ಮುಂಬೈ/ನವದೆಹಲಿ(ಜು.29): ಮಾರಕ ಕೊರೋನಾ ವೈರಸ್‌ನಿಂದ ತತ್ತರಿಸಿ ಹೋಗಿರುವ ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ವಾಣಿಜ್ಯ ರಾಜಧಾನಿ ಮುಂಬೈ ಮಹಾನಗರಗಳಲ್ಲಿ ಸೋಂಕು ಅಚ್ಚರಿಯ ರೀತಿಯಲ್ಲಿ ಇಳಿಮುಖವಾಗತೊಡಗಿದೆ. ಇದರಿಂದಾಗಿ ಈ ಎರಡೂ ನಗರಗಳಲ್ಲಿ ಕೊರೋನಾ ತನ್ನ ಪರಾಕಾಷ್ಠೆ ತಲುಪಿ ಕುಸಿತದ ಹಾದಿ ಹಿಡಿದಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಅಧಿಕ ಕೊರೋನಾ ಪ್ರಕರಣಗಳು ದಾಖಲಾಗುತ್ತಿರುವ ಕರ್ನಾಟಕ ಹಾಗೂ ಬೆಂಗಳೂರಿಗೆ ಈ ಬೆಳವಣಿಗೆ ಆಶಾಕಿರಣದಂತೆ ಗೋಚರಿಸತೊಡಗಿದೆ.

ಕೊರೋನಾ ಹಾಟ್‌ಸ್ಪಾಟ್‌ನಲ್ಲಿ ಈಗ 2 ಕೇಸ್: 4T ಫಾರ್ಮುಲಾದಿಂದ ಸಮರ ಗೆದ್ದ ಧಾರಾವಿ!

ಮುಂಬೈನಲ್ಲಿ ಮಂಗಳವಾರ 9000 ಕೊರೋನಾ ಟೆಸ್ಟ್‌ಗಳು ನಡೆದಿದ್ದು, ಈ ಪೈಕಿ ಕೇವಲ 700 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದು ಕಳೆದ 100 ದಿನಗಳಲ್ಲೇ ಮುಂಬೈನಲ್ಲಿ ದಾಖಲಾದ ದೈನಂದಿನ ಕನಿಷ್ಠ ಎನಿಸಿಕೊಂಡಿದೆ. ಇನ್ನೊಂದೆಡೆ ದೆಹಲಿಯಲ್ಲಿ ಸೋಮವಾರ ಕೇವಲ 613 ಕೇಸ್‌ಗಳು ದಾಖಲಾಗಿದ್ದು, 62 ದಿನಗಳಲ್ಲೇ ಅತಿ ಕನಿಷ್ಠ ಎನಿಸಿಕೊಂಡಿದೆ.

ಇದೇ ವೇಳೆ ಮುಂಬೈನಲ್ಲಿ ಪ್ರಕರಣ ದ್ವಿಗುಣ ಆಗುತ್ತಿರುವ ಪ್ರಮಾಣ 68 ದಿನಗಳಿಗೆ ಏರಿಕೆ ಆಗಿದ್ದು, ಗುಣಮುಖರಾಗುತ್ತಿರುವವರ ಪ್ರಮಾಣ ಶೇ.73ರಷ್ಟಿದೆ. ಮುಂಬೈನಲ್ಲಿ ಈವರೆಗೆ 1,10,182 ಕೊರೋನಾ ಕೇಸ್‌ಗಳು ದಾಖಲಾಗಿದ್ದು, 21,812 ಸಕ್ರಿಯ ಪ್ರಕರಣಗಳಿವೆ. ಮುಂಬೈನಲ್ಲಿ ಜೂ.10ರಂದು 1751 ಪ್ರಕರಣಗಳು ದಾಖಲಾಗಿದ್ದು, ಈವರೆಗಿನ ಗರಿಷ್ಠ ಎನಿಸಿಕೊಂಡಿತ್ತು. ಈ ನಡುವೆ, ಪುಣೆ ಮತ್ತು ಥಾಣೆಗಿಂತಲೂ ಕಡಿಮೆ ಕೇಸ್‌ಗಳು ಮುಂಬೈನಲ್ಲಿ ದಾಖಲಾಗುತ್ತಿವೆ.

ಕೊರೋನಾತಂಕ, ರಾಜ್ಯದಲ್ಲಿ 2000 ಗಡಿ ದಾಟಿದ ಸಾವಿನ ಸಂಖ್ಯೆ!

ಇನ್ನು ದೆಹಲಿಯಲ್ಲಿ ಜೂ.23ರಂದು ದಾಖಲಾದ 3947 ಕೊರೋನಾ ಕೇಸ್‌ಗಳಿಗೆ ಹೋಲಿಸಿದರೆ ದೈನಂದಿನ ಸೋಂಕಿನ ಪ್ರಮಾಣ ಅರ್ಧಕ್ಕರ್ಧ ಇಳಿಕೆ ಕಂಡಿದೆ. ದೆಹಲಿಯಲ್ಲಿ ಈವರೆಗೆ ಒಟ್ಟು 1,32,275 ಪ್ರಕರಣಗಳು ದಾಖಲಾಗಿದ್ದು, 3,881 ಮಂದಿ ಬಲಿ ಆಗಿದ್ದಾರೆ. ಇನ್ನು ದೆಹಲಿಯಲ್ಲಿ ಗುಣಮುಖರಾದವರ ಪ್ರಮಾಣ ಶೇ.88ಕ್ಕೆ ಹೆಚ್ಚಳಗೊಂಡಿದ್ದು, 10,887 ಸಕ್ರಿಯ ಪ್ರಕರಣಗಳಿವೆ. ದೆಹಲಿಯಲ್ಲಿ ಸೋಂಕು ದ್ವಿಗುಣ ಪ್ರಮಾಣ 76.6 ದಿನಕ್ಕೆ ಏರಿಕೆ ಆಗಿದೆ.

ಮುಂಬೈ

ದಿನಾಂಕ ಸೋಂಕು

ಮೇ 23 1,751 (ಗರಿಷ್ಠ)

ಜು.26 1,115

ಜು.27 1,033

ಜು.28 700

ದೆಹಲಿ

ದಿನಾಂಕ ಸೋಂಕು

ಜೂ.23 3947 ಕೇಸ್‌ (ಗರಿಷ್ಠ)

ಜು.26 1,075

ಜು.27 613

ಜು.28​ 1,056