗಿ ಸರ್ಕಾರವು ಆಸ್ತಿಗಳನ್ನು ಶತ್ರು ಆಸ್ತಿ ಎಂದು ಹೇಳಿಕೊಳ್ಳಲು ಕಾರಣವಾಯ್ತು. 2019 ರಲ್ಲಿ, ನ್ಯಾಯಾಲಯವು ಸಾಜಿದಾ ಸುಲ್ತಾನ್ ಅವರನ್ನು ಕಾನೂನುಬದ್ಧ ಉತ್ತರಾಧಿಕಾರಿ ಎಂದು ಗುರುತಿಸಿತು, ಆದರೆ ಇತ್ತೀಚಿನ ತೀರ್ಪು ಕುಟುಂಬದ ಆಸ್ತಿ ವಿವಾದವನ್ನು ಮತ್ತೆ ಮುನ್ನೆಲೆಗೆ ತಂದಿದೆ.

1.5 ಲಕ್ಷ ಜನರಿಗೆ ತೆರವಾಗುವ ಭೀತಿ

ಭೋಪಾಲ್ ಕಲೆಕ್ಟರ್ ಕೌಶಲೇಂದ್ರ ವಿಕ್ರಮ್ ಸಿಂಗ್ ಅವರು ಈ ಆಸ್ತಿಗಳ ಕಳೆದ 72 ವರ್ಷಗಳ ಮಾಲೀಕತ್ವದ ದಾಖಲೆಗಳನ್ನು ಪರಿಶೀಲಿಸುವ ಯೋಜನೆಯನ್ನು ಪ್ರಕಟಿಸಿದರು. ಈ ಭೂಮಿಯಲ್ಲಿ ವಾಸಿಸುವ ವ್ಯಕ್ತಿಗಳನ್ನು ರಾಜ್ಯದ ಗುತ್ತಿಗೆ ಕಾನೂನುಗಳ ಅಡಿಯಲ್ಲಿ ಬಾಡಿಗೆದಾರರಾಗಿ ಪರಿಗಣಿಸಬಹುದು ಎಂದು ಅವರು ಹೇಳಿದ್ದರು. ಸರ್ಕಾರದ ಈ ಸಂಭಾವ್ಯ ಸ್ವಾಧೀನವು 1.5 ಲಕ್ಷ ನಿವಾಸಿಗಳನ್ನು ಆತಂಕದ ಸ್ಥಿತಿಯಲ್ಲಿರಿಸಿದೆ. ಸಮೀಕ್ಷೆಗಳನ್ನು ನಡೆಸಿ ಮಾಲೀಕತ್ವವನ್ನು ನಿರ್ಧರಿಸುವ ಯೋಜನೆಗಳೊಂದಿಗೆ ಸರ್ಕಾರ ಮುಂದುವರಿಯುತ್ತಿರುವುದರಿಂದ ಅನೇಕರು ತೆರವುಗೊಳ್ಳುವ ಭಯದಲ್ಲಿದ್ದಾರೆ.

ತಡೆಯಾಜ್ಞೆಯನ್ನು ತೆಗೆದುಹಾಕಲಾಗಿದ್ದರೂ ಈ ಆಸ್ತಿಗಳನ್ನು ಶತ್ರು ಆಸ್ತಿ ಕಾಯ್ದೆಯಡಿ ವಿಲೀನಗೊಳಿಸುವುದು ಸುಲಭವಲ್ಲ. ಪಟೌಡಿ ಕುಟುಂಬಕ್ಕೆ ಮೇಲ್ಮನವಿ ಸಲ್ಲಿಸಲು ಇನ್ನೂ ಅವಕಾಶವಿದೆ ಎಂದು ಅಲ್ಲಿನ ನಿವಾಸಿಯಾದ ಸುಮೇರ್ ಖಾನ್ ಹೇಳಿದ್ದಾರೆ. ನಾವು ತೆರಿಗೆ ಪಾವತಿಸುತ್ತೇವೆ, ಆದರೆ ನಮ್ಮ ಮನೆಗಳಿಗೆ ಯಾವುದೇ ನೋಂದಣಿ ಇಲ್ಲ. ನವಾಬನ ಗುತ್ತಿಗೆಗಳು ಇನ್ನೂ ಹಾಗೆಯೇ ಇರಬೇಕು ಎಂದು ಮತ್ತೊಬ್ಬ ನಿವಾಸಿ ಚಾಂದ್ ಮಿಯಾನ್ ಕಳವಳ ವ್ಯಕ್ತಪಡಿಸಿದ್ದಾರೆ. ಸರ್ಕಾರ ಈ ಆಸ್ತಿಗಳ ಮೇಲೆ ಹಕ್ಕು ಸಾಧಿಸುತ್ತಿದೆ, ಆದರೆ ಹಲವು ವರ್ಷಗಳಿಂದ ಈ ಆಸ್ತಿ ಮಾರಾಟವಾಗಿದೆ ಅಥವಾ ಗುತ್ತಿಗೆಗೆ ನೀಡಲಾಗಿದೆ. ಈ ವಿಷಯವು ಸರಳವಾಗಿಲ್ಲ ಎಂದು ಈ ಪ್ರದೇಶದಲ್ಲಿ ವಾಸಿಸುವ ನಸೀಮ್ ಖಾನ್ ಹೇಳಿದ್ದಾರೆ. ಪರಿಸ್ಥಿತಿ ಜಟಿಲವಾಗಿದ್ದು, ಕುಟುಂಬಕ್ಕೆ ಕಾನೂನು ಮಾರ್ಗಗಳು ಇನ್ನೂ ತೆರೆದಿರುವುದರಿಂದ, ಈ ಐತಿಹಾಸಿಕ ಆಸ್ತಿಗಳ ಭವಿಷ್ಯವು ತೂಗುಗತ್ತಿಯಲ್ಲಿದೆ.