* ಚುನಾವಣೆಯಲ್ಲಿ ಸೋತ ಗೋವಾ ಕಾಂಗ್ರೆಸ್‌ಗೆ ಮತ್ತೊಂದು ಶಾಕ್* ಶೀಘ್ರದಲ್ಲೇ ರಾಜ್ಯದ ಪ್ರಮುಖ ನಾಯಕ ಬಿಜೆಪಿಗೆ* ಸೋಲಿನ ಆಘಾತದಲ್ಲಿರುವ ಕಾಂಗ್ರೆಸ್‌ಗೆ ಮತ್ತೊಂದು ಹೊಡೆತ

ಪಣಜಿ(ಏ.06): ವಿಧಾನಸಭೆ ಚುನಾವಣೆ ಬೆನ್ನಲ್ಲೇ ಗೋವಾದಲ್ಲಿ ಕಾಂಗ್ರೆಸ್‌ಗೆ ಭಾರೀ ಹಿನ್ನಡೆಯಾಗುವ ಸಾಧ್ಯತೆ ಮತ್ತೆ ದಟ್ಟವಾಗಿದೆ. ಹೌದು ಲಭ್ಯವಾದ ಮಾಹಿತಿ ಅನ್ವಯ ಹಿರಿಯ ಕಾಂಗ್ರೆಸ್ ನಾಯಕ ದಿಗಂಬರ್ ಕಾಮತ್ ಬಿಜೆಪಿ ಸೇರುವ ಸಾಧ್ಯತೆಗಳಿವೆ, ಕಮಲ ಪಾಳಯ ಇವರನ್ನು ಇಂಧನ ಸಚಿವರನ್ನಾಗಿ ಮಾಡಬಹುದು. ಕಾಮತ್ ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದರು. ನಂತರ ಬಿಜೆಪಿ ಸೇರಿದ್ದರು, ಅಲ್ಲಿ ಸುಮಾರು 11 ವರ್ಷಗಳ ಕಾಲ ಇದ್ದರು. ಇದಾದ ಬಳಿಕ ಮತ್ತೆ ತವರಿಗೆ ವಾಪಸಾಗಿದ್ದ ಅವರು ಕಾಂಗ್ರೆಸ್ ಸೇರಿ ರಾಜ್ಯದ ಸಿಎಂ ಕೂಡ ಆಗಿದ್ದರು. ಹೀಗಿರುವಾಗ 2022ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸುವ ಜವಾಬ್ದಾರಿ ಅವರ ಮೇಲಿತ್ತು. ಆದರೆ ಪಕ್ಷ ಸೋಲನ್ನು ಎದುರಿಸಬೇಕಾಯಿತು.

ಈಗಾಗಲೇ ಐದು ರಾಜ್ಯಗಳ ಸೋಲಿನಿಂದ ಚೇತರಿಸಿಕೊಳ್ಳಲು ಹವಣಿಸುತ್ತಿರುವ ಕಾಂಗ್ರೆಸ್ ಗೆ ಮತ್ತೊಂದು ಭಾರಿ ಹಿನ್ನಡೆಯಾಗಬಹುದು. ಹಿರಿಯ ಕಾಂಗ್ರೆಸ್ ನಾಯಕ ದಿಗಂಬರ್ ಕಾಮತ್ ಮತ್ತೊಮ್ಮೆ ಗೋವಾದಲ್ಲಿ ಬಿಜೆಪಿ ಸೇರುವುದರಿಂದ ಪಕ್ಷಕ್ಕೆ ಬಹುದೊಡ್ಡ ಹೊಡೆತ ಸಿಗಬಹುದು ಎಂಬುವುದು ರಾಜಕೀಯ ತಜ್ಞರ ಮಾತಾಗಿದೆ.

ದಿಗಂಬರ್ ಕಾಮತ್ ಯಾರು?

ಗೋವಾದಲ್ಲಿ 10 ವರ್ಷಗಳಿಂದ ಕಾಂಗ್ರೆಸ್ ಅಧಿಕಾರದಲ್ಲಿಲ್ಲ. ಕಾಮತ್ ಮೂರು ವರ್ಷಗಳಿಂದ ವಿರೋಧ ಪಕ್ಷದ ನಾಯಕರಾಗಿದ್ದರು. ಅವರನ್ನು ಗೋವಾದಲ್ಲಿ ಕಾಂಗ್ರೆಸ್‌ನ ಪ್ರಮುಖ ನಾಯಕ ಎಂದು ಪರಿಗಣಿಸಲಾಗಿದೆ. ಅವರು ಮಾಜಿ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ರಾಣೆ ಅವರ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದರು. 2005ರಲ್ಲಿ ಕಾಂಗ್ರೆಸ್ ಸೇರಿ 2007ರಲ್ಲಿ ಸಿಎಂ ಆದರು. ಕಾಮತ್ ವಿರುದ್ಧವೂ ಭ್ರಷ್ಟಾಚಾರದ ಆರೋಪಗಳಿವೆ. 2007ರಿಂದ 2012ರ ನಡುವೆ ಅವರು ಸಿಎಂ ಆಗಿದ್ದಾಗ ನ್ಯಾಯಮೂರ್ತಿ ಎಂ.ಬಿ.ಷಾ ಆಯೋಗ 35 ಸಾವಿರ ಕೋಟಿ ರೂ.ಗಳ ಗಣಿ ಹಗರಣದಲ್ಲಿ ಅವರ ವಿರುದ್ಧ ಆರೋಪ ಮಾಡಿತ್ತು. 2014ರಲ್ಲಿ ಕೂಡ ಈ ಬಗ್ಗೆ ವಿಚಾರಣೆ ನಡೆಸಲಾಗಿತ್ತು.