Weird News: ಆತ ದಾವೂದ್ ಇಬ್ರಾಹಿಂನ ಗ್ಯಾಂಗ್‌ನವನು. ಆಚೆ ಕಡೆ ಜನರನ್ನು ಕೊಲೆ ಮಾಡುತ್ತಿದ್ದವ ಈಗ ಜೈಲಿನಲ್ಲಿ ಸೊಳ್ಳೆ ಹೊಡೆಯುತ್ತಾ ಕುಳಿತಿದ್ದಾನೆ. ಈ ಜೈಲಿನಲ್ಲಿರುವ ಎಲ್ಲಾ ಖೈದಿಗಳ ಕತೆಯೂ ಇದೇ. ಒಬ್ಬರಾದ ಮೇಲೊಬ್ಬರು ಸೊಳ್ಳೆ ನೆಟ್ ಬಳಕೆಗೆ ಅನುಮತಿ ನೀಡುವಂತೆ ಅರ್ಜಿ ಸಲ್ಲಿಸುತ್ತಲೇ ಇರುತ್ತಾರೆ.
ಮುಂಬೈ: ಕುಖ್ಯಾತ ಗ್ಯಾಂಗ್‌ಸ್ಟರ್ ಒಬ್ಬ ನ್ಯಾಯಾಲಯಕ್ಕೆ ಕೊಂದ ಸೊಳ್ಳೆಗಳನ್ನು ಪ್ಲಾಸ್ಟಿಕ್ ಬಾಟಲಿಗಳಲ್ಲಿ ಹಾಕಿಕೊಂಡು ಬಂದ ಘಟನೆ ಮುಂಬೈನ ಕೋರ್ಟ್ ಒಂದರಲ್ಲಿ ನಡೆದಿದೆ. ಜೈಲಿನಲ್ಲಿ ಸೊಳ್ಳೆ ಕಾಟ ಯಾವ ಮಟ್ಟಿಗಿದೆ ಎಂದು ಕೋರ್ಟ್‌ಗೆ ಮನವರಿಕೆ ಮಾಡಲು ಗ್ಯಾಂಗ್‌ಸ್ಟರ್ ಎಜಾಜ್ ಲಕ್ಡಾವಾಲಾ ಯತ್ನಿಸಿದ್ದಾನೆ. ಜೈಲಿನಲ್ಲಿ ಸೊಳ್ಳೆ ನೆಟ್ ಬಳಸಲು ಅನುಮತಿ ಕೊಡುವಂತೆ ಮನವಿ ಸಲ್ಲಿಸಿದ್ದ. ಆದರೆ ಈ ಮನವಿಯನ್ನು ಕೋರ್ಟ್ ವಜಾಗೊಳಿಸಿದೆ. ಗುರುವಾರ ಸೆಷನ್ಸ್ ನ್ಯಾಯಾಲಯದಲ್ಲಿ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ. ಲಕ್ಡಾವಾಲಾ ವಿರುದ್ಧ ಹಲವಾರು ಕೊಲೆ, ದರೋಡೆ, ಅಪಹರಣ ಪ್ರಕರಣಗಳಿವೆ. ದಾವೂದ್ ಇಬ್ರಾಹಿಂ ತಂಡದಲ್ಲಿ ಲಕ್ಡಾವಾಲಾ ಗುರುತಿಸಿಕೊಂಡಿದ್ದ. ಈ ಕಾರಣದಿಂದಲೇ ಆತನನ್ನು ಕೋಕಾ ಕಾಯ್ದೆಯಡಿ ಬಂಧಿಸಲಾಗಿತ್ತು. ಜನವರಿಯಲ್ಲಿ 2020ರಲ್ಲಿ ಆತನನ್ನು ಬಂಧಿಸಿದ ನಂತರ ಅವನನ್ನು ತಲೋಜಾ ಜೈಲಿನಲ್ಲಿರಿಸಲಾಗಿದೆ.
ಇದನ್ನೂ ಓದಿ: ವಿಮೆ ಹಣಕ್ಕಾಗಿ ಗರ್ಭಿಣಿ ಪತ್ನಿಯನ್ನು ಪ್ರಪಾತಕ್ಕೆ ತಳ್ಳಿ ಕೊಂದಿದ್ದ ವ್ಯಕ್ತಿಗೆ 30 ವರ್ಷ ಜೈಲು!
2020ರಲ್ಲಿ ಬಂಧನವಾದ ನಂತರ ಲಕ್ಡಾವಾಲಾ ಸೊಳ್ಳೆ ನೆಟ್ ಬಳಸಲು ಜೈಲಾಧಿಕಾರಿಗಳು ಅನುಮತಿ ಕೊಟ್ಟಿದ್ದರು. ಆದರೆ ಈ ವರ್ಷದ ಮೇ ತಿಂಗಳಲ್ಲಿ ಸುರಕ್ಷತಾ ಕ್ರಮವಾಗಿ ನೆಟ್ ಬಳಕೆಯನ್ನು ನಿಷೇಧಿಸಲಾಗಿತ್ತು. ಅದಾದ ನಂತರ ಎಜಾಜ್ ಲಕ್ಡಾವಾಲಾ ಸೊಳ್ಳೆ ಹೊಡೆಯುವುದರಲ್ಲೇ ಬ್ಯುಸಿಯಾದ. ಹೊರಗೆ ಜನರನ್ನು ಕೊಲ್ಲುತ್ತಿದ್ದವನು ಸೊಳ್ಳೆ ಹೊಡೆಯುತ್ತ ಕುಳಿತ. ಸೊಳ್ಳೆ ಕಾಟದಿಂದ ಮಲಗಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಕೋರ್ಟ್‌ಗೆ ಲಕ್ಡಾವಾಲಾ ಅರ್ಜಿ ಸಲ್ಲಿಸಿದ್ದ.
ಕೋರ್ಟ್‌ನಲ್ಲಿ ಎಜಾಜ್ ಲಕ್ಡಾವಾಲಾ ಮನವಿಗೆ ಜೈಲಾಧಿಕಾರಿಗಳು ತೊಡಕು ಮಾಡಿದರು. ಸುರಕ್ಷತಾ ದೃಷ್ಟಿಯಿಂದ ನೆಟ್ ನೀಡಲು ಸಾಧ್ಯವಿಲ್ಲ ಎಂದರು. ಜೈಲಾಧಿಕಾರಿಗಳ ವಾದವನ್ನು ಒಪ್ಪಿದ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದರು. ಅರ್ಜಿ ವಜಾಗೊಳಿಸುವ ವೇಳೆ ಓಡೊಮಸ್ ಅಥವಾ ಬೇರಾವುದಾದರೂ ಸೊಳ್ಳೆ ರಿಪೆಲ್ಲೆಂಟ್ ಬಳಸುವಂತೆ ತಿಳಿಸಿದೆ. ಈ ಹಿಂದೆ ತಲೋಜಾ ಜೈಲಿನಲ್ಲಿರುವ ಹಲವಾರು ಖೈದಿಗಳು ಸಹ ಇದೇ ರೀತಿಯ ಅರ್ಜಿಯನ್ನು ಸಲ್ಲಿಸಿದ್ದರು. ಕೆಲ ಅರ್ಜಿಗಳನ್ನು ಮಾನ್ಯ ಮಾಡಿದ್ದ ನ್ಯಾಯಾಲಯ ಹೆಚ್ಚಿನ ಪಾಲಿನ ಅರ್ಜಿಯನ್ನು ವಜಾಗೊಳಿಸಿತ್ತು.
ಇದನ್ನೂ ಓದಿ: UDUPI: ಹಾವಿನ ವಿಷ ಚುಚ್ಚಿ ಮಡದಿಯನ್ನು ಕೊಂದ ಪ್ರಕರಣ, ಆರೋಪಿ ವೈದ್ಯ ಖುಲಾಸೆ
ಗ್ಯಾಂಗ್‌ಸ್ಟರ್ ಡಿ.ಕೆ. ರಾವ್‌ಗೆ ಸೊಳ್ಳೆ ನೆಟ್ ಬಳಸಲು ಕೋರ್ಟ್ ಅನುಮತಿ ನೀಡಿತ್ತು. ಆದರೆ ಬೇರೆ ಅರ್ಜಿಗಳನ್ನು ತಿರಸ್ಕರಿಸಿತ್ತು. ಎಲ್ಗಾರ್ ಪರಿಷತ್ ಗಲಭೆ ಪ್ರಕರಣದ ಆರೋಪಿಗಳಿಗೂ ನೆಟ್ ಬಳಸಲು ಅನುಮತಿ ನಿರಾಕರಿಸಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ಕಾರ್ಯಕರ್ತ ಗೌತಮ್ ನವಲ್ಖಾ ಕೂಡ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅವರ ಅರ್ಜಿಯ ವಿಚಾರಣೆ ಇನ್ನೂ ನಡೆದಿಲ್ಲ.
