ಗುಡ್ ನ್ಯೂಸ್: 95 ವರ್ಷದ ಅಜ್ಜಿ ಕೊರೋನಾದಿಂದ ಗುಣಮುಖ
ಒಂದು ಕಡೆ ದೇಶದಲ್ಲಿ ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಿರುವಾಗಲೇ ತಮಿಳುನಾಡು ಕಡೆಯಿಂದ ಆಶಾದಾಯಕವಾದಂತಹ ಸುದ್ದಿಯೊಂದು ಹೊರಬಿದ್ದಿದೆ. 95 ವರ್ಷದ ಅಜ್ಜಿ ಇದೀಗ ಕೊರೋನಾದಿಂದ ಗುಣಮುಖರಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಕರೂರು(ಮೇ.01): ತಮಿಳುನಾಡಿನ ದಿಂಡಿಗಲ್ ಮೂಲದ 95 ವರ್ಷದ ಮಹಿಳೆ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಚೇತರಿಕೆಯಾದ ಅತ್ಯಂತ ಹಿರಿಯ ರೋಗಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಇದಕ್ಕೂ ಮೊದಲು 93 ವರ್ಷ ಮತ್ತು 88 ವರ್ಷದ ಕೇರಳ ದಂಪತಿಗಳು ಕೊರೋನಾದಿಂದ ಚೇತರಿಸಿಕೊಂಡಿದ್ದರು. ತಬ್ಲೀಘಿ ಜಮಾತ್‌ಗಳಿಂದ ತಮಿಳುನಾಡಿನ 95ರ ಈ ವೃದ್ಧೆಗೆ ಸೋಂಕು ತಗುಲಿತ್ತು. 3 ವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ.
ತಮಿಳುನಾಡಿನಲ್ಲಿ ವ್ಯಾಪಕವಾಗಿ ಕೊರೋನಾ ವೈರಸ್ ಹಬ್ಬುತ್ತಿದೆ. ಇಂದು(ಮೇ.01) ಮುಂಜಾನೆ 09ಗಂಟೆ ವೇಳೆಗೆ ತಮಿಳುನಾಡಿನಲ್ಲಿ 161 ಹೊಸ ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ. ಚೆನ್ನೈ ನಗರದಲ್ಲೇ ಇದುವರೆಗೂ ಮುನ್ನೂರಕ್ಕೂ ಅಧಿಕ ಕೊರೋನಾ ಪ್ರಕರಣಗಳು ದಾಖಲಾಗಿವೆ.
ದೇಶದಲ್ಲಿ ಗುರುವಾರ ಒಂದೇ ದಿನ ದಾಖಲೆಯ 82 ಜನ ಸಾವು!
ನವದೆಹಲಿ: ಲಾಕ್‌ಡೌನ್ ತೆರವಿಗೆ ಇನ್ನು 3 ದಿನಗಳು ಬಾಕಿ ಇರುವಾಗಲೇ ದೇಶದಲ್ಲಿ ಕೊರೋನಾ ಸಾವಿನ ಸಂಖ್ಯೆ ಗುರುವಾರ ದಾಖಲೆ ಪ್ರಮಾಣದ ಏರಿಕೆ ಕಂಡಿದೆ. ಒಂದೇ ದಿನ 82 ಮಂದಿ ಬಲಿಯಾಗಿದ್ದು, ಮಾರಕ ವೈರಾಣುವಿಗೆ ಈವರೆಗೆ ಭಾರತದಲ್ಲಿ ಬಲಿಯಾದವರ ಸಂಖ್ಯೆ 1146ಕ್ಕೇರಿಕೆಯಾಗಿದೆ.
ಇದೇ ವೇಳೆ ಗುರುವಾರ ಮತ್ತೆ ಹೊಸದಾಗಿ 2004 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 34661ಕ್ಕೆ ಏರಿಕೆ ಆಗಿದೆ. ಬುಧವಾರದಂದು ಕೊರೋನಾ ವೈರಸ್‌ಗೆ 75 ಮಂದಿ ಬಲಿ ಆಗಿದ್ದು ಈವರೆಗಿನ ಗರಿಷ್ಠ ಎನಿಸಿತ್ತು. ಅದೇ ದಿನ ದಾಖಲೆಯ 2100 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು.
ಕೊರೋನಾ ವಿರುದ್ಧ ಹೋರಾಟ: ಮಹಾಮಾರಿ ವೈರಸ್ ಕೊಲ್ಲಲು ಕನ್ನಡಿಗನಿಂದ ಸಿಕ್ತಾ ಔಷಧಿ..?
ಈ ನಡುವೆ ಮಹಾರಾಷ್ಟ್ರದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ 10 ಸಾವಿರ ಗಡಿ ದಾಟಿದ್ದು, ಸಾವಿನ ಸಂಖ್ಯೆ 500ರ ಗಡಿಯತ್ತ ಸಾಗುತ್ತಿದೆ. ಗುಜರಾತಿನಲ್ಲಿ ಒಂದೇ ದಿನ 313 ಪ್ರಕರಣಗಳು ದಾಖಲಾಗಿದ್ದು, 4,395 ಮಂದಿಗೆ ಸೋಂಕು ತಗುಲಿದೆ. ಅದೇ ರೀತಿ ಇತರ ರಾಜ್ಯಗಳಲ್ಲೂ ಕೊರೋನಾ ಹೊಸ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆ ಏರಿಕೆ ಆಗುತ್ತಿದೆ.
ದೇಶದಲ್ಲಿ 11 ದಿನಕ್ಕೆ ಕೊರೋನಾ ಡಬಲ್
ನವದೆಹಲಿ: ದೇಶದಲ್ಲೀಗ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಪ್ರತಿ 11 ದಿನಗಳಿಗೊಮ್ಮೆ ದ್ವಿಗುಣವಾಗುತ್ತಿದೆ. ಲಾಕ್‌ಡೌನ್ ಜಾರಿಗೊಳಿಸುವುದಕ್ಕಿಂತ ಮುಂಚೆ ಇದು 3.4 ದಿನಗಳಿಗೆ ದ್ವಿಗುಣವಾಗುತ್ತಿತ್ತು. ಹೀಗಾಗಿ ಲಾಕ್‌ಡೌನ್ ನಂತರ ಉತ್ತಮ ಪ್ರಗತಿ ಸಾಧಿಸಿದಂತಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಇನ್ನು, ಕೊರೋನಾದಿಂದ ಸಾವಿಗೀಡಾಗುವವರ ಸಂಖ್ಯೆ ಸದ್ಯ ಶೇ.3.2ರಷ್ಟಿದೆ. ಮೃತರಲ್ಲಿ ಶೇ.14ರಷ್ಟುಜನರು 45 ವರ್ಷದ ಒಳಗಿನವರು, 34.8ರಷ್ಟುಜನರು 45-60 ವರ್ಷದವರು ಹಾಗೂ ಶೇ.51.2ರಷ್ಟುಜನರು 60 ವರ್ಷಕ್ಕಿಂತ ಮೇಲ್ಪಟ್ಟವರು. ಕೊರೋನಾದಿಂದ ಗುಣಮುಖರಾಗುವವರ ಸಂಖ್ಯೆ ಕಳೆದ 14 ದಿನಗಳಲ್ಲಿ ಶೇ.13ರಿಂದ ಶೇ.25ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಇದುವರೆಗೆ 8,324 ಜನರು ಕೊರೋನಾದಿಂದ ಗುಣಮುಖರಾಗಿದ್ದಾರೆ.
ಕೊರೋನಾ ಸೋಂಕಿತರ ಸಂಖ್ಯೆ ದೆಹಲಿ, ಉತ್ತರ ಪ್ರದೇಶ, ಜಮ್ಮು ಕಾಶ್ಮೀರ, ಒಡಿಶಾ, ರಾಜಸ್ಥಾನ, ತಮಿಳುನಾಡು ಹಾಗೂ ಪಂಜಾಬ್‌ನಲ್ಲಿ 11ರಿಂದ 20 ದಿನಗಳಿಗೆ ದ್ವಿಗುಣವಾಗುತ್ತಿದೆ. ಕರ್ನಾಟಕ ಕೇರಳ, ಲಡಾಖ್, ಹರ್ಯಾಣ, ಉತ್ತರಾಖಂಡದಲ್ಲಿ 20ರಿಂದ 40 ದಿನಗಳಿಗೆ ದ್ವಿಗುಣವಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.