ರಾಜ್ಯದ ಕರಾವಳಿಗೆ ಶುಭ ಸುದ್ದಿ, ಶೀಘ್ರದಲ್ಲೇ ಭಾರತೀಯ ರೈಲ್ವೆಯಲ್ಲಿ ಕೊಂಕಣ್ ರೈಲ್ವೆ ವಿಲೀನ!
ಕೊಂಕಣ್ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವ ಸಾಧ್ಯತೆಗಳ ಬಗ್ಗೆ ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಸುಳಿವು ನೀಡಿದ್ದಾರೆ. ಕರ್ನಾಟಕ, ಕೇರಳ ಮತ್ತು ಗೋವಾ ಸರ್ಕಾರಗಳೊಂದಿಗೆ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ಮಹಾರಾಷ್ಟ್ರದ ಒಪ್ಪಿಗೆ ಪಡೆದ ನಂತರ ವಿಲೀನ ಪ್ರಕ್ರಿಯೆ ಆರಂಭವಾಗಲಿದೆ.
ಬೆಂಗಳೂರು (ಸೆ.20): ಬಹುತೇಕ ಕೇರಳದ ಮಾಲೀಕತ್ವದಲ್ಲಿಯೇ ಇರುವ ಕೊಂಕಣ್ ರೈಲ್ವೆಯನ್ನು ಈಗಲಾದರೂ ಭಾರತೀಯ ರೈಲ್ವೆ ಜೊತೆ ವಿಲೀನ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಕರ್ನಾಟಕದ ಕರಾವಳಿಗರು ನಡೆಸುತ್ತಿದ್ದ ಹೋರಾಟಕ್ಕೆ ಕೊನೆಗೂ ಜಯ ಸಿಗುವ ಲಕ್ಷಣ ಕಂಡಿದೆ. ಶೀಘ್ರದಲ್ಲಿಯೇ ಕೊಂಕಣ್ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನ ಮಾಡುವ ಚಿಂತನೆ ಕೇಂದ್ರ ಸರ್ಕಾರದ ಮುಂದಿದೆ ಎಂದು ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಬೆಳಗಾವಿಯಲ್ಲಿ ಹೇಳಿದ್ದಾರೆ. ರಾಜ್ಯದ ಕರಾವಳಿ ಜನರಿಗೆ ಉತ್ತಮ ಸೇವೆಗಳನ್ನು ನೀಡಬೇಕಾದಲ್ಲಿ ಕೊಂಕಣ್ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನ ಮಾಡುವ ಅಗತ್ಯ ಮೊದಲಿಗಿಂತಲೂ ಹೆಚ್ಚಾಗಿ ಕಾಣುತ್ತಿದೆ ಎಂದು ಹೇಳಿದ್ದಾರೆ.
ಕರ್ನಾಟಕದ ಕರಾವಳಿ ಮಾತ್ರವಲ್ಲ, ಕೊಂಕಣ್ ರೈಲ್ವೆ ಜಾಲ ಕೇರಳದಿಂದ ಮಹಾರಾಷ್ಟ್ರದವರೆಗೂ ಹರಡಿಕೊಂಡಿದೆ. ಭಾರತದ ಅರಬ್ಬಿ ಕರಾವಳಿಯ ನರನಾಡಿ ಕೊಂಕಣ್ ರೈಲ್ವೇಸ್. ಈಜಾಲವು ಕೇರಳದಿಂದ ಮಹಾರಾಷ್ಟ್ರದವರೆಗೂ ಹರಡಿಕೊಂಡಿದೆ. ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ನಾವು ಇದನ್ನು ಭಾರತೀಯ ರೈಲ್ವೇಯೊಂದಿಗೆ ವಿಲೀನಗೊಳಿಸುವ ಬಗ್ಗೆ ಯೋಚಿಸುತ್ತಿದ್ದೇವೆ. ಕರ್ನಾಟಕ, ಕೇರಳ ಮತ್ತು ಗೋವಾ ಸರ್ಕಾರಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಮಹಾರಾಷ್ಟ್ರಕ್ಕೆ ಮನವರಿಕೆ ಮಾಡಿದ ನಂತರ, ವಿಲೀನ ಪ್ರಕ್ರಿಯೆಯನ್ನು ಆರಂಭ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಕೊಂಕಣ್ ರೈಲ್ವೆಯ 756.25 ಕಿಲೋಮೀಟರ್ ಜಾಲದಲ್ಲಿ ಕರ್ನಾಟಕದಲ್ಲಿ 239 ಕಿಲೋಮೀಟರ್ ಹಾದು ಹೋಗಲಿದ್ದರೆ, ಮಹಾರಾಷ್ಟ್ರದಲ್ಲಿ ಗರಿಷ್ಠ 361 ಕಿಲೋಮೀಟರ್ ಸಂಚಾರ ವ್ಯಾಪ್ತಿ ಹೊಂದಿದೆ.
ಇಂದು ರೈಲ್ವೆ ದೊಡ್ಡ ಜಾಲವಾಗಿದೆ. ಪ್ರಯಾಣಿಕರಿಗೆಉತ್ತಮ ಸೇವೆಗಳನ್ನು ಒದಗಿಸುವ ಅಗತ್ಯವಿದೆ. ಭಾರತೀಯ ರೈಲ್ವೇಯೊಂದಿಗೆ ಕೊಂಕಣ್ ರೈಲ್ವೆಯನ್ನು ವಿಲೀನಗೊಳಿಸುವ ಬಗ್ಗೆ ಪರಿಗಣಿಸಲಾಗುತ್ತಿದೆ. ಈ ಹಿಂದೆ ರೈಲ್ವೆ ಇಲಾಖೆಯು ರಾಜ್ಯ ಸರ್ಕಾರದ ಶೇ.50ರಷ್ಟು ಕೊಡುಗೆಯೊಂದಿಗೆ ರಾಜ್ಯದಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿತ್ತು ಆದರೆ ಈಗ ರಾಜ್ಯ ಸರ್ಕಾರದಿಂದ ಯಾವುದೇ ಸಹಕಾರವಿಲ್ಲ ಎಂಬ ಕಾರಣಕ್ಕೆ 'ಎಲ್ಲಾ ವೆಚ್ಚವನ್ನು ಕೇಂದ್ರವೇ ಭರಿಸಲಿದೆ' ಎಂದು ನಿರ್ಧರಿಸಲಾಗಿದೆ ಎಂದು ಸೋಮಣ್ಣ ತಿಳಿಸಿದ್ದಾರೆ.
ರೈಲ್ವೇಸ್‌ನ ಈ ಒಂದು ಕಂಪನಿಯಿಂದಲೇ 1700 ಕೋಟಿ ಲಾಭಾಂಶ ಪಡೆದ ಕೇಂದ್ರ ಸರ್ಕಾರ
1993ರ ಮಾರ್ಚ್ 20 ರಂದು ಉಡುಪಿ ಹಾಗೂ ಮಂಗಳೂರಿನ ನಡುವೆ ಮೊಟ್ಟಮೊದಲ ಕೊಂಕಣ್ ರೈಲ್ವೆಯಲ ಪ್ಯಾಸೆಂಜರ್ ಟ್ರೇನ್ ಓಡಾಟ ನಡೆಸಿತ್ತು. ಸಂಪೂರ್ಣವಾಗಿ ಮುಕ್ತಾಯಗೊಂಡ ಟ್ರ್ಯಾಕ್‌ನಲ್ಲಿ ಮೊದಲ ಟ್ರೇನ್ 1998ರ ಜನವರಿ 26 ರಂದು ಓಡಾಟ ನಡೆಸಿತ್ತು. ಮತ್ಸಗಂಧ, ನೇತ್ರಾವತಿ ಎಕ್ಸ್‌ಪ್ರೆಸ್, ಪಂಚಗಂಗಾ ಎಕ್ಸ್‌ಪ್ರೆಸ್‌ನಂಥ ಪ್ರಮುಖ ರೈಲುಗಳು ಈ ಮಾರ್ಗದಲ್ಲಿ ಓಡಾಟ ನಡೆಸುತ್ತಿವೆ.
ಒಂದೇ ಅಪ್ಲಿಕೇಶನ್‌ನಲ್ಲಿ ಎಲ್ಲಾ ಸೇವೆ ನೀಡುವ ಸೂಪರ್ App ಸಿದ್ಧ ಮಾಡ್ತಿದೆ ಭಾರತೀಯ ರೈಲ್ವೇಸ್!