ಚೆನ್ನೈ(ಮೇ.23): ತಮಿಳುನಾಡಿನಲ್ಲಿ ಮೇ 31ರ ತನಕ ಲಾಕ್‌ಡೌನ್ ವಿಸ್ತರಿಸಲಾಗಿದ್ದು, ಕಂಪ್ಲೀಟ್ ಲಾಕ್‌ಡೌನ್ ಮುಂದುವರಿಯಲಿದೆ. ಹಾಗೆಯೇ ದಿನಸಿ ಅಂಗಡಿ, ತರಕಾರಿ ಮಾರಾಟಕ್ಕೂ ಬ್ರೇಕ್ ಬೀಳಲಿದೆ. ಮೇ 24ರಿಂದ ಆರಂಭಿಸಿ ಒಂದು ವಾರದ ತನಕ ಯಾವುದೇ ವಿನಾಯಿತಿ ಇಲ್ಲದೆ ಲಾಕ್‌ಡೌನ್ ಇರಲಿದೆ ಎಂದು ಸಿಎಂ ಎಂಕೆ ಸ್ಟಾಲಿನ್ ಹೇಳಿದ್ದಾರೆ.

ತಮಿಳುನಾಡಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ 36 ಸಾವಿರ ತಲುಪಿದೆ. ಲಾಕ್‌ಡೌನ್ ಅವಧಿಯಲ್ಲಿ ದಿನಸಿ ಮತ್ತು ತರಕಾರಿ ಮಾರುವ ಅಂಗಡಿಗಳು ಕೂಡಾ ಮುಚ್ಚಿರಲಿವೆ ಎಂದು ಸಿಎಂ ತಿಳಿಸಿದ್ದಾರೆ. ವೈದ್ಯಕೀಯ ತಜ್ಞರ ಸಮಿತಿ ಕೊರೋನಾ ನಿರ್ಬಂಧಗಳನ್ನು ಇನ್ನಷ್ಟು ಸ್ಟ್ರಿಕ್ಟ್ ಮಾಡುವಂತೆ ಸಲಹೆ ನೀಡಿದೆ.

ತಮಿಳುನಾಡು ಪಾಸ್‌ ಪಡೆದು ಕರ್ನಾಟಕಕ್ಕೆ ಬಂದ್ರೆ ವಾಹನ ಸೀಜ್

ಶಾಸಕರೊಂದಿಗೆ ಸಭೆ ನಡೆಸಿದ ಸಿಎಂ ಸ್ಟಾಲಿನ್, ಲಾಕ್‌ಡೌನ್ ಹಿನ್ನೆಲೆ 22ರಂದು ರಾತ್ರಿ 9 ಗಂಟೆಯ ತನಕ ಅಂಗಡಿ ತೆರೆದಿರಲು ಅನುಮತಿಸಿದ್ದಾರೆ.  23 ರಾತ್ರಿ 9ರ ತನಕ ಬಸ್‌ ಓಡಾಟಕ್ಕೂ ಅನುಮತಿಸಲಾಗಿತ್ತು.

ಈ ಹಿಂದೆ ದಿನಸಿ, ತರಕಾರಿ ಖರೀದಿಗೆ ಅನುಮತಿಸಲಾಗಿತ್ತು. ಆದರೆ ಬಹಳಷ್ಟು ಜನ ಇದನ್ನು ದುರುಪಯೋಗಪಡಿಸಿದ್ದಾರೆ. ಅನಗತ್ಯ ರಸ್ತೆಯಲ್ಲಿ ತಿರುಗುತ್ತಿದ್ದಾರೆ.  ಪೊಲೀಸರ ಸೂಚನೆ ಇದ್ದರೂ ನಿಯಮ ಪಾಲಿಸುತ್ತಿಲ್ಲ ಎಂದಿದ್ದಾರೆ.