ಮಾಲಿನ್ಯ ನಿಯಂತ್ರಣದ ಹೊಣೆ ನ್ಯಾಯಾಲಯ ಹೊರಲು ಸಾಧ್ಯವಿಲ್ಲ. ಸರ್ಕಾರ ಗಂಭೀರವಾಗಿ ಯೋಚಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಸುಪ್ರೀಂ ತಪರಾಕಿ ಬೆನ್ನಲ್ಲೇ ದೆಹಲಿಯ(Delhi) ಶಾಲಾ ಕಾಲೇಜು ಬಂದ್
ದೆಹಲಿ(ಡಿ.03): ದೆಹಲಿಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಪರಿಸರ ಮಾಲಿನ್ಯದ(Pollution) ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್(Supreme court), ಈ ವಿಷಯದಲ್ಲಿ ಕೇಂದ್ರ ಮತ್ತು ದೆಹಲಿಯ ಆಮ್‌ಆದ್ಮಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ, ‘ಮಾಲಿನ್ಯ ನಿಯಂತ್ರಣಕ್ಕೆ ಏನು ಮಾಡಬಹುದು ಎಂದು 24 ಗಂಟೆಯೊಳಗೆ ತಿಳಿಸಿ. ನಿಮಗೆ ಕೆಲಸ ಮಾಡಲು ಆಗದೇ ಹೋದಲ್ಲಿ ನಾವೇ ಆಡಳಿತಾಧಿಕಾರಿ ನೇಮಕದಂಥ ಮಹತ್ವದ ಕ್ರಮಕ್ಕೂ ಮುಂದಾಗಲಿದ್ದೇವೆ ಎಂದು ಗಂಭೀರ ಎಚ್ಚರಿಕೆ ನೀಡಿ ವಿಚಾರಣೆಯನ್ನು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಮುಂದೂಡಿದೆ.
ಗುರುವಾರ ಮಾಲಿನ್ಯ ಕುರಿತ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರನ್ನೊಳಗೊಂಡ ನ್ಯಾಯಪೀಠ ‘‘ದೆಹಲಿ ಮತ್ತು ರಾಷ್ಟ್ರ ರಾಜಧಾನಿ ವಲಯದಲ್ಲಿ ಮಾಲಿನ್ಯದ ಪ್ರಮಾಣ ದಿನೇ ದಿನೇ ಏರಿಕೆಯಾಗುತ್ತಿದೆ. ಕಡಿಮೆ ಮಾಡುವಂತಹ ಯಾವುದೇ ಕ್ರಮಗಳನ್ನು ಇನ್ನೂ ಸಹ ಸರ್ಕಾರಗಳು ತೆಗೆದುಕೊಂಡಿಲ್ಲ. ನಾವು ಸಮಯ ಹಾಳು ಮಾಡುತ್ತಿದ್ದೇವೆ ಎನಿಸುತ್ತಿದೆ. ಅಧಿಕಾರಿಗಳಲ್ಲಿ ಸೃಜನಶೀಲತೆಯನ್ನು ನಾವು ತುಂಬಲು ಸಾಧ್ಯವಿಲ್ಲ. ಎಲ್ಲವನ್ನೂ ನಮ್ಮಿಂದಲೇ ಬಯಸಬೇಡಿ. ನೀವು ಏನಾದರೂ ಮಾರ್ಗಗಳನ್ನು ಹುಡುಕಿ ಮುಂದಿನ 24 ಗಂಟೆಗಳಲ್ಲಿ ನಮಗೆ ತಿಳಿಸಿ. ನಿಮಗೆ ಮಾಲಿನ್ಯ ನಿಯಂತ್ರಣ ಸಾಧ್ಯವಾಗದೇ ಹೋದಲ್ಲಿ ನಾವೇ ಅಭೂತಪೂರ್ವವಾದಂಥ ಯಾವುದಾದರೂ ಕ್ರಮ ಕೈಗೊಳ್ಳುತ್ತೇವೆ’ ಎಂದು ಎಚ್ಚರಿಸಿತು.
ನಿಮಗೆ ಸಾಧ್ಯವಿಲ್ಲದಿದ್ದರೆ ಸರ್ಕಾರ ನಡೆಸಲು ಅಧಿಕಾರಿ ನೇಮಕ, ಕೇಜ್ರಿ ಸರ್ಕಾರಕ್ಕೆ ಸುಪ್ರೀಂ ವಾರ್ನಿಂಗ್!
ಇದೇ ವೇಳೆ ಮಾಲಿನ್ಯ ಕಡಿತಕ್ಕಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆರಂಭಿಸಿರುವ ‘ರೆಡ್ ಲೈಟ್ ಆನ್, ಗಾಡಿ ಆಫ್’ ಆಂದೋಲನ ಕೇವಲ ಘೋಷಣೆಯಲ್ಲೇ ಉಳಿದುಕೊಂಡಿದೆ. ಇದರಿಂದ ಯಾವುದೇ ಉಪಯೋಗವಾಗಿಲ್ಲ. ಸರ್ಕಾರ ತನ್ನ ಪ್ರಚಾರಕ್ಕಾಗಿ ಈ ಆಂದೋಲನ ನಡೆಸುತ್ತಿದೆ. ಇದಕ್ಕಾಗಿ ಮಕ್ಕಳು ಘೋಷಣಾ ಪತ್ರಗಳನ್ನು ಹಿಡಿದು ರಸ್ತೆಗಳಲ್ಲಿ ನಿಂತಿದ್ದಾರೆ. ಅವರ ಆರೋಗ್ಯದ ಬಗ್ಗೆ ಗಮನ ಹರಿಸುವವರು ಯಾರು?’ ಎಂದು ಕೋರ್ಟ್ ಪ್ರಶ್ನಿಸಿದೆ. ಅಲ್ಲದೆ ವಯಸ್ಕರು ಮನೆಯಿಂದ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಮಕ್ಕಳನ್ನು ಏಕೆ ಶಾಲೆಗೆ ಕಳುಹಿಸಲಾಗುತ್ತಿದೆ. ಮಾಲಿನ್ಯ ಕಡಿಮೆ ಗದೇ ಇದ್ದರೂ ಶಾಲೆಗಳನ್ನು ತೆರೆದಿದ್ದು ಏಕೆ? ಎಂದು ಪ್ರಶ್ನಿಸಿದೆ.
ಶಾಲಾ ಕಾಲೇಜು ಬಂದ್
ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ತಪರಾಕಿ ಬೆನ್ನಲ್ಲೇ ಮುಂದಿನ ಆದೇಶದವರೆಗೆ ಶಾಲಾ ಕಾಲೇಜುಗಳನ್ನು ಮುಚ್ಚಲಾಗುವುದು. ಆದರೆ ಬೋರ್ಡ್ ಪರೀಕ್ಷೆಗಳು ಹಾಗೂ ಆನ್ಲೈನ್ ತರಗತಿಗಳು ಮುಂದುವರೆಯಲಿವೆ ಎಂದು ದೆಹಲಿ ಸರ್ಕಾರ ಹೇಳಿದೆ. ಮಾಲಿನ್ಯ ಪ್ರಮಾಣ ಸುಧಾರಿಸಿದ್ದರಿಂದ ಶಾಲೆಗಳನ್ನು ಆರಂಭಿಸಿದ್ದೆವು. ಮತ್ತೊಮ್ಮೆ ಮಾಲಿನ್ಯ ಪ್ರಮಾಣ ಅಧಿಕವಾಗಿದೆ ಹಾಗಾಗಿ ಮುಂದಿನ ಆದೇಶದವೆರೆಗೆ ಶಾಲಾ ಕಾಲೇಜುಗಳನ್ನು ಮುಚ್ಚಲಾಗುವುದು ಎಂದು ದೆಹಲಿ ಪರಿಸರ ಖಾತೆ ಸಚಿವ ಗೋಪಾಲ್ ರಾಯ್ ಹೇಳಿದ್ದಾರೆ.
ಈ ಹಿಂದೆಯೂ ವಾರ್ನ್ ಮಾಡಿದ್ದ ಸುಪ್ರೀಂಕೋರ್ಟ್
ದೆಹಲಿ ವಾಯು ಮಾಲಿನ್ಯ ಕುರಿತು ಅರ್ಜಿ ವಿಚಾರಣೆ ನಡೆಸಿದ ಚೀಫ್ ಜಸ್ಟೀಸ್ ಎನ್ ವಿ ರಮಣ(NV Ramana), ಅರವಿಂದ್ ಕೇಜ್ರಿವಾಲ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಇದುವರೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳಿಂದ ಮಾಲಿನ್ಯ ನಿಯಂತ್ರಣಕ್ಕೆ ಬಂದಿಲ್ಲ. ಸರ್ಕಾರ ಇದಕ್ಕೆ ಪರಿಹಾರವನ್ನೂ ಸೂಚಿಸಿಲ್ಲ. ನಾಳೆ(ಡಿ.03) ದೆಹಲಿ ವಾಯು ಮಾಲಿನ್ಯ ಅರ್ಜಿ ವಿಚಾರಣೆ ನಡೆಸುತ್ತೇವೆ. ಇದರೊಳಗಡೆ ದೆಹಲಿ ಸರ್ಕಾರ(Delhi Governnment) ಮಾಲಿನ್ಯ ನಿಯಂತ್ರಣಕ್ಕೆ ಪರಿಹಾರ ಸೂಚಿಸಬೇಕು. ನಿಮ್ಮ ಕೈಯಿಂದ ಸಾಧ್ಯವಾಗುತ್ತಿಲ್ಲ ಎಂದಾದರೂ ಹೇಳಿ. ಅಥವಾ ನಿಮಗೆ ಆದೇಶ ನೀಡಿದರೆ ಮಾತ್ರ ಕೆಲಸ ಮಾಡಲು ಸಾಧ್ಯ ಎಂದಾದರೆ ಕೋರ್ಟ್ ಆದೇಶ ನೀಡಲು ಸಿದ್ಧ. ಇದ್ಯಾವುದು ಆಗದಿದ್ದರೆ ಹೇಳಿ, ನಿಮ್ಮ ಸರ್ಕಾರ ನಡೆಸಲು ಹೊಸ ಅಧಿಕಾರಿಯನ್ನು ನೇಮಕ ಮಾಡುತ್ತೇವೆ ಜಸ್ಟೀಸ್ ಎನ್ ವಿ ರಮಣ ದೆಹಲಿ ಸರ್ಕಾರಕ್ಕೆ ವಾರ್ನಿಂಗ್ ನೀಡಿದ್ದಾರೆ.
