ಭೂತಾನ್‌ನ ಶಿಂಟಾಫು ಸರೋವರ ಸ್ಫೋಟಗೊಂಡು ಉಂಟಾದ ಭೀಕರ ಹಠಾತ್ ಪ್ರವಾಹದಿಂದಾಗಿ ಲಯಾ ಪ್ರದೇಶದಲ್ಲಿ ರಸ್ತೆ ಮತ್ತು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಈ ಪ್ರವಾಹದ ನೀರು ಮೊಫು ಮತ್ತು ಸಂಕೋಶ್ ನದಿಗಳ ಮೂಲಕ ಹರಿದುಬರುತ್ತಿರುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.

ಇತ್ತೀಚೆಗೆ ಒಂದಾದ ಮೇಲೊಂದರಂತೆ ನೈಸರ್ಗಿಕ ವಿಕೋಪಗಳು ಸಂಭವಿಸುತ್ತಲಿವೆ. ನೇಪಾಳ ದುರಂತದಲ್ಲಿ ಸಾವಿರಾರು ಜನರು ಜೀವಂತ ಸಮಾಧಿಯಾದ ಭೀಕರ ದೃಶ್ಯಗಳ ಮಾಸುವ ಮುನ್ನವೇ ಇದೀಗ ಭೂತನ್‌ನ ಉತ್ತರ ಭಾಗದಲ್ಲಿರುವ ಶಿಂಟಾಫು ಸರೋವರದ ಸ್ಫೋಟದಿಂದಾಗಿ ಹಠಾತ್ ಪ್ರವಾಹ ಉಂಟಾಗಿದ್ದು, ನೀರಿನ ಪ್ರವಾಹವು ಲಯಾ ಪ್ರದೇಶದ ಪ್ರಮುಖ ರಸ್ತೆಯನ್ನೇ ಕೊಚ್ಚಿಕೊಂಡುಹೋಗಿದೆ. ಭೀಕರ ಪ್ರವಾಹದಿಂದಾಗ ಲಯಾ ಪ್ರದೇಶದ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.

ಭೂತಾನ್‌ನಲ್ಲಿ ಸಂಭವಿಸಿದ ಈ ದುರಂತ ಬೆನ್ನಲ್ಲೇ ಇತ್ತ ಪಶ್ಚಿಮ ಬಂಗಾಳ ಅರಣ್ಯ ಸಚಿವ ಮನೋಜ್ ಕುಮಾರ್ ಒರಾನ್ ಅವರು ಸಂಕೋಶ್ ನದಿಯ ದಡದಲ್ಲಿ ವಾಸಿಸುವ ನಿವಾಸಿಗಳಿಗೆ ಮುಂಜಾಗ್ರತೆಯಾಗಿ ಎಚ್ಚರಿಕೆ ಇರುವಂತೆ ತಿಳಿಸಿದ್ದಾರೆ.

ಸುರಕ್ಷಿತ ಸ್ಥಳಗಳಿಗೆ ತೆರಳುವುಂತೆ ಸೂಚನೆ

ಪಶ್ಚಿಮ ಬಂಗಾಳದ ಕುಮಾರ್‌ಗ್ರಾಮ್, ಚಾಂಗ್‌ಮರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರು ಜಾಗರೂಕರಾಗಿರಬೇಕು. ಅಗತ್ಯಬಿದ್ದರೆ ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳಲು ಅರಣ್ಯ ಸಚಿವರು ಮನವಿ ಮಾಡಿದ್ದಾರೆ. ಸಚಿವರು ಹೇಳುವ ಪ್ರಕಾರ, ಭೂತನ್‌ನಲ್ಲುಂಟಾಗಿರುವ ಪ್ರವಾಹ ಪ್ರಸ್ತುತ ಪಶ್ಚಿಮ ಬಂಗಾಳದ ಈ ಪ್ರದೇಶಗಳಿಂದ ಸುಮಾರು 50 ರಿಂದ 60 ಕಿಲೋಮೀಟರ್ ದೂರದಲ್ಲಿದೆ. ಒಂದು ವೇಳೆ ಪ್ರವಾಹದ ನೀರು ಕೆಳಕ್ಕೆ ಹರಿದುಬಂದರೆ ಅದು ಗಂಭೀರ ಪರಿಸ್ಥಿತಿ ಸೃಷ್ಟಿಸಬಹುದು.

ಭೂತಾನ್‌ನಲ್ಲಿನ ಹಿಮನದಿ ಪ್ರವಾಹದ ಬಗ್ಗೆ ಪ್ರತಿಕ್ರಿಯಿಸಿದ ಉತ್ತರ ಬಂಗಾಳ ಅಭಿವೃದ್ಧಿ ಸಚಿವ ನಿಸಿತ್ ಪ್ರಾಮಾಣಿಕ್ , ಕೂಚ್ ಬೆಹಾರ್ ಆಡಳಿತವು ಸಂಕೋಶ್ ನದಿಯ ದಡದಲ್ಲಿ ವಾಸಿಸುವ ನಿವಾಸಿಗಳಿಗೆ ಎಚ್ಚರಿಕೆ ನೀಡಿದೆ. ಅಗತ್ಯವಿದ್ದರೆ ಪರಿಹಾರ ಸಾಮಗ್ರಿಗಳನ್ನು ಒದಗಿಸಲಾಗುವುದು ಎಂದು ಅವರು ಹೇಳಿದ್ದಾರೆ. ಆ ಪ್ರದೇಶದಲ್ಲಿ ಮೈಕ್ರೊಫೋನ್ ಮೂಲಕ ಈ ಘೋಷಣೆ ಮಾಡಿದ್ದಾರೆ.

Scroll to load tweet…

ಭೂತಾನ್ ಪ್ರವಾಹದಿಂದ ಬಂಗಾಳಕ್ಕೆ ಹೇಗೆ ಸಮಸ್ಯೆ?

ಭೂತಾನ್ ಸರೋವರದಿಂದ ಹೊರಬಂದ ಪ್ರವಾಹದ ನೀರು ಮೊಫು ನದಿಯ ಮೂಲಕ ಸೋಂಕೋಶ್ ನದಿಯ ಕಡೆಗೆ ಚಲಿಸುತ್ತಿದೆ. ಈ ಕಾರಣದಿಂದಾಗಿ ಭೂತಾನಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಹೀಗಾಗಿ ಮುನ್ನೆಚ್ಚರಿಕೆಯಿಂದ ಬಂಗಾಳ ಮತ್ತು ಅಸ್ಸಾಂನಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.

ಭೂತಾನಿನ ತಕ್ತ್ಸೆಮಖಾಂಗ್ ಬಳಿಯ ಶಿತಂಪು ತ್ಶೋ ಸರೋವರವು ಇದ್ದಕ್ಕಿದ್ದಂತೆ ಒಡೆದು ಗುರುವಾರ ರಾತ್ರಿ ನೀರು ತಕ್ತ್ಸೆಮಖಾಂಗ್ ಪ್ರದೇಶಕ್ಕೆ ನುಗ್ಗಿದೆ. ಕತ್ತಲೆಯಾಗಿದ್ದರಿಂದ ಜನರಿಗೆ ಪ್ರವಾಹದ ನೀರಿನ ಪ್ರಮಾಣ ಅಂದಾಜಿಸಲು ಸಾಧ್ಯವಾಗಿಲ್ಲ. ಹರಿಯುವ ಪ್ರವಾಹದ ನೀರಿನ ಭೀಕರ ಸದ್ದು ದುರಂತದ ಪ್ರಮಾಣ ಸೂಚಿಸುತ್ತದೆ. ಸದ್ಯ ಭೂತಾನ್‌ನಲ್ಲಿ ಎಷ್ಟು ಪ್ರಮಾಣದ ಹಾನಿ ಸಂಭವಿಸಿದೆ ಎಂದು ಇನ್ನು ತಿಳಿದುಬಂದಿಲ್ಲ.