Asianet Suvarna News Asianet Suvarna News

Rajasthanದಲ್ಲಿ ಅದಾನಿ 65000 ಕೋಟಿ ರೂ. ಹೂಡಿಕೆ: ಕೈಗೆ ಬಿಜೆಪಿ ಟಾಂಗ್‌

ರಾಜಸ್ಥಾನದಲ್ಲಿ ಅದಾನಿ 65,000 ಕೋಟಿ ರೂ. ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ. ಅದಾನಿ ಅವರ ಪಕ್ಕದಲ್ಲೇ ಗೆಹ್ಲೋಟ್‌ ಕುಳಿತಿದ್ದರು. ಈ ಹಿನ್ನೆಲೆ ಕಾಂಗ್ರೆಸ್‌ ಪಕ್ಷದ ವಿರುದ್ಧ ಬಿಜೆಪಿಗರು ಟಾಂಗ್‌ ನೀಡಿದ್ದಾರೆ. 

gautam adani announces Rs 65000 crore investment in rajasthan ash
Author
First Published Oct 8, 2022, 10:15 AM IST

ಜೈಪುರ: ವಿಶ್ವದ ನಂ.3 ಶ್ರೀಮಂತ ಉದ್ಯಮಿ ಗೌತಮ್‌ ಅದಾನಿ (Gautam Adani), ಮುಂದಿನ 5-7 ವರ್ಷದಲ್ಲಿ ರಾಜಸ್ಥಾನದಲ್ಲಿ (Rajasthan) 65000 ಕೋಟಿ ರೂ. ಬಂಡವಾಳ ಹೂಡುವುದಾಗಿ ಶುಕ್ರವಾರ ಇಲ್ಲಿ ನಡೆದ ಬಂಡವಾಳ ಹೂಡಿಕದಾರರ ಸಮಾವೇಶದಲ್ಲಿ ಘೋಷಣೆ ಮಾಡಿದ್ದಾರೆ. ಕಾರ್ಯಕ್ರಮದ ವೇದಿಕೆಯಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ (Ashok Gehlot) ಅವರ ಪಕ್ಕದಲ್ಲೇ ಗೌತಮ್‌ ಅದಾನಿ ಕುಳಿತುಕೊಂಡಿದ್ದರು. ಈ ನಡುವೆ ಅದಾನಿ ಅವರನ್ನು ತಮ್ಮ ಪಕ್ಕದಲ್ಲೇ ಕೂರಿಸಿಕೊಳ್ಳುವ ಮೂಲಕ, ರಾಹುಲ್‌ ಗಾಂಧಿ ಅವರಿಗೆ ಗೆಹ್ಲೋಟ್‌ ಟಾಂಗ್‌ ನೀಡಿದ್ದಾರೆ ಎಂದು ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ. 

ರಾಹುಲ್‌ ಸೇರಿದಂತೆ ಹಲವು ಕಾಂಗ್ರೆಸ್‌ (Congress) ನಾಯಕರು ಮೋದಿ ಕೇವಲ ಗೌತಮ್‌ ಅದಾನಿ ಮತ್ತು ಮುಖೇಶ್‌ ಅಂಬಾನಿ (Mukesh Ambani) ಪರ ಕೆಲಸ ಮಾಡುತ್ತಿದ್ದಾರೆ ಎಂದು ಹಲವು ಬಾರಿ ಟೀಕೆ ಮಾಡಿದ್ದರು. ಮತ್ತೊಂದೆಡೆ ಇತ್ತೀಚಿನ ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯಲ್ಲಿ (Congress Presidential Election) ಅಶೋಕ್‌ ಗೆಹ್ಲೋಟ್‌ಗೆ ಮುಖಭಂಗವಾಗಿತ್ತು. ಹೀಗಾಗಿ ರಾಹುಲ್‌ಗೆ ಟಾಂಗ್‌ ನೀಡಲು ಅದಾನಿಗೆ ಗೆಹ್ಲೋಟ್‌ ಹೆಚ್ಚಿನ ಮಣೆ ಹಾಕಿದ್ದಾರೆ ಎಂದು ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ.

ಇದನ್ನು ಓದಿ: Gautam Adani ಅಣ್ಣ ಈಗ ಭಾರತದ 6ನೇ ಶ್ರೀಮಂತ: ಆಸ್ತಿ ಮೌಲ್ಯ ವಿವರ ಹೀಗಿದೆ..

ಏಷ್ಯಾದ ಅತಿ ಶ್ರೀಮಂತ ವ್ಯಕ್ತಿಯೂ ಎನಿಸಿಕೊಂಡಿರುವ ಗೌತಮ್ ಅದಾನಿ ಶುಕ್ರವಾರ ರಾಜಸ್ಥಾನದಲ್ಲಿ ಮುಂದಿನ 5 ರಿಂದ 7 ವರ್ಷಗಳಲ್ಲಿ ಒಂದು ಮೆಗಾ 10,000 MW ಸೌರ ವಿದ್ಯುತ್ ಸಾಮರ್ಥ್ಯ ಸ್ಥಾಪಿಸಲು, ಸಿಮೆಂಟ್ ಸ್ಥಾವರ ವಿಸ್ತರಿಸಲು ಮತ್ತು ಜೈಪುರ ವಿಮಾನ ನಿಲ್ದಾಣವನ್ನು ನವೀಕರಿಸಲು 65,000 ಕೋಟಿ ರೂಪಾಯಿ ಹೂಡಿಕೆಯನ್ನು ಘೋಷಿಸಿದ್ದಾರೆ. ಜೈಪುರದಲ್ಲಿ ನಡೆದ ಇನ್ವೆಸ್ಟ್ ರಾಜಸ್ಥಾನ 2022 ಶೃಂಗಸಭೆಯಲ್ಲಿ ಮಾತನಾಡಿದ ಅವರು, ಅದಾನಿ ಸಮೂಹವು ಈಗಾಗಲೇ ರಾಜ್ಯದಲ್ಲಿ ಗಣನೀಯ ಅಸ್ತಿತ್ವವನ್ನು ಹೊಂದಿದೆ. ಇದು ಉಷ್ಣ ವಿದ್ಯುತ್ ಸ್ಥಾವರವನ್ನು ನಿರ್ವಹಿಸುತ್ತದೆ, ಸೋಲಾರ್ ಪಾರ್ಕ್ ಅನ್ನು ಸ್ಥಾಪಿಸಿದೆ ಮತ್ತು ರಾಜ್ಯದ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಕಲ್ಲಿದ್ದಲನ್ನು ಪೂರೈಸುತ್ತದೆ.
 
ಅದಾನಿ ಗ್ರೂಪ್ 10,000 ಮೆಗಾವ್ಯಾಟ್ ನವೀಕರಿಸಬಹುದಾದ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಸೇರಿಸಲು 50,000 ಕೋಟಿ ರೂ. ಹೂಡಿಕೆ ಮಾಡುತ್ತಿದೆ. "ಮುಂದಿನ 5 ವರ್ಷಗಳಲ್ಲಿ ಇದನ್ನು ಹಂತಹಂತವಾಗಿ ಕಾರ್ಯಾರಂಭ ಮಾಡಲಾಗುವುದು. ರಾಜಸ್ಥಾನದಲ್ಲಿ ವಿಶ್ವದ ಅತಿದೊಡ್ಡ ಗಾಳಿ-ಸೌರ ಹೈಬ್ರಿಡ್ ವಿದ್ಯುತ್ ಸ್ಥಾವರದ ವಾಣಿಜ್ಯ ಕಾರ್ಯಾಚರಣೆಯನ್ನು ಒಂದು ವಾರದ ಹಿಂದೆ ಸಾಧಿಸಿದ್ದೇವೆ’’ ಎಂದು ಗೌತಮ್ ಅದಾನಿ ಹೇಳಿದರು.

ಇದನ್ನೂ ಓದಿ: ಒಂದೇ ದಿನದಲ್ಲಿ 80 ಸಾವಿರ ಕೋಟಿ ಕಳೆದುಕೊಂಡ Jeff Bezos: ವಿಶ್ವದ 2ನೇ ಶ್ರೀಮಂತ ಸ್ಥಾನಕ್ಕೆ Gautam Adani ಮತ್ತಷ್ಟು ಹತ್ತಿರ
 
ಇದಲ್ಲದೆ, ಅಂಬುಜಾ ಸಿಮೆಂಟ್ಸ್ ಮತ್ತು ಎಸಿಸಿಯನ್ನು ಸ್ವಾಧೀನಪಡಿಸಿಕೊಂಡ ನಂತರ ಅದರ ಸಿಮೆಂಟ್ ಉತ್ಪಾದನಾ ಸಾಮರ್ಥ್ಯವನ್ನು ದ್ವಿಗುಣಗೊಳಿಸಲು ಅದಾನಿ ಗ್ರೂಪ್‌ ನೋಡುತ್ತಿದೆ. "ನಾವು ಈಗಾಗಲೇ ಮೂರು ಸಿಮೆಂಟ್ ಸ್ಥಾವರಗಳು ಮತ್ತು ಸುಣ್ಣದ ಕಲ್ಲು ಗಣಿಗಾರಿಕೆ ಆಸ್ತಿಗಳನ್ನು ಹೊಂದಿದ್ದರೂ, ನಮ್ಮ ಸಾಮರ್ಥ್ಯ ವಿಸ್ತರಣೆಯ ಗಮನಾರ್ಹ ಭಾಗವು ರಾಜಸ್ಥಾನದಲ್ಲಿ ಮುಂದುವರಿಯುತ್ತದೆ. ಈ ರಾಜ್ಯದಲ್ಲಿ ನಮ್ಮ ಸಿಮೆಂಟ್ ಉತ್ಪಾದನಾ ಸಾಮರ್ಥ್ಯವನ್ನು ದ್ವಿಗುಣಗೊಳಿಸಲು ಇನ್ನೂ 7,000 ಕೋಟಿ ರೂಪಾಯಿ ಹೂಡಿಕೆ ಮಾಡಲು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಅವರು ಹೇಳಿದರು.
 
ಈ ಮಧ್ಯೆ, ಅದಾನಿ ಗ್ರೂಪ್ ಜೈಪುರ ವಿಮಾನ ನಿಲ್ದಾಣದ ನಿರ್ವಾಹಕರೂ ಆಗಿದ್ದು, ಅದನ್ನು ವಿಸ್ತರಿಸಲಾಗುವುದು ಎಂದು ಗೌತಮ್ ಅದಾನಿ ಮಾಹಿತಿ ನೀಡಿದ್ದಾರೆ. 

Follow Us:
Download App:
  • android
  • ios